Monday, March 18, 2013

Dairy Doctor Hori Master by Dr Ganesh Neelesara - Book Introduction in Vijayavani 18 March 2013


Dairy Doctor Hori Master by Dr Ganesh Neelesara - Book Introduction in Vijayavani 18 March 2013
Book on Experiences of a Veterinary Doctor James Harriet
Publisher - Bhoomi Books, 150, 1st Main Road, Sheshadripuram, Bangalore - 560 020
Ph.: 08023565885  Mob. 9449177628   Price Rs.120
Images / Drawings by Shwetha Adukala   Cover Page by Nagesh Hegde

ಪಶುವೈದ್ಯಕೀಯ ಲೋಕದ ಹಸುರು ಹೊನ್ನು - ಡೇರಿ ಡಾಕ್ಟರ್ ಹೋರಿ ಮಾಸ್ಟರ್


ಕೃತಿ            : ಡೇರಿ ಡಾಕ್ಟರ್ ಹೋರಿ ಮಾಸ್ಟರ್ (ಪಶುವೈದ್ಯರ ನೈಜ ಅನುಭವ ಕುರಿತ ಜೇಮ್ಸ್ ಹೆರಿಯಟ್ ಕಥಾನಕ)
ಮೂಲ ಲೇಖಕರು    : ಜೇಮ್ಸ್ ಹೆರಿಯಟ್
ಕನ್ನಡ ರೂಪಾಂತರ    : ಡಾ. ಗಣೇಶ್ ಎಂ. ನೀಲೇಸರ
ಪ್ರಕಾಶಕರು        : ಭೂಮಿ ಬುಕ್ಸ್, 150/1ನೇ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು  
ಪ್ರಕಟಣೆಯ ವರ್ಷ     : 2012 ಮೊದಲ ಮುದ್ರಣ,
ಪುಟಗಳು        : 160
ಬೆಲೆ            : 120
ಮುಖಪುಟ ವಿನ್ಯಾಸ    : ನಾಗೇಶ ಹೆಗಡೆ
ರೇಖಾಚಿತ್ರಗಳು        : ಶ್ವೇತಾ ಆಡುಕಲಾ


ವೆಟಿಕೊ (ಪಶುವೈದ್ಯ ವಿದ್ಯಾಥರ್ಿ) ಸುಮಂತ್ ತರಗತಿಗಳನ್ನು ಮುಗಿಸಿ ಮನೆಗೆ ಬಂದಾಗ ಅವನ ಏಪ್ರನ್ ತುಂಬಾ ಹತ್ತಿರುವ ಧೂಳು, ಕೆಸರು, ಗಲೀಜು ಪ್ರಾಣಿಗಳೊಂದಿಗೆ ಅವನ ಕುಸ್ತಿಯನ್ನು ಸಾರಿ ಹೇಳುತ್ತವೆ.  ಬಿಳಿ ಏಪ್ರನ್ ಇಸ್ತ್ರಿ ಮಾಡಿದಾಗಷ್ಟೇ ಬೆಳ್ಳಗಿರುತ್ತೆ.  ಪ್ರಾಕ್ಟಿಕಲ್ಸ್ ಮುಗಿಸಿ ಬಂದಾಗ ಕಂದು, ಹಳದಿ, ಹಸಿರು, ಮಣ್ಣು, ಕೆಸರು ಎಲ್ಲ ಬಣ್ಣಗಳ ಮಿಶ್ರಣ ಆಗಿರುತ್ತೆ.  ಆ ಬಣ್ಣಗಳಷ್ಟೇ ಅವನ ಅನುಭವಗಳೂ ಬಣ್ಣಬಣ್ಣವಾಗಿರುತ್ತವೆ! 
    ಪಪ್ಪು, ಇವತ್ತು ಹಂದಿ ಮರಿಗಳನ್ನು ತೊಳೆದು, ಔಷಧಿ ಹಾಕಿದೆ ಕಣೋ, ಅಂತಲೋ, ಅಮ್ಮ, ಇವತ್ತು ಮೊಲದ ಮರಿಗಳನ್ನು ಸ್ವಚ್ಛಮಾಡಿದೆ.  ಕೋಳಿ ಪಿಳ್ಳೆಗಳೀಗೆ ಡ್ರಾಪ್ಸ್ ಹಾಕಿದೆ, ಅಂತಲೋ ಹೇಳುತ್ತಲೇ ಇರುತ್ತಾನೆ.  ಒಂದು ದಿನ ತಲೆಯಿಂದ ಕಾಲಿನವರೆಗೆ ಕೆಸರಿನಲ್ಲಿ ಅದ್ದಿತೆಗೆದ ರೂಪ ಇಟ್ಟುಕೊಂಡು ಬಂದು, ಪಪ್ಪು, ಇವತ್ತು ಕುರಿ, ಮೇಕೆ, ಟಗರುಗಳ ಅಳತೆ ನೋಡಿ, ತೂಕ ಹಾಕಿದ್ವೀ ಕಣೋ.  ಎಲ್ರೂ ಸಣ್ಣ ಸಣ್ಣ ಗಾತ್ರದವುಗಳನ್ನು ಬೇಗ ಬೇಗ ತೆಗೆದುಕೊಂಡು, ಅಳತೆ ಮಾಡಿಬಿಟ್ರು.  ಒಂದು ದೊಡ್ಡ ಟಗರು, ಸುಮಾರು 48 ಕಿಲೋ ತೂಕದ್ದು.  ಅದನ್ನು ಹಿಡೀಲಿಕ್ಕೆ ಬಹಳ ಕಷ್ಟ ಆಯ್ತು.  ಕೊನೆಗೆ ಡಬ್ಲ್ಯುಡಬ್ಲ್ಯುಎಫ್ ಫೈಟಿಂಗ್ ಥರ ಅದರ ಜೊತೆ ಗುದ್ದಾಡಿ, ಎತ್ತಿಕೊಂಡು ಬಂದು, ತೂಕ ಹಾಕಿಯೇ ಬಿಟ್ಟೆ ಕಣೋ, ಅಂತ ತನ್ನ ಸಾಹಸ ಕೊಚ್ಚಿಕೊಂಡ!
    ಪ್ರಾಣಿಗಳ ಜೊತೆ ಒಡನಾಟ ನಿಜಕ್ಕೂ ಆಸಕ್ತಿ ಹುಟ್ಟಿಸುವಂಥದ್ದು.  ಒಂದೊಂದು ಪ್ರಾಣಿಯೂ ಒಂದೊಂದು ಸ್ಪೆಸಿಮನ್.  ಒಂದರಂತೆ ಮತ್ತೊಂದು ಇರುವುದು ಅಪರೂಪವೇ.  ಅವುಗಳ ಆರೈಕೆ ಅವುಗಳ ಒಡೆಯರ ತೃಪ್ತಿ ಎರಡೂ ಒಂದಕ್ಕೊಂದು ತಳಕು ಹಾಕಿಕೊಂಡೇ ಇರುತ್ತವೆ.  ಭಾರತದಲ್ಲಿ ಪಶುವೈದ್ಯಕೀಯ ರಂಗ ಇನ್ನೂ ಅರಳುವ ಸ್ಥಿತಿಯಲ್ಲಿಯೇ ಇದೆ.  ಇರುವ ನಾಲ್ಕು ಕಾಲೇಜುಗಳಿಂದ ಹೊರಬರುವ ಬೆರಳೆಣಿಕೆಯ ಡಾಕ್ಟರುಗಳು, ಪಶುವೈದ್ಯ ಸಹಾಯಕರು, ಪಶುವೈದ್ಯ ಇಲಾಖೆಯ ಸಿಬ್ಬಂದಿಯ ಜೊತೆ ಹಾಲು ಒಕ್ಕೂಟಗಳಿಂದ ನೇಮಕಗೊಂಡಿರುವ ಸಿಬ್ಬಂದಿ ತಮ್ಮ ನಿತ್ಯದ ರುಟೀನ್ ಟ್ರೀಟ್ಮೆಂಟ್ಗಳ ತಲೆಬಿಸಿಗಳಲ್ಲಿ ಪಶುಗಳ ಜೊತೆಗೆ ಒಡನಾಡುವ ಅಪೂರ್ವ ಅವಕಾಶದ ಸವಿಯನ್ನು ಕಳೆದುಕೊಳ್ಳುತ್ತಿದ್ದಾರೆಂದೇ ಹೇಳಬೇಕು.  ಅಲ್ಲೊಂದು ಇಲ್ಲೊಂದು ಅಪವಾದಗಳಿರಬಹುದಾದರೂ ಪಶುಗಳ ಆರೈಕೆಯ ಸವಿನೆನಪುಗಳನ್ನು ಹಂಚಿಕೊಳ್ಳುವವರು ಇಲ್ಲವೆಂದರೆ ಅತಿಶಯೋಕ್ತಿಯಲ್ಲ.
    ಇಂಗ್ಲೆಂಡಿನ ಪಶುವೈದ್ಯ ಜೇಮ್ಸ್ ಹೆರಿಯಟ್ (ಜೇಮ್ಸ್ ಆಲ್ಫ್ರೆಡ್ ವೈಟ್) ತನ್ನ ಡೈರಿಯಲ್ಲಿ ಬರೆದಿಟ್ಟುಕೊಂಡ ಅಪೂರ್ವ ಅನುಭವಗಳನ್ನು ಆಲ್ ಕ್ರೀಚರ್ಸ್ ಗ್ರೇಟ್ ಅಂಡ್ ಸ್ಮಾಲ್ ಪುಸ್ತಕರ ರೂಪದಲ್ಲಿ ಪ್ರಕಟಿಸಿದ ನಂತರ ಜನಸಾಮಾನ್ಯರಿಗೂ ಪಶುವೈದ್ಯನ ಅನುಭವಗಳು ಆತ್ಮೀಯವಾಗತೊಡಗಿದವು.   ಪಶುವೈದ್ಯರಷ್ಟೇ ಅಲ್ಲದೇ ಸಾಮಾನ್ಯ ಓದುಗರನ್ನೂ ಸಹಿತ ಪ್ರಾಣಿಗಳ ಲೋಕಕ್ಕೆ ಕೊಂಡೊಯ್ಯುವ ಸಾಮಥ್ರ್ಯವಿರುವುದು ಈತನ ಕಥೆಗಳ ವಿಶೇಷ ಎನ್ನುವ ಬೆರಗುಗಣ್ಣಿನಿಂದ ಹೆರಿಯಟ್ನ ಬರಹಗಳನ್ನು ಓದಿದ ಡಾ. ಗಣೇಶ್ ಎಂ. ನೀಲೇಸರ ಆ ಕಥೆಗಳಲ್ಲಿ ಕೆಲವನ್ನು ಆಯ್ದು, ಕನ್ನಡದ ವಾತಾವರಣಕ್ಕೆ ಹೊಂದುವಂತೆ ಮಾರ್ಪಡಿಸಿ, ಮೂಲದ ಸಾರವನ್ನು ಯಥಾವತ್ತಾಗಿ, ಆತ್ಮೀಯವಾಗಿ ನಿರೂಪಿಸಿದ್ದಾರೆ.   ಇದು ಪಶುವೈದ್ಯಕೀಯ ಲೋಕದ ಹಸುರು ಹೊನ್ನು ಎಂಬ ಬೆನ್ನುಡಿಯ ಮಾತು, ಬಿ.ಜಿ.ಎಲ್. ಸ್ವಾಮಿಯವರು ಅನಾವರಣಗೊಳಿಸಿದ ಸಸ್ಯಲೋಕದ ಕೌತುಕ ಪ್ರಾಣಿಪ್ರಪಂಚದಲ್ಲಿಯೂ ಕಾಣಿಸಲು ಸಾಧ್ಯ ಎನ್ನುವುದಕ್ಕೆ ಈ ಕೃತಿ ಸಾಕ್ಷಿಯಾಗುತ್ತದೆ.  ಹೆರಿಯಟ್ ಹರಿಯಾಗಿದ್ದರೆ, ಅವನ ಬಾಸ್ ಪ್ರಜಾಪತಿಯಾಗಿದ್ದಾರೆ ಇಲ್ಲಿ! ಇಂಗ್ಲೆಂಡಿನ ಕ್ರಿಶ್ಚಿಯನ್ ಹೆಸರುಗಳೆಲ್ಲಾ ಕನ್ನಡಕ್ಕೆ ವಲಸೆ ಬಂದು ಗುಡ್ಡದಮನೆಯ ಭರಮಣ್ಣ, ಮಾವಿನಕೆರೆಯ ಅಣ್ಣ-ತಮ್ಮಂದಿರು, ಕಿರೀಟಿ, ದೇವಪ್ಪ, ರಾಜಪ್ಪ,  ವಾಸು, ಈಶ್ವರ, ಶೇಷಪೂಜಾರಿ, ಹಂಪಣ್ಣ, ಧಾಕಪ್ಪ, ಜಲಜಮ್ಮ, ಮಾಲಿನಿ ಶರ್ಮ, ನಳಿನಿ, ಲೀನಾ, ಕರಿಯಪ್ಪ, ಭರಮಣ್ಣ, ಹೊನ್ನಪ್ಪ, ಸೋಮಶೇಖರ, ಭೀಮೇಶ, ಶಾಣಪ್ಪ, ಚಂದಪ್ಪ, ನಾಥಪ್ಪ, ಕಪಾಲಿ, ರೈ, ಸೋಮಯ್ಯ ಇತ್ಯಾದಿ ಕನ್ನಡದ ಕಣ್ಮಣಿಳಾಗಿವೆ!
    ಎಮ್ಮೆಯ ಬೆನ್ನಿಗೆ ತಣ್ಣೀರು ಎಂಬ ಲೇಖಕರ ಸ್ವಂತ ಅನುಭವಗಳ ನಿರೂಪಣೆಯಿಂದ ಆರಂಭಗೊಳ್ಳುವ ಇಪ್ಪತ್ತು ಕಥೆಗಳ ಈ ರಸಗವಳದ ಭಾಷೆ, ಶೀಷರ್ಿಕೆ ಮತ್ತು ಚಿತ್ರಕಲಾ ಪರಿಷತ್ತಿನ ವಿದ್ಯಾಥರ್ಿನಿ ಶ್ವೇತಾ ಆಡುಕಲಾ ರಚಿಸಿರುವ ಚಿತ್ರಗಳು ಘಟನಾವಳಿಗಳನ್ನು ಕಣ್ಣಿಗೆ ಕಟ್ಟಿಸುವಂತಿವೆ. ನಾಗೇಶ್ ಹೆಗಡೆಯವರ ಮುಖಪುಟ ವಿನ್ಯಾಸವೂ ಗ್ರಾಮೀಣ ಪರಿಸರಕ್ಕೆ ಒಪ್ಪುವಂತಿದೆ.  ಮೇಲುನೋಟಕ್ಕೆ ಇದು ಪಶುವೈದ್ಯರ ನಿತ್ಯ ಅನುಭವಗಳ ನಿರೂಪಣೆಯಂತಿದ್ದರೂ ಆಂತರ್ಯದಲ್ಲಿ ಮಾನವ ಸ್ವಭಾವ, ಪ್ರಾಣಿಗಳ ಪ್ರೀತಿ, ನೋವು-ನಲಿವು, ಗ್ರಾಮೀಣ ಪರಿಸರ, ಜೀವನ, ಆಥರ್ಿಕ ಸ್ಥಿತಿ ಮುಂತಾದವುಗಳನ್ನು ತಿಳಿಸುವ ಸಮಾಜೋ-ಸಾಂಸ್ಕೃತಿಕ ಕಥಾನಕವಾಗಿದೆ.
    ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿಯದ್ದು.  ಮಾರ್ಜಲದ ಜಲಜಮ್ಮನಂತಹ ಜಿಪುಣ ವ್ಯಕ್ತಿ, ಕ್ರಿಸ್ಮಸ್ ಬೆಳ್ಳಂಬೆಳಗ್ಗೆ ಎಬ್ಬಿಸಿ ತೊಂದರೆಕೊಟ್ಟದ್ದಲ್ಲದೆ ಮಿಲ್ಕ್ಫೀವರ್ಗೆ ಸಕಾಲದಲ್ಲಿ ಚಿಕಿತ್ಸೆ ಕೊಟ್ಟದ್ದಕ್ಕಾಗಿ ಥ್ಯಾಂಕ್ಸ್ ಹೇಳದ ಗುಡ್ಡದಮನೆಯ ಭರಮಣ್ಣ,   ತೇಜೋವಧೆ ಮಾಡುವುದನ್ನೇ ಕಸುಬಾಗಿಸಿಕೊಂಡ ಸತ್ಯಪಾಲ, ಪಶು ಪ್ರದರ್ಶನಗಳಲ್ಲಿ ಬಹುಮಾನ ಗೆಲ್ಲಲೆಂದೇ ಕಳ್ಳ ಮಾರ್ಗಗಳನ್ನು ಅನುಸರಿಸುವ ಪ್ರಾಣಿಗಳ ಒಡೆಯರು ಒಂದೆಡೆ ಇದ್ದರೆ ಡೇರಿ ಫಾಮರ್ಿನ ಕನಸು ಕಟ್ಟಿಕೊಂಡು ನಗರದಿಂದ ಗ್ರಾಮಕ್ಕೆ ಬರುವ ಕಿರೀಟಿಯಂತಹ ತರುಣರು ರೋಗಗ್ರಸ್ಥ ಹಸುಗಳನ್ನು ನಿಭಾಯಿಸಲಾಗದೇ ಕನಸನ್ನೇ ಮಾರಿಕೊಳ್ಳುವುದು, ನಾಯಿ ಸಾಕಿ, ಅದರ ಆರೈಕೆಗೆ ಕಷ್ಟಪಟ್ಟು ದುಡಿದು, ದುಷ್ಟ ಹವ್ಯಾಸಗಳಿಂದ ಮುಕ್ತನಾದ ವಾಸು ನಾಯಿ ಕಾಯಿಲೆಗೆ ಬಲಿಯಾದಾಗ ಮರಳಿ ದುಷ್ಟತಕ್ಕೆ ಇಳಿಯುವುದು, ಕೈಗುಣದ ಮೇಲೆ ಅತಿಯಾದ ವಿಶ್ವಾಸ ಇರಿಸಿ ಪ್ರತಿಬಾರಿಯೂ ಅತಿ ಎನಿಸುವಷ್ಟು ಹೊಗಳುವ ದೇವಪ್ಪ, ಮುದ್ದು ಬೆಕ್ಕಿನ ಉಪಸ್ಥಿತಿಯಿಂದಾಗಿಯೇ ಆತ್ಮವಿಶ್ವಾಸದಿಂದ ವ್ಯವಹಾರ ನಡೆಸುವ, ಆ ಬೆಕ್ಕು ಕಾಯಿಲೆಗೆ ತುತ್ತಾಗಿ ಸಾಯವ ಸ್ಥಿತಿಗೆ ಬಂದಾಗ ಆತ್ಮವಿಶ್ವಾಸವೇ ಕುಸಿದರೂ ಮತ್ತೆ ಬೆಕ್ಕು ಗುಣಮುಖವಾದಾಗ ಆತ್ಮವಿಶ್ವಾಸ ಗರಿಗೆದರಿ ಚುರುಕಿನಿಂದ ವ್ಯವಹರಿಸುವ ಜéಪಾಠಿ ಕಾಂಡಿಮೆಂಟ್ಸ್ನ ಮಾಲಿಕ ರಾಜಯ್ಯನಂತಹವರೂ ಇಲ್ಲಿ ಇದ್ದಾರೆ. 
    ಪದೇ ಪದೇ ಕಾಯಿಲೆ ಬೀಳುತ್ತಿದ್ದ ತನ್ನ ವೀಣೆ ಹಸುವನ್ನು ಕಸಾಯಿ ಖಾನೆಗೆ ಮಾರಲು ಸಿದ್ಧನಾಗುವ ಧಾಕಪ್ಪ ಹಸುವನ್ನು ಉಸ್ಮಾನ್ ಸಾಬನೊಂದಿಗೆ ಕಳುಹಿಸಿಕೊಟ್ಟರೂ ಅದು ಸ್ವಲ್ಪಹೊತ್ತು ಬಿಟ್ಟು ಮತ್ತೆ ಧಾಕಪ್ಪನ ಕೊಟ್ಟಿಗೆಗೇ ಮರಳಿದ್ದು ನೋಡಿ ಪ್ರೀತಿ ಉಕ್ಕಿಬಂದು, ಈ ಹಸು ಇಲ್ಲೇ ಇರುತ್ತೆ.  ನೀ ಕೊಡೋ ಹಣ ನಂಗೆ ಬೇಡ.  ಈ ಹಸು ಇನ್ನು ನಂಗೇನೂ ಕೊಡ್ಬೇಕಾಗಿಲ್ಲ ಎಂದು ಹೇಳಿ ಅದರ ಭುಜ ಅಪ್ಪಿಕೊಂಡು ಮೈಸವರತೊಡಗುವುದು ಮಾನವೀಯತೆಗೆ ಹಿಡಿದ ಕನ್ನಡಿಯಾದರೆ ಥೇಟ್ ನಸರ್ಿನಂತೆಯೇ ಪ್ರಾಣಿಗಳ ಆರೈಕೆ ಮಾಡುವ ಸೋಮಶೇಖರರ ನಾಯಿ ಟ್ರೂಡಿ (ನಾಯಮ್ಮ ನರ್ಸಮ್ಮ) ಅಪರೂಪವಾದರೂ ನಿರ್ಮಲವಾದ ಪ್ರೀತಿಯನ್ನು ತೋರಿಸಿ, ಜೀವನ ಮೌಲ್ಯಗಳು ಪ್ರಾಣಿ ಮತ್ತು ಮನುಷ್ಯ ಲೋಕದಲ್ಲಿ ಏಕಪ್ರಕಾರವಾಗಿದೆ ಎನ್ನುವುದನ್ನು ಸಾರುತ್ತವೆ.
        ಜೋಕ್ ಮಾಡಿ ಪಶುವೈದ್ಯರನ್ನು ಗೇಲಿಮಾಡುವ ಸೋಮಯ್ಯನನ್ನೇ ಪೇಚಿಗೆ ಸಿಲುಕಿಸಿ ಅವನ ತಂತ್ರವನ್ನೇ ಪ್ರತಿ ತಂತ್ರವಾಗಿಸಿ ಶಾಕ್ ಕೊಡುವ ಜ್ಯೂನಿಯರ್ ವೈದ್ಯ ಕದಂ (ಒಳ್ಳೇಜೋಕ್ನಿಂದ ಮನಸ್ಸು ಫ್ರೆಶ್ ಆಗುತ್ತೆ), ಪ್ರಾಣಿಗೆ ಶುಶ್ರೂಷೆ ಮಾಡುವ ಸಂದರ್ಭದಲ್ಲಿ ಕುದುರೆಯಿಂದ ಒದೆ ತಿನ್ನುವ, ಹೋರಿಯಿಂದ ಗುದ್ದಿಸಿಕೊಳ್ಳುವ ಡಾ. ಹರಿ, ಅವನ ಕೈಯಲ್ಲಿದ್ದ ಸಿರಿಂಜ್ ಅಚಾನಕ್ ಆಗಿ ಒಮ್ಮೆ ತಗುಲಿದ್ದಕ್ಕಾಗಿ ತನಗೆ ನಪುಂಸಕತ್ವವೇ ಬಂತು ಎಂದು ಅಲವತ್ತುಕೊಳ್ಳುವ ಮತ್ತು ಎರಡನೇ ಬಾರಿ ಸಿರಿಂಜ್ ತಗುಲಿದ್ದಕ್ಕಾಗಿ ನಪುಂಸಕತ್ವ ಕಳೆದು ಅವಳಿ ಜವಳಿ ಮಕ್ಕಳು ಹುಟ್ಟಿವೆ ಎಂದು ನಂಬುವ ನಾಥಪ್ಪ, ಅವನನ್ನು ಗೇಲಿ ಮಾಡುವ ರೈ ಮತ್ತು ಕಪಾಲಿ, ನಾಯಿಯ ಚಿಕಿತ್ಸೆಗೆಂದು ತೆರಳಿದಾಗ ಟಿ.ವಿ. ರಿಪೇರಿಯನ್ನೂ ಮಾಡಿಸಿಕೊಂಡು ಮತ್ತೊಮ್ಮೆ ಟಿ.ವಿ. ಕೈಕೊಟ್ಟಾಗ ಡಾಕ್ಟರರನ್ನೇ ಕರೆಸುವ ಚಂದಪ್ಪ, ಜೂಜಿನ ಕುದುರೆಯ ಆರೋಗ್ಯ ತಪಾಸಣೆಗೆ ಬಾಸ್ ಪ್ರಜಾಪತಿಯ ಬದಲಿಗೆ ಹೋಗಿ ಅವಜ್ಞೆಗೊಳಗಾದರೂ ತೀವ್ರ ಅಲಜರ್ಿಯಿಂದ ಬಳಲುತ್ತಿದ್ದ ಬೆಸ್ಟ್ ಕುದುರೆ ಅಮೃತಾಳನ್ನು ತನ್ನ ಸಮಯೋಚಿತ ಚಿಕಿತ್ಸೆಯಿಂದಾಗಿ ಬದುಕಿಸಿದಾಗ ಅದರ ಉಸ್ತುವಾರಿ ನೋಡಿಕೊಳ್ಳುವ ಭೀಮೇಶನಿಂದ ಮೆಚ್ಚುಗೆಗಳಿಸುವುದು ಹೀಗೆ ಹಲವು ನೈಜ ಘಟನೆಗಳು ಯಥಾವತ್ತಾಗಿ ಮೂಡಿಬಂದು ಓದುಗರ ಅನುಭವವನ್ನು ವಿಸ್ತರಿಸುತ್ತವೆ.
    ಪಶುವೈದ್ಯಕೀಯ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ಕೆರಳಿಸುವ ಇಲ್ಲಿನ ಕಥೆಗಳಲ್ಲಿ ಪಶು ಸಹಾಯಕ ಮತ್ತು ಪಶುವೈದ್ಯದ ವಿದ್ಯಾಥರ್ಿಗಳಿಗೆ ತಾವು ಮುಂದೆ ಕೈಗೊಳ್ಳಲಿರುವ ಸೇವಾ ಚಟುವಟಿಕೆ, ಪಶುವೈದ್ಯರ ದಿನಚರಿ, ಪೇಚಾಟಗಳು, ಮಾನವೀಯ ಗುಣಗಳು ಹೇಗಿರುತ್ತವೆ ಎನ್ನುವುದರ ಕಿರುಪರಿಚಯ ಮಾಡಿಕೊಡುತ್ತವೆ.  ಹಾಗೆಯೇ ಇಲ್ಲಿ ಪ್ರಸ್ತಾಪಿತವಾಗಿರುವ ಕೀಟೋಸಿಸ್, ಬ್ರುಸೆಲೋಸಿಸ್, ಮಿಲ್ಕ್ ಫೀವರ್, ಮಿಕ್ಸೆಡಿಮಾ, ಅಟರ್ಿಕೇರಿಯಾ, ಆಕ್ಟಿನೋ ಬ್ಯಾಸಿಲೋಸಿಸ್, ಕೆನೈನ್ ಡಿಸ್ಟೆಂಪರ್, ಪೆರಿಟೋನೈಟಿಸ್, ಲಿವರ್ ಫ್ಲೂಕ್,  ಪಶುಗಳಿಗೆ ಬರುವ ಕೆಲವು ಕಾಯಿಲೆಗಳು, ಅವುಗಳಿಂದ ಉಂಟಾಗುವ ನಷ್ಟ, ಫಜೀತಿ, ಮಾಲೀಕರ ಪರದಾಟ ಎಲ್ಲವೂ ಅತಿ ಎನಿಸದಂತೆ, ಹಾಸ್ಯರಸ ಲೇಪನದೊಂದಿಗೆ ಮೂಡಿಬಂದು ನಗುವಿನೊಂದಿಗೆ ನೋವಿನ ಗಾಢತೆಯನ್ನೂ ಪರಿಚಯಿಸುತ್ತವೆ.  ಬಹುಶಃ ಈ ಸಂಕಥನಗಳನ್ನು ರಚಿಸಿದ 40 ರಿಂದ 60 ರ ದಶಕಗಳವರೆಗೆ ಲಭ್ಯವಿದ್ದ ಚಿಕಿತ್ಸಾ ಪದ್ಧತಿ ಮತ್ತು ಔಷಧಗಳ ಮಿತಿಯಲ್ಲಿದ್ದ ಕಾರಣ ಅನೇಕ ರೋಗಗಳಿಗೆ ಚಿಕಿತ್ಸೆ ತಗುಲುತ್ತಿರಲಿಲ್ಲವೇನೋ.  ಈಗ ಹೊಸ ಆವಿಷ್ಕಾರಗಳಿಂದಾಗಿ ಬದಲಾವಣೆಗಳು ಬಂದಿರಲೂಬಹುದು.
    ಒಮ್ಮೆ ಪುಟ ತೆರೆದರೆ ಕೊನೆಯ ಪುಟದವರೆಗೂ ಒಂದೇ ಓಟದಲ್ಲಿ ಓದಿಸಿಕೊಂಡುಹೋಗುವ ಡೇರಿ ಡಾಕ್ಟರ್ ಹೋರಿ ಮಾಸ್ಟರ್ ಪಶುವೈದ್ಯಲೋಕದ ನೋವು-ನಲಿವುಗಳಿಗೆ ಕಿಟಕಿಯಾಗುವ, ಕನ್ನಡದಲ್ಲಿ ನಿರೂಪಿತವಾಗಿರುವ  ಅಪರೂಪದ, ಸಂಗ್ರಹ ಯೋಗ್ಯ ಕೃತಿ ಎನ್ನಲು ಅಡ್ಡಿಯೇನಿಲ್ಲ.

ಜೇಮ್ಸ್ ಹೆರಿಯಟ್ ಕಿರುಪರಿಚಯ

    1916ರ ಅಕ್ಟೋಬರ್ 03 ರಂದು ಇಂಗ್ಲೆಂಡಿನ ಡರ್ಹ್ಯಾಂ ಕೌಂಟಿಯ ಸುಂಡರ್ಲೆಂಡ್ನಲ್ಲಿ ಜನಿಸಿದ ಜೇಮ್ಸ್ ಹೆರಿಯಟ್ (ಜೇಮ್ಸ್ ಆಲ್ಫ್ರೆಡ್ ವೈಟ್) ಗ್ಲಾಸ್ಗೊ ವೆಟೆರಿನರಿ ಕಾಲೇಜಿನಲ್ಲಿ ಪಶುವೈದ್ಯ ಪದವಿ ಮುಗಿಸಿ ಸ್ವಲ್ಪ ಸಮಯ ಸುಂಡರ್ಲೆಂಡ್ನಲ್ಲಿ ನಂತರ ಯಾಕರ್್ಶೈರ್ನ ಥಸ್ಕರ್್ ನಗರದ ಕಕರ್್ಗೇಟ್ನಲ್ಲಿ ಪಶುವೈದ್ಯರಾಗಿ ಸೇವೆಸಲ್ಲಿಸಿದರು.  ಎರಡನೇ ಪ್ರಪಂಚಯುದ್ಧದ ಸಮಯದಲ್ಲಿ ವಾಯುಸೇನೆಯಲ್ಲಿ ಕಡ್ಡಾಯ ಸೇವೆ ಸಲ್ಲಿಸಿದ ನಂತರ ತಮ್ಮ ಪಶುವೈದ್ಯ ಸೇವೆಗೆ ಮರಳಿದರು.  ಅವರ ಮಗ ಜೇಮ್ಸ್ ಅಲೆಗ್ಸಾಂಡರ್ ವೈಟ್ ಪಶುವೈದ್ಯವೃತ್ತಿ ಕೈಗೆತ್ತಿಕೊಂಡರೆ ಮಗಳು ರೋಸ್ಮೇರಿ ಪೇಜ್ ಮಾನವ ವೈದ್ಯಕೀಯ ವೃತ್ತಿ ಆರಿಸಿಕೊಂಡಳು.    1995 ರ ಫೆಬ್ರವರಿ 23 ರಂದು ಪ್ರಾಸ್ಟೇಟ್ ಕ್ಯಾನ್ಸರ್ನಿಂದ ನಿಧನರಾದ ಜೇಮ್ಸ್ ಹೆರಿಯಟ್ ತಮ್ಮ ಅನುಭವ ಕಥನಗಳನ್ನು ಪ್ರಕಟಿಸಿ ಖ್ಯಾತರಾದರು. 1974 - 76 ರಲ್ಲಿ ಅವರ ಕೃತಿಗಳನ್ನಾಧರಿಸಿದ ಚಲನಚಿತ್ರ ಮತ್ತು ಟಿ.ವಿ. ಸೀರಿಯಲ್ಗಳು ಅವರನ್ನು ಜನಪ್ರಿಯತೆಯ ತುತ್ತತುದಿಗೇರಿಸಿದವು.
    ಜೇಮ್ಸ್ ಹೆರಿಯಟ್ ಅವರ ಕೆಲವು ಪುಸ್ತಕಗಳು ಹೀಗಿವೆ:  
Only They Could Talk, It Shouldn't Happen to a Vet, All Creatures Great and Small, Let Sleeping Vets Lie, Vet in Harness, All Things Bright and Beautiful, Vets Might Fly, Vet in a Spin, All Things Wise and Wonderful, James Herriot's Yorkshire, The Lord God Made Them All, Every Living Thing, James Herriot's Cat Stories, James Herriot's Favourite Dog Stories.

    ಮಕ್ಕಳಿಗಾಗಿ ಅವರು ರಚಿಸಿರುವ ಕೆಲವು ಪುಸ್ತಕಗಳು ಇವು:
Blossom Comes Home, Moses the Kitten, Only One Woof, The Christmas Day Kitten, Bonny's Big Day, The Market Square Dog, Oscar, Cat-About-Town, Smudge, the Little Lost Lamb, James Herriot's Treasury for Children.

    ಲಾಡರ್್ ಗ್ರಹಾಂ ಅವರ “James Herriot: The Life of a Country Vet”, , ಜಿಮ್ ವೈಟ್ ಅವರ “The Real James Herriot: The Authorized Biography” ಮತ್ತು ಜಾನ್ ಲೆವಿಸ್ ಸ್ಟೆಂಪೆಲ್ ಅವರ  “Young Herriot: The Early Life and Times of James Herriot” ಕೃತಿಗಳು ಹೆರಿಯಟ್ ಜೀವನ ಸಾಧನೆಗಳನ್ನು ತಿಳಿಸುತ್ತಿವೆ. ಹಾಗೆಯೇ “All Creatures Great and Small”  ಹೆಸರಿನ ಚಲನಚಿತ್ರ ಮತ್ತು ಟಿ.ವಿ. ಸೀರಿಯಲ್ಗಳು ಅತ್ಯಂತ ಜನಪ್ರಿಯವಾಗಿದ್ದವು. ಹೆಚ್ಚಿನ ವಿವರಗಳಿಗೆ ನೋಡಿ:            
www.jamesherriot.org       
www.worldofjamesherriot.org
http://en.wikipedia.org/wiki/James_Herriot


- ಯಾಜ್ಞವಲ್ಕ್ಯ
                                       
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಕೇಂದ್ರ, ಚಿತ್ರದುರ್ಗ
ವಿಳಾಸ : ಬೇದ್ರೆ ಮಂಜುನಾಥ, ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ ಕೇಂದ್ರ, ಹಾಸನ - 573 201 ಫೋ.9448589089
ಛಜಜಡಿಜ.ಟಚಿಟಿರಿಣಟಿಚಿಣ@ರಟಚಿಟ.ಛಿಠಟ