Friday, March 26, 2010

Abbe - A collection of short stories in Havigannada Language by Geetha Konkodi

Abbe - A collection of short stories in Havigannada Language by Geetha Konkodi
Aasare Publications, Konkodi House, Idkidu Post, Bantwala Taluk, Dakshina Kannada Dist.
Phones : 9480367856 and 9448488384

ಹವಿಗನ್ನಡದ ಸವಿ ಕತೆಗಳು

ಕೃತಿ : ಅಬ್ಬೆ
ಲೇಖಕಿ : ಗೀತಾ ಕೊಂಕೋಡಿ
ಪ್ರಕಾಶಕರು : ಆಸರೆ ಪ್ರಕಾಶನ, ಇಡ್ಕಿದು, ಬಂಟ್ವಾಳ ತಾಲ್ಲೂಕು
ಪುಟಗಳು : 60 ಬೆಲೆ : ರೂ. 50-00

ಭಾಷೆ, ಸಂಸ್ಕೃತಿ, ಅನುಭವ, ಉನ್ನತ ವಿಚಾರಗಳ ಸಮ್ಮಿಲನ, ಅನನ್ಯ ಕಥನ ಶೈಲಿಯಿಂದಾಗಿ ಮೊದಲ ಓದಿಗೇ ಮನಸೆಳೆಯುವ ಗೀತಾ ಕೊಂಕೋಡಿಯವರ ಕನ್ನಡದ ಉಪಭಾಷೆ ಹವ್ಯಕ ಕನ್ನಡದ (ಹವಿಗನ್ನಡ) ಸವಿಗತೆಗಳ ಸಂಕಲನ 'ಅಬ್ಬೆ' ಓದಿ ಮುಗಿಸಿದ ನಂತರವೂ ಗಾಢವಾಗಿ ಕಾಡುವ ಸಂಗೀತದ ಲಹರಿಯಂತೆ ಮನದಲ್ಲೆಲ್ಲೋ ಉಳಿದುಕೊಂಡುಬಿಡುತ್ತದೆ.
ಒಪ್ಪಕಞ್ಞ್, ಕ್ಷಮಯಾಧರಿತ್ರಿ, ಪರಿವರ್ತನೆ, ಪಾರ್ತಜ್ಜಿದೇ..ಗಂಗೆ ದನದೇ..., ಮೊದಲು ಮಾನವನಾಗು, ದೀಪದ ಬುಡಾಣ ಕಸ್ತಲೆ, ಮಾಣಿಗೊಂದು ಕೂಸು, ಅಬ್ಬೆ ಮಲೆಹಾಲು, ಮನೆ ದೇವರು, ಗಚ್ಚಿನಬಳೆ ಎಂಬ ಹತ್ತು ಸಣ್ಣ ಕಥೆಗಳು ಹತ್ತಾರು ಪುಟಗಳಲ್ಲಿ ಹೇಳುವಂಥಾದ್ದನ್ನು ಒಂದೆರಡೇ ಪುಟಗಳಲ್ಲಿ ಹಿಡಿದುಕೊಟ್ಟು, ಚೊಕ್ಕವಾಗಿ ಬೆಳಗುತ್ತವೆ. ಇಂಗ್ಲಿಷ್ ಕಾದಂಬರಿಗಾತರ್ಿ ಜೇನ್ ಆಸ್ಟೆನ್ಳಂತೆ ಪುಟ್ಟ ಹಳ್ಳಿಯ, ಪುಟ್ಟ ಕ್ಯಾನ್ವಾಸಿನ ಮೇಲೆ ವಿವಿಧ ಆಯಾಮಗಳುಳ್ಳ ಕಥೆಗಳ ಕುಸುರಿ ಕೆತ್ತನೆ ಮಾಡಿರುವುದು ಕನ್ನಡಕ್ಕೆ ಹವಿಗನ್ನಡದ ವಿಶಿಷ್ಟ ಕೊಡುಗೆ ಎಂದು ಹೇಳಬಹುದು. ಮೊದಲ ಓದಿಗೆ ಸ್ವಲ್ಪ ತಡವರಿಸುವಂತೆ ಕಂಡರೂ ಭಾವನೆಗಳ ಭರಪೂರದಲ್ಲಿ ಕೊಚ್ಚಿಕೊಂಡು ಹೋಗುವಂತಹ ಸೆಳೆತ ಇರುವ ಈ ಕಥೆಗಳು, ಪಾತ್ರಗಳು ತಮ್ಮ ಸರಳ, ಪ್ರಾಮಾಣಿಕ, ಶಿಸ್ತುಬದ್ಧ, ಗೌರವಯುತ ನಡವಳಿಕೆಗಳಿಂದಾಗಿ ನಮ್ಮ ಸುತ್ತಲೂ ಇರುವ ಜನರೇ ಪಾತ್ರಧಾರಿಗಳಾಗಿ ಬಂದಿರುವರೇನೋ ಎನಿಸುವಂತೆ ಮಾಡುತ್ತವೆ.
ಶಾಲೆಯ ದಣ್ಣಾಯಕರಂತೆ ವತರ್ಿಸುವ ಲೆಕ್ಕದ ಮೇಷ್ಟ್ರು, ಪರೀಕ್ಷೆಯಲ್ಲಿ ಚಿತ್ರಬರೆಯುತ್ತಾ ಕೂತ ಒಪ್ಪಕುಞ್ಞ್ಗೆ ಬೀಟೆ ಮರದ ದೊಣ್ಣೆಯಿಂದ ತಲೆಯಮೇಲೆ ಬಾರಿಸಿದ್ದರಿಂದ ಜೀವನ ಪರ್ಯಂತ ಬುದ್ಧಿಮಾಂಧ್ಯನಾಗುವಂತೆ ಮಾಡಿದರೂ ಹಳ್ಳಿಯ ಸರಳ ಜನ ಅದನ್ನೇನೂ ಅಪರಾಧ ಎಂದೆಣಿಸದೇ ಹುಡುಗನದೇ ತಪ್ಪು, ಅವನ ಪ್ರಾರಬ್ಧ ಎಂಬಂತೆ, ಬಂದದ್ದೆಲ್ಲವನ್ನೂ ಸ್ವೀಕರಿಸುವುದು ಓದಿದಾಗ ಕೃಷ್ಣಮೂತರ್ಿ ಪುರಾಣಿಕರ ತಮ್ಮಣ್ಣ ಮಾಸ್ತರರು ಕಥೆಯಲ್ಲಿ ಬರುವ ಮೇಷ್ಟ್ರೊಬ್ಬರ ಹೊಡೆತದಿಂದ ಸತ್ತುಹೋದ ಹುಡುಗನ ಅಜ್ಜಿಯೂ ಇದೇ ರೀತಿ ಸಮಾಧಾನ ಮಾಡುವ ಸನ್ನಿವೇಶ ಕಣ್ಣೆದುರು ಬಂದು ಮಕ್ಕಳ ಭವಿಷ್ಯವನ್ನೇ ಮೊಟಕುಮಾಡುವ ಈ ಮೇಷ್ಟ್ರುಗಳೆಷ್ಟು ನಿರ್ದಯರು ಎನಿಸುವಂತೆ ಮಾಡುತ್ತದೆ. ಅಂತಹವರು ಇನ್ನೂ ಇದ್ದಾರಲ್ಲ! ದೇವರೇ!
ಯಜಮಾನಿಕೆ ನಡೆಸುವ ಮಸ್ತಿಯಲ್ಲಿದ್ದಾಗ ಆಡಿದ ಮಾತು, ಮಾಡಿದ ಅನ್ಯಾಯ ಕೊನೆಗೆ ತನಗೇ ಮುಳುವಾದಾಗ, ಅನ್ಯಾಯಕ್ಕೊಳಗಾದವರನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಬಂದಾಗ, ಆರಡಿ ದೇಹ ಮೂರಡಿ ಮಾಡಿಕೊಂಡು ಖತಿಗೊಂಡ ಮುಖಹೊತ್ತು ಬಂದ ಮಾವನನ್ನು ಕ್ಷಮಿಸಿ ಆಶ್ರಯ ನೀಡುವ ಸೊಸೆ ಲತಾ ಎಲ್ಲಾ ಅರ್ಥದಲ್ಲೂ ಕ್ಷಮಯಾಧರಿತ್ರಿಯೇ ಆಗುವ ಕಥೆ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಒಂದು ಆಯಾಮವನ್ನು ತೋರಿಸಿದರೆ, ವಿಧವಾ ವಿವಾಹವನ್ನು ಪ್ರೋತ್ಸಾಹಿಸುವ ಮೊದಲು ಮಾನವನಾಗು ಮತ್ತು ವಿಚ್ಛೇದಿತಳಾದವಳಿಗೊಂದು ಬಾಳು ಕೊಡುವ ಮಾಣಿಗೊಂದು ಕೂಸು ಕಥೆಗಳು ಹಳ್ಳಿಗಳಲ್ಲಿ ಜೀವಂತವಾಗಿರುವ ವೈಚಾರಿಕ ಔನ್ನತ್ಯಕ್ಕೆ ಕನ್ನಡಿ ಹಿಡಿಯುತ್ತವೆ.
ಮನೆ ದೇವರು ಕಥೆ ಒಂದು ರೀತಿಯಲ್ಲಿ ಬಾಗ್ಬಾನ್ ಸಿನಿಮಾದ ಕಥೆಯಂತೆ ಅನ್ನಿಸಿದರೂ ಪರಿಹಾರ ಕಾಣದ ಸಂದಿಗ್ಧದಲ್ಲೇ ಉಳಿದು ಹೋಗುತ್ತದೆ. ಅಬ್ಬೆ ಮಲೆಹಾಲು ಮತ್ತು ಗಚ್ಚಿನ ಬಳೆಗಳು ತಂದೆ-ತಾಯಿ ಮತ್ತು ಮಕ್ಕಳ ನಡುವೆ ಸಂಬಂಧಗಳು ಹೇಗೆ ಬದಲಾಗುತ್ತಿವೆ, ಹಳಸುತ್ತಿವೆ, ವೃದ್ಧಾಶ್ರಮದ ಅನಿವಾರ್ಯತೆಗೆ ತೆರೆದುಕೊಳ್ಳುತ್ತಿವೆ ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತವೆ. ವಿದೇಶದಲ್ಲಿಯೇ ಇರಲಿ, ಸ್ವದೇಶದಲ್ಲಿಯೇ ಇರಲಿ ಹುಟ್ಟಿ ಬೆಳೆದ ಮನೆಯಿಂದ ದೂರ ಹೋದ ಮಕ್ಕಳು ತಮ್ಮ ಹಿಂದಿನ ಮೆಟ್ಟಿಲುಗಳನ್ನು ಮರೆಯುವ ವಿದ್ಯಮಾನ ಈ ಮೂರೂ ಕಥೆಗಳಲ್ಲಿದ್ದರೆ ವಿದೇಶದಲ್ಲಿದ್ದರೂ ಸ್ವದೇಶೀ ಸಂಸ್ಕೃತಿಯನ್ನು ಮರೆಯದ ಮಾಲಾ, ಸ್ವದೇಶದಲ್ಲಿದ್ದರೂ ವಿದೇಶೀ ವ್ಯಾಮೋಹಕ್ಕೆ ಬಲಿಯಾದಂತಿದ್ದ ರತ್ನ, ಕೊನೆಗೆ ಮನೆ, ಜನ, ಆಚಾರ, ವಿಚಾರ, ಸಂಸ್ಕೃತಿಯ ಅರ್ಥ ತಿಳಿದುಕೊಂಡು ಬದಲಾಗುವ ಸನ್ನಿವೇಶವನ್ನು ಪರಿವರ್ತನೆ ಕಥೆ ತೆರೆದಿಡುತ್ತದೆ.
ನಿರುಪಯುಕ್ತ ಅನ್ನಿಸಿದ್ದೆಲ್ಲವನ್ನು ಪರಿತ್ಯಜಿಸುವ ಇಂದಿನ ಪೀಳಿಗೆಯವರು ವೃದ್ಧರೂ, ರೋಗಿಷ್ಠರೂ, ಒದ್ದುಕೊಂಡ ಆಕಳು, ಕಾಯಿಲೆ ಬಿದ್ದ ಜಾನುವಾರುಗಳು ಎಲ್ಲವೂ ಹೊರೆಯಾಗಿವೆ ಎನಿಸುತ್ತಿದ್ದರೂ ಯಾವುದೋ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದಾರೆ. ಎಲ್ಲೋ ಅಪರೂಪಕ್ಕೆ ಹೊಂದಿಕೊಂಡೂ ಹೋಗುತ್ತಿದ್ದಾರೆ! ಪಾರ್ತಜ್ಜಿದೇ..ಗಂಗೆ ದನದೇ... ಕಥೆ ಹೊಸತನ್ನು ಸ್ವಾಗತಿಸುವಾಗ, ಹಳೆಯದನ್ನು ಬಿಸಾಡಲು ಉದ್ಯುಕ್ತರಾದಾಗ ಅವೆಲ್ಲವನ್ನೂ ಗ್ರಹಿಸಿದಂತೆ ನೆಲಹಿಡಿದ ಗಂಗೆ ದನ ಕೊನೆ ಉಸಿರು ಎಳೆದು ಪ್ರಸಂಗ ಸುಖಾಂತವಾಗಿಸಿದಂತೆ ಕಂಡರೂ ಅದನ್ನೇ ನಂಬಿಕೊಂಡಿದ್ದ ಪಾರ್ತಜ್ಜಿಯ ಜೀವಕ್ಕೆ ಏನನ್ನೋ ಕಳಕೊಂಡ ಭಾವವನ್ನು ಉಳಿಸಿಬಿಡುತ್ತದೆ. ಆಪತ್ತಿಗಾದ ಕಾಮಧೇನುವನ್ನು ಕೊನೆಗಾಲದಲ್ಲಿ ಯಾರಿಗಾದರೂ ಕೊಟ್ಟುಬಿಡುವ ಜವ್ವನಿಗರ ಮನೋಭಾವ ಜಿಗುಪ್ಸೆ ಹುಟ್ಟಿಸುತ್ತದೆ. ಇವೆಲ್ಲಕ್ಕೂ ಮದ್ದುಕೊಡುವ ಸಾಮಥ್ರ್ಯವುಳ್ಳ ಗುರುಮನೆ, ಗುರುಪೀಠ ಏನೆಲ್ಲಾ ಪರಿವರ್ತನೆಯ ಮಾತುಗಳನ್ನು ಆಡಿದರೂ ಜನಜೀವನದಲ್ಲಿ ಹಾಸುಹೊಕ್ಕಾದ ಮೂಢನಂಬಿಕೆ, ನಡಾವಳಿಗಳನ್ನು ದೂರಮಾಡುವಲ್ಲಿ ಸೋಲುತ್ತವೆ. ದೀಪದ ಬುಡಾಣ ಕಸ್ತಲೆ ಗುರು ಮಂತ್ರಾಕ್ಷತೆಯ ಮಹಿಮೆಯನ್ನು ತೋರಿಸಲೆಂಬಂತೆ ಪ್ರಾಸ್ತಾವಿಕವಾಗಿ ಬಂದರೂ ಯಾವುದೇ ಪರಿಣಾಮ ಬೀರುವಲ್ಲಿ ಸಫಲವಾಗಿದೆ ಎನಿಸುವುದಿಲ್ಲ. ಆ ಒಂದು ಆಯಾಮವೂ ಸಮಾಜಕ್ಕಿದೆ ಎನ್ನಿಸುವಷ್ಟಕ್ಕೇ ಸೀಮಿತವಾಗಿಬಿಡುತ್ತದೆ.
ಮೊದಲ ನೋಟಕ್ಕೆ ಇಲ್ಲಿನ ಕಥೆಗಳನ್ನು ಓದುವುದಕ್ಕೆ ಭಾಷೆಯ ಅಡಚಣೆ ಅನ್ನಿಸಿದರೂ ಒಮ್ಮೆ ಶುರು ಮಾಡಿದ ಮೇಲೆ ಭಾವನೆಗಳೇ ಮೇಲ್ಗೈ ಸಾಧಿಸುವುದರಿಂದ ಸರಳವಾಗಿ ಅರ್ಥವಾಗುತ್ತವೆ. ತೀವ್ರ ಭಾವಾವೇಶದ ಸನ್ನಿವೇಶಗಳಿಂದ ಛಿದ್ರಗೊಳ್ಳದಂತೆ, ನವಿರಾಗಿ, ಹನಿಗಣ್ಣಾಗಿಸುವಷ್ಟು ಮನದಾಳಕ್ಕೆ ಇಳಿಯುವ ಸಾಮಥ್ರ್ಯ ಇಲ್ಲಿನ ಕಥೆಗಳಲ್ಲಿದೆ. ಮಧುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹರಿಕೃಷ್ಣ ಭರಣ್ಯರು ಕನ್ನಡ ಮತ್ತು ಹವಿಗನ್ನಡ ಎರಡರಲ್ಲೂ ಬರೆದ ಮುನ್ನುಡಿ ಇಡೀ ಕಥಾ ಸಂಕಲನಕ್ಕೆ ಕಲಶವನ್ನಿಟ್ಟರೆ ಹಿರಿಯ ಕಥೆಗಾತರ್ಿ ಗಂಗಾ ಪಾದೇಕಲ್ ಚೆಂದದ ಬೆನ್ನುಡಿ ಬರೆದು ತಂಗಿ ಗೀತಾ ಕೊಂಕೋಡಿಯ ಬೆನ್ನುತಟ್ಟಿದ್ದಾರೆ. ಈ ಅಪರೂಪದ ಕಥಾ ಸಂಕಲನಕ್ಕೆ ಅಗತ್ಯ ಪ್ರಚಾರ ಮತ್ತು ಪ್ರೋತ್ಸಾಹ ದೊರೆಯಲಿ ಎಂದು ಆಶಿಸೋಣ.

ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ
ವಿಳಾಸ: ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ - 577 501 ಫೋ: 9448589089No comments: