Friday, April 29, 2011

Letter in The Sunday Indian - 1 May 2011


ಪರ್ಯಾಯ ಶಕ್ತಿ ಮೂಲ ಹುಡುಕಬೇಕಿದೆ
ನವೀಕರಿಸಬಹುದಾದ ಇಂಧನ ಮೂಲಗಳೇ ಇಂದಿನ ಅಗತ್ಯ ಮತ್ತು ಅನಿವಾರ್ಯ!

ನವೀಕರಿಸಬೇಕಾದ ಇಂಧನ ಮೂಲಗಳನ್ನೇ ಆರಿಸಿಕೊಳ್ಳುವ ಅನಿವಾರ್ಯತೆಯನ್ನು ಸಂಪಾದಕೀಯ (ಅರಿಂದಮ್ ಚೌಧುರಿ) ಎತ್ತಿ ಹಿಡಿದಿದೆ. ಜಪಾನಿನ ಅಸ್ತವ್ಯಸ್ತವಾದ ಜನಜೀವನಕ್ಕೆ ಕೇವಲ ನೈಸರ್ಗಿಕ ದುರಂತವಷ್ಟೇ ಕಾರಣವಲ್ಲ, ಅಣುದುರಂತವೂ ಕೈಜೋಡಿಸಿದಂತಿದೆ.  ಅಪಾಯವನ್ನು ಕಡಿಮೆ ಮಾಡಲು ಏನೆಲ್ಲಾ ಕ್ರಮ ಕೈಗೊಂಡಿದ್ದರೂ ಕೈಮೀರಿದ ಪರಿಸ್ಥಿತಿಗಳಲ್ಲಿ ಎಲ್ಲರೂ ಕೈಚೆಲ್ಲಿರುವುದೂ, ಈಗ ಅಲ್ಲಿ ಅಣು ವಿಕಿರಣದ ಪ್ರಮಾಣ ಹೆಚ್ಚಾಗುತ್ತಿರುವ ಲಕ್ಷಣಗಳನ್ನು ಗಮನಿಸಿದಾಗ ವಿಶ್ವ ಸಮುದಾಯವು ಕೂಡಲೇ ಏನಾದರೂ ಮಾಡಬೇಕಿರುವ ತುರ್ತು ಸ್ಥಿತಿಯನ್ನು ಎತ್ತಿತೋರಿಸುತ್ತಿದೆ. ಭಾರತವೂ ಭೂಕಂಪನದ ಪಟ್ಟಿಯಲ್ಲಿ ಗೋಚರಿಸುತ್ತಿರುವ ಸಂದರ್ಭದಲ್ಲಿ ಅಣುಸ್ಥಾವರಗಳ ಸ್ಥಾಪನೆಗೆ ಬದಲಾಗಿ ಪರ್ಯಾಯ ಶಕ್ತಿಮೂಲಗಳನ್ನು ಹುಡುಕಲು ಪ್ರೇರೇಪಿಸಬೇಕಿದೆ.
ಬೇದ್ರೆ ಎನ್. ಮಂಜುನಾಥ
ಚಿತ್ರದುರ್ಗ

ಸ್ಥಳೀಯ ತಂತ್ರಜ್ಞಾನಕ್ಕೆ ಮನ್ನಣೆ ಯಾವಾಗ?
ದೇಶದ ಘನತೆಗೆ ಧಕ್ಕೆ ತರುವಂತೆ ವರ್ತಿಸುತ್ತಿರುವ ಸಂಸತ್ ಸದಸ್ಯರಿಗೆ ಚಾಟಿ ಏಟು ನೀಡುವಂತಿರುವ ಸಂಪಾದಕೀಯ ಸಕಾಲಿಕ. ಪುಂಡು ದನಗಳಂತೆ ವರ್ತಿಸುತ್ತಿರುವ ಬೇಜವಾಬ್ದಾರಿಯುತ ನಡವಳಿಕೆಯ ಕೆಲವೇ ಸಂಸದರಿಂದ ಇಡೀ ದೇಶಕ್ಕೆ ಕಳಂಕ. ಇದನ್ನು ಇನ್ನಾದರೂ ತೊಳೆಯಬೇಕು. ಪರಸ್ಪರ ಸೌಹಾರ್ದಯುತ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳುವ ಪ್ರಬುದ್ಧತೆ ಮೆರೆಯಬೇಕು. ಯುವ ಸಂಸದರು ಈ ನಿಟ್ಟಿನಲ್ಲಿ ತಮ್ಮ ಪ್ರೌಢಿಮೆ ಪ್ರದರ್ಶಿಸಲು ಇದು ಸಕಾಲ. ಹಳೆಯ ಮುಖಗಳನ್ನು ಮೂಲೆಗೆ ಸೇರಿಸಿ, ಅವರ ಉದ್ಧಟತನಕ್ಕೆ ಮಂಗಳಾರತಿ ಎತ್ತಲು ಇದಕ್ಕಿಂತ ಪ್ರಶಸ್ತ ಸಮಯ ಮತ್ತೊಂದಿಲ್ಲ!
ಎನ್.ಕೆ. ಸುಪ್ರಭಾ ಅವರು ಗದಗ ಜಿಲ್ಲೆಯ ಸೋಮಾಪುರದ ಅನಕ್ಷರಸ್ಥ ಸಿದ್ಧಪ್ಪ ಅವರ ಯುಕ್ತಿ-ಶಕ್ತಿಯನ್ನು ಪರಿಚಯಿಸಿರುವುದು ಗ್ರಾಮೀಣ ಭಾರತದಲ್ಲಿ ಸ್ಥಳೀಯ ತಂತ್ರಜ್ಞಾನ ಇನ್ನೂ ಬೆಳವಣಿಗೆಯ ಹಂತದಲ್ಲಿ ಇದೆ ಎನ್ನುವುದಕ್ಕೆ ಪುರಾವೆ ಒದಗಿಸಿದೆ.
ಬೇದ್ರೆ ಎನ್. ಮಂಜುನಾಥ
ಚಿತ್ರದುರ್ಗ