Monday, December 20, 2010

Kalpane Poem in January 2010 issue of Mayura Monthly - Elli Hodaro Geleya by Bedre Manjunath

 Kalpane Poem in January 2010 issue of Mayura Monthly
Elli Hodaro Geleya by Bedre Manjunath
ನವೆಂಬರ್ 2010 ರ ಕಲ್ಪನೆ ಕವನ :

ಎಲ್ಲಿ ಹೋದರೋ, ಗೆಳೆಯಾ?


ಚಿಣ್ಣಿ ಕೋಲು ಚೆಂಡು ಹಿಡಿದ
ಬೆಳಗು ಬೈಗು ಆಡಿ ದಣಿದ
ಹರಿದ ಚೆಡ್ಡಿ ಸರದಾರರೆಲ್ಲ
ಎಲ್ಲಿ ಹೋದರೋ, ಗೆಳೆಯಾ?

ಬುಗುರಿ ತಿರುವಿ ಗುನ್ನ ಹಾಕಿ
ಗೋಲಿ ಹೊಡೆದು ಕೋಲು ನೂಕಿ
ಪಾಟಿ ಹಿಡಿದ ತುಂಟರೆಲ್ಲ
ಎಲ್ಲಿ ಹೋದರೋ, ಗೆಳೆಯಾ?

ಪಾಠವೆಂಬ ಆಟ ಆಡಿ
ಬಡಿಗೆ ಹಿಡಿದು ಜಗಳ ಮಾಡಿ
ಬಯಲ ಗೆದ್ದ ರಾಜರೆಲ್ಲ
ಎಲ್ಲಿ ಹೋದರೋ, ಗೆಳೆಯಾ?

ಕೋತಿಯಾಗಿ ಮರವನೇರಿ
ಕಲ್ಲುಪುರಾಣಿ ಗೊಬ್ಬರ ತೂರಿ
ರಸ್ತೆಯ ಅಲೆದ ಪೋಲಿಗಳೆಲ್ಲ
ಎಲ್ಲಿ ಹೋದರೋ, ಗೆಳೆಯಾ?

ಕುಸ್ತಿಮಾಡಿ ಲಗೋರಿ ಹೊಡೆದು
ಖೊಖೊ ಕಬಡ್ಡಿ ಗಾಡಿ ಎಳೆದು
ಧೀಂಗನೆ ದಾಂಗುಡಿ ಇಟ್ಟವರೆಲ್ಲಾ
ಎಲ್ಲಿ ಹೋದರೋ, ಗೆಳೆಯಾ?

ಕಲ್ಪನೆ : ಬೇದ್ರೆ ಮಂಜುನಾಥ

ALPANE - POEM BY BEDRE MANJUNATH - MAYURA MONTHLY 2008 AUGUST


KALPANE - POEM

BEDRE MANJUNATH

MAYURA MONTHLY

2008 AUGUST
ಬದುಕಿನ ಪಾಠ ನಡೆದಿದೆ

ಪ್ರಕೃತಿಯ ಮಡಿಲಲ್ಲಿ
ಭೂದೇವಿ ಗುಡಿಯಲ್ಲಿ
ಮಣ್ಣ ಕಣ ಕಣದಲ್ಲಿ.

ಅಕ್ಷರ ತಿದ್ದುವ ಕೈಗಳು
ನೇಗಿಲ ಹಿಡಿದಿವೆ ಇಲ್ಲಿ
ಜೋಡೆತ್ತಿನ ಜೊತೆಯಲ್ಲಿ
ಉತ್ತು ಬಿತ್ತುವ ಕಾಯಕದಲ್ಲಿ.

ಬೆಳೆವ ಸಿರಿ ಮೊಳಕೆಯಲ್ಲಿ
ಭವ್ಯ ಭವಿಷ್ಯದ ಬಯಕೆಯಲ್ಲಿ
ಸವಿಗನಸುಗಳ ಸಾಕ್ಷಾತ್ಕಾರದಲ್ಲಿ
ಮಣ್ಣ ಮಕ್ಕಳು ತೊಡಗಿಹರಿಲ್ಲಿ.

ಅನ್ನದಾತ ಚಿಣ್ಣರೇ, ಕೇಳಿರಿ ಇಲ್ಲಿ
ಮಣ್ಣ ಕಾಯಕದ ಜೊತೆ ಜೊತೆಯಲ್ಲಿ
ಓದು ಬರಹ ಕಲಿಯಿರಿ ಶಾಲೆಗಳಲ್ಲಿ
ಶ್ರಮಿಸಿರಿ ಸಾಕ್ಷರ ನಾಡನು ಕಟ್ಟುವಲ್ಲಿ.

ದೇಶದ ಭವ್ಯ ಭವಿಷ್ಯವೇ ನೀವು
ಮೇಟಿ ವಿದ್ಯೆ ಕಲಿಯದಿರೆ ಸಾವು
ಬಿತ್ತಿರಿ ಸುಖ ಸಮೃದ್ಧಿಯ ಕನಸುಗಳನೀಗ
ಪಡೆಯಿರಿ ಶಾಂತಿ ನೆಮ್ಮದಿಯ ಫಸಲು ಬೇಗ.
ಕಲ್ಪನೆ : ಬೇದ್ರೆ ಮಂಜುನಾಥ

(ಮಯೂರ ಮಾಸಿಕದ ಕಲ್ಪನೆ ಕವನ - ಜೂನ್ 2006) 

Thursday, November 11, 2010

Kannada Lipi Vikasa - A wonderful work on Kannada Script - by Dr M G Manjunath and G K Devaraja Swamy                 ಕನ್ನಡ ಬರಹದ ಸ್ಥಿತ್ಯಂತರಗಳ ದಾಖಲಿಸುವ ಕನ್ನಡ ಲಿಪಿ ವಿಕಾಸ

                    ಕೃತಿ                : ಕನ್ನಡ ಲಿಪಿ ವಿಕಾಸ
                    ಲೇಖಕರು        : ಡಾ. ಎಂ.ಜಿ. ಮಂಜುನಾಥ ಮತ್ತು ಜಿ.ಕೆ. ದೇವರಾಜಸ್ವಾಮಿ
                    ಪ್ರಕಾಶಕರು      : ಜಗದುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ
                                             ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯ                            
                      ಪುಟಗಳು        : 332            ಬೆಲೆ : ರೂ. 150-00

    ಕನ್ನಡ ಲಿಪಿ ವಿಕಾಸವು ಒಂದು ರೀತಿಯಲ್ಲಿ ಭಾರತೀಯ ಲಿಪಿಶಾಸ್ತ್ರದ ಅಧ್ಯಯನದ ಬೃಹತ್ ವ್ಯಾಪ್ತಿಯನ್ನು ಹೊಂದಿದೆ.  ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಪ್ರಚಲಿತವಿದ್ದ ಬಹುತೇಕ ಎಲ್ಲಾ ಲಿಪಿಗಳನ್ನು ಕುರಿತ ಅಧ್ಯಯನ ಇಲ್ಲಿ ನಡೆದಿದೆ....ಶಾಸನಾಧ್ಯಯನಕ್ಕೆ  ಸಂಬಂಧಿಸಿದ ಮಹತ್ವದ ವಿಚಾರಗಳನ್ನು, ಭಾರತ ಮತ್ತು ಕನರ್ಾಟಕಗಳಲ್ಲಿ ಶಾಸನಾಧ್ಯಯನ ನಡೆದು ಬಂದ ಬಗೆಯ ಪರಿಚಯ ಇಲ್ಲಿದೆ.... ಮಣ್ಣಿನಿಂದ ಪ್ರಾರಂಭಿಸಿ ಕಾಗದದವರೆಗೆ ಬಳಸಲಾಗಿರುವ ವಿವಿಧ ಸಾಮಗ್ರಿಗಳು ದಾಖಲೆೆಗೊಂಡಿರುವ ಮಹತ್ವದ ವಿಚಾರಗಳನ್ನು ಪರಿಶೀಲಿಸಿ ಪರಿಚಯಿಸಲಾಗಿದೆ.... ಬೀಜರೂಪದ ಬರವಣಿಗೆಯಿಂದ ಎಲಮೈಟ್ ಲಿಪಿಯವರೆಗಿನ ಲಿಪಿವಿಕಾಸದ ಹಂತಗಳನ್ನು, ವಿವಿಧ ನಾಗರೀಕತೆಗಳಿಗೆ ಸಂಬಂಧಿಸಿದ ಬರಹ ರೂಪಗಳನ್ನು, ವಿಶೇಷವಾಗಿ ಸಿಂಧೂ ಸಂಸ್ಕೃತಿಯ ಬರಹಗಳನ್ನು ಪರಿಚಯಿಸಲಾಗಿದೆ.... ಅಶೋಕನ ಬ್ರಾಹ್ಮೀ ಲಿಪಿಯಿಂದ ಪ್ರಾರಂಭಿಸಿ ಮೈಸೂರು ಒಡೆಯರ ಕಾಲದ ಲಿಪಿಯವರೆಗೆ ಎಲ್ಲಾ ಕಾಲಘಟ್ಟದ ಲಿಪಿ ಸ್ವರೂಪಗಳನ್ನೂ, ಕಾಗುಣಿತಗಳ ಸಹಿತ ನೀಡಲಾಗಿದೆ..... ಶಾಸನಾಭ್ಯಾಸಿಗಳ ಅನುಕೂಲಕ್ಕಾಗಿ ಅರವತ್ತಮೂರು ಶಾಸನಗಳ ಚಿತ್ರಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪಠ್ಯವನ್ನು ನೀಡಿ ಗ್ರಂಥಕರ್ತರು ಉಪಕರಿಸಿದ್ದಾರೆ.... ಅನುಬಂಧದಲ್ಲಿ ಕನರ್ಾಟಕವನ್ನಾಳಿದ ಬಹುತೇಕ ಎಲ್ಲಾ ರಾಜವಂಶಗಳ ವಂಶಾವಳಿಯನ್ನು ಅವರ ಆಳ್ವಿಕೆಯ ಕಾಲದೊಂದಿಗೆ ನೀಡಿದ್ದಾರೆ.  ನಂತರದ ಭಾಗದಲ್ಲಿ ಸಂವತ್ಸರ, ಮಾಸ, ತಿಥಿ ಇತ್ಯಾದಿ ಪಂಚಾಂಗದ ವಿವರಗಳನ್ನು ನೀಡಿ ಕೃತಿಯ ಉಪಯುಕ್ತತೆಯನ್ನು ಹೆಚ್ಚಿಸಿದ್ದಾರೆ, ಎನ್ನುವ ಪ್ರಸಿದ್ಧ ಹಿರಿಯ ಶಾಸನತಜ್ಞ, ಕನರ್ಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ. ಹೆಚ್. ಎಸ್. ಗೋಪಾಲರಾವ್ ಅವರ ಮುನ್ನುಡಿ ಪ್ರಸ್ತುತ ಕೃತಿಯ ಹಿರಿಮೆಯನ್ನು ಬೀಜರೂಪದಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
    ಕನ್ನಡ ಭಾಷೆಯನ್ನು ಅಭಿಜಾತ ಭಾಷೆಯೆಂದು ಕರೆಯುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಲಿಪಿಯ ಬಗ್ಗೆ ಆಗಿರುವ ಸಂಶೋಧನೆಯ ಕುರಿತಾದ ಗ್ರಂಥವೊಂದು ತೆಲುಗುನಾಡಿನಿಂದ ಪ್ರಕಟವಾಗಿ ಕಣ್ತೆರೆಸುತ್ತಿದೆ.  ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನವಿರುವ ಮಂತ್ರಾಲಯದ ಮಠದಿಂದ ಶ್ರೀ ರಘುನಂದನ ರಾಘವೇಂದ್ರಮಾಲಾದ 101 ಪುಸ್ತಕಗಳಲ್ಲಿ 93ನೇ ಪುಷ್ಪವಾಗಿ ಪ್ರಕಟವಾಗಿರುವ ಕನ್ನಡ ಲಿಪಿ ವಿಕಾಸ ಎಂಬ ಅಪರೂಪದ ಕೃತಿ ಈಗ ಲಭ್ಯವಾಗುತ್ತಿಲ್ಲ.  ಮರುಮುದ್ರಿಸಲು ಯಾರಾದರೂ ಮುಂದೆಬಂದಾರೆಯೇ?
    ಕನ್ನಡ ಎಂ.ಎ., ಪುರಾತತ್ತ್ವಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರದ ಪ್ರಮುಖ ಆಕರ ಗ್ರಂಥವಾಗಿರುವ ಹಾಗೂ ಶಾಸನ ಸಂಶೋಧಕರಿಗೆ ಅಗತ್ಯವಾಗಿರುವ ಈ ಗ್ರಂಥ ಸಕಲ ರೀತಿಯಿಂದಲೂ ಉತ್ಕೃಷ್ಟವಾಗಿದೆ. ಕನ್ನಡ ಲಿಪಿಶಾಸ್ತ್ರ ಎಂಬ ಹೊತ್ತಗೆ ರಚಿಸಿದ ಡಾ. ಎಂ.ಜಿ. ಮಂಜುನಾಥ ಮತ್ತು ಜಿ.ಕೆ. ದೇವರಾಜಸ್ವಾಮಿ ಅವರು ಅದನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಹತ್ತುವರ್ಷಗಳ ಸಂಶೋಧನೆಯ ಫಲ ಈ ಕನ್ನಡ ಲಿಪಿ ವಿಕಾಸ.
    ಮುನ್ನುಡಿ ಬೆನ್ನುಡಿಗಳ ಹೊರತಾಗಿ ಒಟ್ಟು ಇಪ್ಪತ್ತೆಂಟು ಅಧ್ಯಾಯಗಳು ಮತ್ತು ನಾಲ್ಕು ಅನುಬಂಧ ಟಿಪ್ಪಣಿಗಳನ್ನು ಹೊಂದಿರುವ  ಕನ್ನಡ ಲಿಪಿ ವಿಕಾಸ ಕೃತಿಯಲ್ಲಿ ಕನ್ನಡ ಲಿಪಿಯ ಜೊತೆ ಕನರ್ಾಟಕದಲ್ಲಿ ಲಭಿಸಿರುವ ಬ್ರಾಹ್ಮೀ, ದೇವನಾಗರಿ, ನಂದಿನಾಗರಿ, ಗ್ರಂಥ, ಅರವ, ವಟ್ಟೆಳತ್ತು, ತಿಗಳಾರಿ, ತುಳು, ತೆಲುಗು, ಶಂಕು ಲಿಪಿ, ಮೋಡಿ ಬರಹ ಇತ್ಯಾದಿಗಳ ಸಾಂದಭರ್ಿಕ ಅಧ್ಯಯನವಿದೆ.  ಕನ್ನಡ ಅಂಕೆಗಳ ವಿಕಾಸಕ್ಕೂ ಪ್ರತ್ಯೇಕ ಅಧ್ಯಾಯವಿದೆ.  ಮಣ್ಣು, ಕಲ್ಲು, ಕಬ್ಬಿಣ, ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆ, ಮರ, ಚರ್ಮ, ಸ್ಫಟಿಕ, ಶಂಕು, ಭೂರ್ಜಪತ್ರ, ತಾಳೆಗರಿ, ಕಡತ, ಕಾಗದ, ಸೀಸ, ಆನೆಯದಂತ, ಪ್ರಾಣಿಗಳ ಮೂಳೆಗಳು, ಮರದ ಎಲೆಗಳಲ್ಲಿ ಮೂಡಿರುವ ಲಿಪಿಗಳ ದಾಖಲೆ ಇತಿಹಾಸದ ಬಗ್ಗೆ ಆಸಕ್ತಿ ಹುಟ್ಟಿಸುವ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
    ಬೀಜರೂಪದ ಬರವಣಿಗೆ, ವಿಗ್ರಹರೂಪ ಮತ್ತು ತಾಂತ್ರಿಕ ಬರವಣಿಗೆ, ಚಿತ್ರಲಿಪಿ, ಭಾವಲಿಪಿ, ಅಂತರಾವಸ್ಥೆಯ ಲಿಪಿ, ಕ್ರೀಟನ್ ಲಿಪಿ, ಹೆಟ್ಟೈಟ್ ಲಿಪಿ, ಸುಮೇರಿಯನ್ ಲಿಪಿ, ಧ್ವನಿಲಿಪಿ, ಶಬ್ದಾತ್ಮಕ ಲಿಪಿ, ಹೈರೋಗ್ಲಿಫಿಕ್ ಲಿಪಿ, ಹೈರಾಟಿಕ್ ಲಿಪಿ, ಡಿಮೋಟಿಕ್ ಲಿಪಿ,  ಎಲಮೈಟ್ ಲಿಪಿ, ಕ್ಯೂನಿಫಾರಂ ಲಿಪಿಗಳ ಪ್ರಸ್ತಾಪದೊಂದಿಗೆ ವರ್ಣಮಾಲೆಯ ಉಗಮದ ಇತಿಹಾಸವನ್ನು ವಿವರವಾಗಿ ತಿಳಿಸಲಾಗಿದೆ.  ಜೈನಸೂತ್ರಗಳಲ್ಲಿ ಉಲ್ಲೇಖಿಸಿರುವ ಹದಿನೆಂಟು ಲಿಪಿಗಳು, ಬೌದ್ಧಗ್ರಂಥವಾದ ಲಲಿತ ವಿಸ್ತಾರದಲ್ಲಿ ಕೊಟ್ಟಿರುವ ಅರವತ್ತನಾಲ್ಕು ಲಿಪಿಗಳು, ವಿದೇಶಿ ಲಿಪಿಗಳು, ಬುಡಕಟ್ಟು ಲಿಪಿಗಳು, ಜನಾಂಗೀಯ ಲಿಪಿ, ಚಿತ್ರಲಿಪಿ, ಗೂಢಲಿಪಿ, ಕೊರೆಯಲ್ಪಟ್ಟ ಲಿಪಿ, ಅಲಂಕಾರಿಕ ಲಿಪಿ, ಶೀಘ್ರಲಿಪಿ, ಗ್ರಂಥಲಿಪಿ, ಗಣಿತದ ವಿಶೇಷ ಲಿಪಿ, ಅಮಾನುಷ / ಕಾಲ್ಪನಿಕ ಲಿಪಿಗಳನ್ನು ಚುಟುಕಾಗಿ ವಿವರಿಸಲಾಗಿದೆ.
    ಶಾಸನ ಸಂಪಾದನೆಯ ವಿಧಿ ವಿಧಾನಗಳು ಅಧ್ಯಾಯದಲ್ಲಿ ಪಡಿಯಚ್ಚು ತೆಗೆಯುವ ವಿಧಾನಗಳು ಮತ್ತು ಅವುಗಳಿಗೆ ಬೇಕಾದ ಸಾಮಗ್ರಿಗಳನ್ನು ಕುರಿತ ವಿಸ್ತೃತ ವಿವರಣೆಯಿದೆ.  ಶಾಸನಗಳಲ್ಲಿ ಕಾಲಗಣನೆ ಅಧ್ಯಾಯದಲ್ಲಿ ಕಲಿಯುಗ ಸಂವತ್ಸರ, ಸೃಷ್ಟಿಗತಾಬ್ದ ವರ್ಷ,  ಶಾಲಿವಾಹನ ಶಕ ಸಂವತ್ಸರ, ವಿಕ್ರಮ ಶಕೆ, ಚಾಲುಕ್ಯ ವಿಕ್ರಮ ಶಕೆ, ಬಿಜ್ಜಳ ಶಕೆ, ಮಹಾವೀರ ಸಂವತ್ಸರ, ಹಿಜಿರ ಶಕೆ, ಸಾಂಕೇತಿಕ ಕಾಲಗಣನೆಯ ವಿವರಗಳಿವೆ. ಸೃಷ್ಟಿಯು ಒಂದು ಸಾವಿರದ ಒಂಬೈನೂರ ಐವತ್ತೈದು ಕೋಟಿ ಐವತ್ತೆಂಟು ಲಕ್ಷ ಎಂಬತ್ತಮೂರು ಸಾವಿರದ ಒಂದು ನೂರಾ ಎರಡರಲ್ಲಿ (1955,58,83,102) ಆರಂಭವಾಯಿತೆಂಬ ನಂಬಿಕೆ ಇದೆ ಎನ್ನುವ ಉಲ್ಲೇಖ ಓದುಗರನ್ನು ಚಕಿತಗೊಳಿಸುತ್ತದೆ.
    ...ದೇಶದೆಲ್ಲೆಡೆ ಅರಳಿದ್ದ, ಅರಳಿದ್ದರೂ ಜನಮಾನಸಕ್ಕೆ ಗೋಚರವಾಗದೆ ಗುಪ್ತವಾಗುಳಿದಿದ್ದ ಹಲವಾರು ಅಪೂರ್ವ ಗ್ರಂಥಕುಸುಮಗಳನ್ನು ಆಯ್ದು ತಂದು ಪೋಣಿಸಿದ ಶ್ರೀ ರಘುನಂದನ ರಾಘವೇಂದ್ರಮಾಲಾದ 101 ಪುಸ್ತಕಗಳ ವೈಜಯಂತಿ ಜ್ಞಾನವೃಕ್ಷವನ್ನು ಅಲುಗಾಡಿಸುವ ಕಿರು ಪ್ರಯತ್ನವಾಗಿದೆ.  ಕೆಳಗೆ ಬಿದ್ದ ಫಲ ಹಾಗೂ ಪುಷ್ಪಗಳು ಜಿಜ್ಞಾಸುಗಳ ಹೃನ್ಮನೋಮಂದಿರಗಳನ್ನು ಅಲಂಕರಿಸಿದರೆ ಸಾಹಿತ್ಯಕೃಷಿಕರ ಶ್ರಮ ಸಾರ್ಥಕವಾದೀತು... ಎನ್ನುವ ರಾಜಾ ಎಸ್. ರಾಜಗೋಪಾಲಾಚಾರ್ಯರ ಆಪ್ತನುಡಿಗಳು ಈ ಕನ್ನಡ ಲಿಪಿ ವಿಕಾಸ ಕೃತಿಗೆ ಭೂಷಣವಾಗಿವೆ.  ಶಿಕ್ಷಣಾಸಕ್ತರು, ಭಾಷಾಭ್ಯಾಸಿಗಳು ಒಮ್ಮೆ ಇದನ್ನು ಖಂಡಿತಾ ಓದಬೇಕು.
                                                                                                                       ಕೃತಿಪರಿಚಯ - ಯಾಜ್ಞವಲ್ಕ್ಯ
                                                

Kannada Lipi Vikasa - A wonderful work on Kannada Script
by Dr M G Manjunath and G K Devaraja Swamy

Chicken Mesh Artist Ivan Lovatt - Article in Sudha Magazine - 18 Nov 2010

    ಮನಸೆಳೆಯುವ ಚಿಕನ್ ವೈಯರ್ ಕಲಾಕೃತಿಗಳು


    ಕಲೆಯನ್ನು ಬಿಂಬಿಸುವ ನೂತನ ಮಾಧ್ಯಮಕ್ಕಾಗಿ, ವಿನೂತನ ಪ್ರಕಾರಕ್ಕಾಗಿ ಕಲಾವಿದರೆಲ್ಲರೂ ಸತತ ಹುಡುಕಾಡ ನಡೆಸುತ್ತಿರುತ್ತಾರೆ, ಪ್ರಯೋಗಶೀಲರಾಗಿರುತ್ತಾರೆ.  ಕಟ್ಟಡ ಕಟ್ಟುವಾಗ, ಬೃಹತ್ ಪ್ರಮಾಣದ ಪ್ಲಾಸ್ಟರ್ ಶಿಲ್ಪಗಳನ್ನು ತಯಾರಿಸುವಾಗ ಟೊಳ್ಳು ಮಾದರಿ ರಚಿಸಿಕೊಳ್ಳಲು ಬಳಸಲಾಗುತ್ತಿದ್ದ ಚಿಕನ್ ಮೆಷ್ ಅಥವಾ ಚಿಕನ್ ವೈಯರ್ ನನಗೆ ಆಸಕ್ತಿ ಕೆರಳಿಸಿತು.  ಅದನ್ನೇ ಬಳಸಿ ಪ್ರಾಣಿ, ಪಕ್ಷಿ, ವನ್ಯಜೀವಿಗಳನ್ನು ರಚಿಸಿದೆ.  ವಿಶ್ವವಿಖ್ಯಾತ ಕಲಾವಿದರು, ಸಾಹಸಿಗಳು, ಜಗತ್ಪ್ರಸಿದ್ಧ ವ್ಯಕ್ತಿಗಳ ವಯರ್ ಕಲಾಕೃತಿಗಳನ್ನು ನಿಮರ್ಿಸಿದೆ.  ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಾದರೂ ಮನಸ್ಸಿಗೆ ತೃಪ್ತಿ ತರುವ ಕೆಲಸವಾಗಿದೆ, ಎನ್ನುತ್ತಾನೆ ವಿಶ್ವವಿಖ್ಯಾತ ಮೆಷ್ ವೈಯರ್ ಕಲಾವಿದ ಇವಾನ್ ಲೊವಾಟ್ (ತಚಿಟಿ ಐಠತಚಿಣಣ).
    ಕೀನ್ಯಾದ ನೈರೋಬಿಯಲ್ಲಿ ಜನಿಸಿದ ಇವಾನ್ ಲೊವಾಟ್ ಆಫ್ರಿಕಾ, ಜರ್ಮನಿ, ವೇಲ್ಸ್ ಮತ್ತು ಇಂಗ್ಲೆಂಡ್ಗಳಲ್ಲಿ ಕೆಲಸಮಾಡಿ 1994 ರಿಂದ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಹಿಂಟರ್ಲೆಂಡ್ನಲ್ಲಿ ಪತ್ನಿ (ಏಪ್ರಿಲ್) ಮತ್ತು ಪುತ್ರ (ಜೇಮ್ಸ್) ಜೊತೆ ವಾಸಿಸುತ್ತಿದ್ದಾರೆ.   1994 ರಲ್ಲಿ ಮೊದಲ ಬಾರಿಗೆ  ಗ್ರಂಥಮ್ ಗಿಲ್ಡ್ ಹಾಲ್ನಲ್ಲಿ ಚಿತ್ರಗಳು ಹಾಗೂ ಮೆಷ್ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ ಲೊವಾಟ್ ಪ್ರಪಂಚದ ಹಲವು ಸ್ಪಧರ್ೆಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿದ್ದಾರೆ.  2004 ರಿಂದ ಈಚೆಗೆ ಭಾಗವಹಿಸಿರುವ ಬಹುತೇಕ ಎಲ್ಲ ಅಂತಾರಾಷ್ಟ್ರೀಯ ಕಲಾಕೃತಿಗಳ ಪ್ರದರ್ಶನಗಳಲ್ಲಿ ಪ್ರಥಮ ಬಹುಮಾನ ಗಳಿಸಿರುವ ಲೊವಾಟ್ಗೆ ವನ್ಯಜೀವಿಗಳ ಮೆಷ್ ಶಿಲ್ಪಗಳನ್ನು ರಚಿಸುವುದೆಂದರೆ ತುಂಬಾ ಇಷ್ಟ.  ಸರ್ ಎಡ್ಮಂಡ್ ಹಿಲರಿ, ಮೈಕೆಲ್ ಜಾಕ್ಸನ್, ಬೀಟ್ಲ್ ಹಾಡುಗಾರರು, ಸಾಲ್ವಡಾರ್ ಡಾಲಿ ಮೊದಲಾದ ಜನಪ್ರಿಯ ವ್ಯಕ್ತಿಗಳ ಮೆಷ್ ಶಿಲ್ಪಗಳು ಜನಪ್ರಿಯವಾಗಿವೆ.  ಇವರ ಹಲವಾರು ಕಲಾಕೃತಿಗಳು ವಿಶ್ವದಾದ್ಯಂತ ಖಾಸಗಿ ಸಂಗ್ರಹಾಲಯಗಳಲ್ಲಿ ಸೇರ್ಪಡೆಗೊಂಡಿವೆ.
    ಹೆಚ್ಚಿನ ಮಾಹಿತಿ ಮತ್ತು ಚಿಕನ್ ಮೆಷ್ ಕಲಾಕೃತಿಗಳಿಗಾಗಿ ಈ ವೆಬ್ಸೈಟ್ಗಳನ್ನು ಭೇಟಿಮಾಡಬಹುದು: 
www.ivanlovattsculpture.com

Sunday, October 31, 2010

Amrutha Cinema Sambhrama - A Compendium of Articles on the Saga of Kannada Film Industry by Srinivasa Prasad of AIR Chitradurga

Amrutha Cinema Sambhram
A Compendium of Articles on the Saga of Kannada Film Industry 
by Srinivasa Prasad of AIR Chitradurga


Published by Dhatri Pustaka
No.170, 3rd 'C' Cross, Vinayaka Layout, Nagarabavi 2nd Stage,
Bangalore - 560 072, Ph. 080-23586717
Price: Rs.100/

ಅಮೃತ ಸಿನಿಮಾ ಸಂಭ್ರಮವೆಂಬ ಕರ್ಣರಸಾಯನ

ಕೃತಿ                    : ಅಮೃತ ಸಿನಿಮಾ ಸಂಭ್ರಮ         
ಲೇಖಕರು            : ಶ್ರೀನಿವಾಸ ಪ್ರಸಾದ್                                            
ಪ್ರಕಾಶಕರು         : ಧಾತ್ರಿ ಪ್ರಕಾಶನ, ವಿಜಯನಗರ, ಬೆಂಗಳೂರು                            
ಪುಟಗಳು             : 164        ಬೆಲೆ : ರೂ. 100-00

    ಕನ್ನಡ ಭಾಷೆ, ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಮೊದಲಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಯ ಹೆಜ್ಜೆಗುರುತುಗಳನ್ನು ದಾಖಲಿಸುವ ಪ್ರಯತ್ನ ಆಗಾಗ್ಗೆ ನಡೆಯುತ್ತಾ ಬಂದಿದೆ.  ಕನ್ನಡ ವಿಶ್ವಕೋಶ ಮತ್ತು ಇತರೆ ಸಂದರ್ಭ ಗ್ರಂಥಗಳಲ್ಲಿ ಆಯಾಯ ಕಾಲದ ದಾಖಲೆಗಳು ಅಚ್ಚುಕಟ್ಟಾಗಿ ಕ್ರೋಢೀಕರಿಸಲ್ಪಟ್ಟಿವೆ.  ಇದೇ ವರ್ಷ ಚಲನಚಿತ್ರ ರಂಗದ ರಾಷ್ಟ್ರಪ್ರಶಸ್ತಿ ಗಳಿಸಿರುವ ಸಿನಿಮಾಯಾನ, ಕಲಾರಂಗದ ಸಹಸ್ರಾರು ವರ್ಷಗಳ ಮೈಲುಗಲ್ಲುಗಳನ್ನು ದಾಖಲಿಸುವ ಕನರ್ಾಟಕ ಕಲಾದರ್ಶನ ದಂತಹ ಕೆಲವೇ ಕೃತಿಗಳು ಸಾರ್ವಕಾಲಿಕ ದಾಖಲೆಯಾಗಿ ಉಳಿಯುತ್ತವೆ.  ಈ ಸಾಲಿಗೆ ಕನ್ನಡ ರಾಜ್ಯೋತ್ಸವದಂದು ಸೇರ್ಪಡೆಯಾದ ಅಪರೂಪದ ಕೃತಿ ಶ್ರೀನಿವಾಸ ಪ್ರಸಾದ್ ಅವರ ಅಮೃತ ಸಿನಿಮಾ ಸಂಭ್ರಮ.  ಮೂರು ಗಂಟೆಗಳೊಳಗೇ ಮೂರು ತಲೆಮಾರುಗಳ ಕತೆ ಹೇಳಿ ಮುಗಿಸುವ ಸಿನಿಮಾದ ಕಥೆ ಹೇಳುವ ಸುದೀರ್ಘ ಕರ್ಣರಸಾಯನವೇ ಈ ಅಮೃತ ಸಿನಿಮಾ ಸಂಭ್ರಮ. 
    ಸಿನಿಮಾ ಕನಸುಗಳನ್ನು ಮಾರುವವರ, ನಂಬುವವರ, ಕೊಳ್ಳುವವರ ಲೋಕ. ಸಿನಿಮಾ ಎಂದರೆ ಬೆಳ್ಳಿ ತೆರೆಯ ಮೇಲಿನ ತಾಕಲಾಟ.  ನಮ್ಮದೇ ಕಥೆಯನ್ನು, ಕನಸನ್ನು ರಂಜನೀಯವಾಗಿ, ಕೆಲವೊಮ್ಮೆ ಅತಿರಂಜನೀಯವಾಗಿ ಹೇಳುವ ಪ್ರಯತ್ನ........ ಆತ್ಮ ಸಂತೋಷಕ್ಕೆ, ಮನೋರಂಜನೆಗೆ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ ಹೀಗೆ ನೂರೆಂಟು ಮಾಧ್ಯಮಗಳಿದ್ದಾವೆ.  ಆದರೆ ಇವೆಲ್ಲವನ್ನು ಅಷ್ಟಿಷ್ಟು ಹದವಾಗಿ ಬೆರೆಸಿ ಪಂಡಿತ ಪಾಮರರೆಲ್ಲರನ್ನು ಮರಳು ಮಾಡಿದ್ದು ಸಿನಿಮಾ ಎಂಬ ಮಾಯೆ...., ಹೀಗೆ ಆರಂಭವಾಗುತ್ತದೆ ಸಿನಿಮಾ ಲೋಕದ ಎಪ್ಪತ್ತೈದು ವರ್ಷಗಳ ಸಾಧನೆಯ ಕಥೆ.
    ಇವಳು ಯಾರು ಬಲ್ಲೆಯೇನು?..... ಎಂಬ ಹಾಡಿನ ಸಾಲಿನಿಂದ ಕನ್ನಡ ಚಲನ ಚಿತ್ರರಂಗದ ಎಪ್ಪತ್ತೈದು ವರ್ಷಗಳ ಸಾಧನೆಯ ಮೈಲುಗಲ್ಲುಗಳನ್ನು ಪರಿಚಯಿಸುತ್ತಾ ಸಾಗುವ ಶ್ರೀನಿವಾಸ ಪ್ರಸಾದರ ಈ ಅಮೃತ ಸಿನಿಮಾ ಸಂಭ್ರಮ ಕೃತಿ ಕನ್ನಡದ ಹಲವು ನಿತ್ಯ ಹರಿದ್ವರ್ಣ ಚಿತ್ರಗೀತೆಗಳ ಮೊದಲ ಸಾಲುಗಳನ್ನು ಶೀಷರ್ಿಕೆಯಾಗಿಸಿಕೊಂಡಿರುವ ಮೂವತ್ತಕ್ಕೂ ಹೆಚ್ಚು ಅಧ್ಯಾಯಗಳಲ್ಲಿ ಕರಿಯನ್ನು ಕನ್ನಡಿಯಲ್ಲಿ ಹಿಡಿದಂತೆ ಚಿತ್ರರಂಗದ ಸಾಧನೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ.  ಪ್ರತಿಯೊಂದು ಅಧ್ಯಾಯವೂ ನೂರಾರು ಚಿತ್ರಕಲಾವಿದರ ಸಾಧನೆಯ ವಿವಿಧ ಮಜಲುಗಳ ವಿವರಗಳನ್ನು, ಕುತೂಹಲಕಾರಿ ಸಂಗತಿಗಳನ್ನು, ಅಪರೂಪದ ನೆನಪುಗಳನ್ನು ದಾಖಲಿಸುತ್ತಲೇ ಚಿತ್ರರಂಗ ಕಂಡ ಏಳು-ಬೀಳುಗಳನ್ನು ಕೂಡ ತೋರಿಸಿಕೊಟ್ಟಿದೆ.  ಕೆಲವೊಂದು ಶೀಷರ್ಿಕೆ ಗೀತೆಗಳು ಆಯಾ ಅಧ್ಯಾಯದಲ್ಲಿ ವಿವರಿಸಲಾಗಿರುವ ಕಲಾವಿದರ ಕಲಾಸಾಧನೆಯ ಪ್ರತಿಮೆಯಾಗಿವೆ.  ನಾನೇ ರಾಜಕುಮಾರ.... ಎಂಬ ಸುದೀರ್ಘ ಅಧ್ಯಾಯ ಕನ್ನಡದ ಕಣ್ಮಣಿ ಅಣ್ಣಾವ್ರನ್ನ ಕಣ್ಣಮುಂದೆ ಕಟೆದು ನಿಲ್ಲಿಸುತ್ತದೆ.
    ಸತೀ ಸುಲೋಚನಾ 1933ರಲ್ಲಿ ಬಿಡುಗಡೆಯಾಗಿ ಕನ್ನಡದ ಮೊದಲ ವಾಕ್ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಅದಕ್ಕೂ ಮೊದಲೇ ತಯಾರಿಕೆ ಆರಂಭಿಸಿ, ಸೆನ್ಸಾರ್ ಆಗಿದ್ದ ಭಕ್ತಧ್ರುವ ಚಿತ್ರ 1934 ರಲ್ಲಿ ತೆರೆಕಂಡಿದ್ದರಿಂದ ಮೊದಲ ಸ್ಥಾನ ಕಳೆದುಕೊಳ್ಳಬೇಕಾಯಿತು   ಎಂಬ ದಾಖಲೆಯ ಅಂಶ, ಕನ್ನಡ ವೃತ್ತಿ ರಂಗಭೂಮಿ ಮತ್ತು ಸಿನಿಮಾದ ಕಲಾವಿದರು ಪರಸ್ಪರ ಸಹಕಾರದಿಂದ ನಿಮರ್ಿಸಿದ ಚಿತ್ರಗಳ ಯಶಸ್ಸಿನ ಕಥೆಯೊಂದಿಗೆ ಮದರಾಸಿನಿಂದ ಸ್ಯಾಂಡಲ್ವುಡ್ಗೆ ಕನ್ನಡ ಸಿನಿಮಾ ತಂತ್ರಜ್ಞಾನ, ಸಂಗೀತ, ಛಾಯಾಗ್ರಹಣ, ಸಂಸ್ಕರಣೆ ಇತ್ಯಾದಿ ತಾಂತ್ರಿಕ ಅಂಶಗಳು ಹಂತಹಂತವಾಗಿ ಬೆಳೆದುಬಂದ ದಾಖಲೆ ನೀಡುತ್ತದೆ.  
    ಅಮೃತ ಸಿನಿಮಾ ಸಂಭ್ರಮ ಕನ್ನಡ ಚಿತ್ರರಂಗದ ಸಮಗ್ರ ಇತಿಹಾಸವಲ್ಲ ಎಂಬ ಮಾತನ್ನು ಮೊದಲಿಗೇ ಸ್ಪಷ್ಟಪಡಿಸಲು ಬಯಸುತ್ತೇನೆ.  ಕನ್ನಡ ಚಿತ್ರಗಳು ನನಗೆ ಕೊಟ್ಟ ಆನಂದವನ್ನು ಓದುಗರೊಂದಿಗೆ ಹಂಚಿಕೊಳ್ಳುವ ನನ್ನ ಪುಟ್ಟ ಪ್ರಯತ್ನವಿದು.... ಎಲ್ಲಾ ಸೃಜನಶೀಲವಾದ, ಚಲನಶೀಲವಾದ ಮಾಧ್ಯಮಗಳಂತೆ ಚಿತ್ರರಂಗವೂ ಪ್ರತಿದಿನವೂ ಹೊಸ ಹೊಸ ಬದಲಾವಣೆಗಳಿಗೆ, ಸೇರ್ಪಡೆಗಳಿಗೆ, ಪ್ರಯೋಗಗಳಿಗೆ ಈಡಾಗುತ್ತಲೇ ಇರುತ್ತದೆ.  ಇಂದು ನಾಳೆಗೆ ಹಳೆಯದಾಗಿಬಿಡುವ ಇಂತಹದೊಂದು ಇತಿಹಾಸದ ತುಣುಕನ್ನು ಅಕ್ಷರ ರೂಪದಲ್ಲಿ ಹಿಡಿದಿಡುವ ಪ್ರಯತ್ನವಿದು..... ಎನ್ನುವ ಲೇಖಕರು  ಕನ್ನಡ ಚಿತ್ರರಂಗ ಅಮೃತ ಮಹೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ ಚಿತ್ರದುರ್ಗ ಆಕಾಶವಾಣಿಯಲ್ಲಿ ಕನ್ನಡ ಚಿತ್ರರಂಗದ ಇತಿಹಾಸ ಕುರಿತು ಸಿದ್ಧಪಡಿಸಿದ ನಲವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಧರಿಸಿ ಈ ಕೃತಿ ರಚಿಸಿದ್ದಾರೆ.  ಆಕಾಶವಾಣಿ ಸೇರಿದ ಮೇಲೆ ಸಾವಿರಾರು ಹೊಸ, ಹಳೆಯ ಹಾಡುಗಳನ್ನು ಪ್ರಸಾರಿಸಿ,  ಕನ್ನಡ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರನ್ನು ಸಂದಶರ್ಿಸಿ, ಮಾತುಕತೆ ನಡೆಸಿ, ಚಿತ್ರಗೀತೆಗಳನ್ನು ಆಧರಿಸಿದ ಹತ್ತಾರು ಕಾರ್ಯಕ್ರಮಗಳನ್ನು ವಿಶೇಷ ಮಾಹಿತಿಯೊಂದಿಗೆ ಬಿತ್ತರಿಸಿದ ತಮ್ಮ ಅನುಭವವನ್ನು ಈ ಕೃತಿಯಲ್ಲಿ ತುಂಬಿಸಿದ್ದಾರೆ.
    ಸಾಹಿತ್ಯ ಮತ್ತು ಸಿನಿಮಾ ಬಗೆಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀನಿವಾಸ ಪ್ರಸಾದ್ ಅವರು ಕಳೆದ ಇಪ್ಪತ್ತಾರು ವರ್ಷಗಳಿಂದ ಕನರ್ಾಟಕದ ವಿವಿಧ ಆಕಾಶವಾಣಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಪ್ರಸ್ತುತ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಹಿರಿಯ ಕಾರ್ಯಕ್ರಮ ನವರ್ಾಹಕರಾಗಿ  ಸೇವೆಸಲ್ಲಿಸುತ್ತಿದ್ದಾರೆ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿ, ಶಿವಮೊಗ್ಗ, ಚಿತ್ರದುರ್ಗ, ಮಂಗಳೂರುಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು ಸಾಗರ ಭೂ ವಿಜ್ಞಾನ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಮೂರು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ.
    ಕನ್ನಡ ಸಿನಿಮಾ ಸಂಭ್ರಮವನ್ನು ಹಂಚಿಕೊಂಡ ಹಲವು ಲೇಖನಗಳು ಅಲ್ಲಲ್ಲಿ ಕಾಣಿಸಿಕೊಂಡು, ಮಿಂಚಿ, ಮರೆಯಾಗಿ ಹೋಗಿವೆ.  ಗಟ್ಟಿಯಾಗಿ ನಿಂತ ಕೆಲವೇ ಕೃತಿಗಳು ಗ್ರಂಥಾಲಯಗಳ ರ್ಯಾಕುಗಳಲ್ಲಿ ರಾರಾಜಿಸಿವೆ.  ಚುರುಮುರಿಯಂತೆ ಹಂಚಿತಿನ್ನುವ, ಚಪ್ಪರಿಸುವ ರಸಗವಳದಂತೆ ರಸನಿಮಿಷಗಳನ್ನು ಹಂಚಿಕೊಳ್ಳುವ, ಸಿನಿಮಾವೊಂದರ ಆರಂಭದಿಂದ ಕೊನೆಯವರೆಗೆ ಕುತೂಹಲವನ್ನೇ ಉಣಿಸುವಂತಹ ಅಪರೂಪದ ವಿಷಯಗಳನ್ನು ತಿಳಿಸುವ ಅಮೃತ ಸಿನಿಮಾ ಸಂಭ್ರಮ ಈಗ ಕನ್ನಡ ಸಿನಿಮಾ ರಸಿಕರ ಕೈಸೇರಿ ಬಿಸಿ ಬಿಸಿಯಾಗಿ ಚಚರ್ೆಯಾಗುತ್ತಿದೆ.  ಸಂಶೋಧನಾ ಗ್ರಂಥಕ್ಕಿಂತಲೂ ಮಿಗಿಲಾಗಿರುವ ಈ ಕಾಂತಾಸಂಹಿತ ಸಿನಿಮಾಲಾಪಕ್ಕೆ ಮುಂದೊಮ್ಮೆ ಪಠ್ಯಪುಸ್ತಕವಾಗುವ ಯೋಗ ಪ್ರಾಪ್ತವಾದರೂ ಆಗಬಹುದು.  ಇಂತಹ ಅಪರೂಪದ ಪುಸ್ತಕವನ್ನು ನೀವೂ ಓದಿ, ಆನಂದಿಸಿ.
                                                  ಪುಸ್ತಕ ಪರಿಚಯ : ಯಾಜ್ಞವಲ್ಕ್ಯ

Sunday, September 5, 2010

Muzhe Chand Chahiye - Nanage Chandra Beku -Novel by Surendra Verma - Review in Prajavani 5 Sept 2010
Muzhe Chand Chahiye - Nanage Chandra Beku
Novel by Surendra Verma -
Review in Prajavani 5 Sept 2010
Thank you Editor


ಅಸಾಮಾನ್ಯ ರಂಗನಾಯಕಿಯ ಕಥೆ

ಯಾಜ್ಞವಲ್ಕ್ಯ1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಪಾತ್ರವಾದ ಈ ಹಿಂದಿ ಕೃತಿಯನ್ನು ಎಚ್.ಎಸ್. ಪಾರ್ವತಿಯವರು ಕನ್ನಡಕ್ಕೆ ತಂದಿದ್ದು ಚಂದ್ರನ ತುಂಡೊಂದನ್ನು ಓದುಗರಿಗೆ ನೀಡಿದ್ದಾರೆ


ಸುರೇಂದ್ರ ವರ್ಮಾ ಹಿಂದಿಯ ಜನಪ್ರಿಯ ನಾಟಕಕಾರ, ಲೇಖಕ. ಸೆಪ್ಟೆಂಬರ್ 7 ಅವರ ಎಪ್ಪತ್ತನೇ ಹುಟ್ಟುಹಬ್ಬ (ಜನನ: 1941).
ನನಗೆ ಚಂದ್ರ ಬೇಕು
ಹಿಂದಿ ಮೂಲ: ಸುರೇಂದ್ರ ವರ್ಮಾ
ಕನ್ನಡಕ್ಕೆ: ಎಚ್.ಎಸ್. ಪಾರ್ವತಿ
ಪು: 636; ಬೆ: ರೂ. 350
ಪ್ರ: ಸಾಹಿತ್ಯ ಅಕಾದೆಮಿ, ನವದೆಹಲಿ
ಸೆಲ್ಯುಲಾಯ್ಡನ ಮಾಂತ್ರಿಕ ದೀಪದಡಿಯಲ್ಲಿ ರಂಗಕಲೆಗೂ ಜೀವತುಂಬುವ, ಏಳೇಳು ತಲೆಮಾರಿನವರು ಸಾಧಿಸಲು ಸಾಧ್ಯವಾಗದ್ದನ್ನು ಒಬ್ಬಳೇ ಸಾಧಿಸಿ, ಗೆಲುವೆಂದರೆ ಇದೇ ಎಂದು ಹೆಮ್ಮೆಪಡುವಂತೆ ಮಾಡುವ ಸಾಧಕಿಯ ಆತ್ಮೋನ್ನತಿಯ ಜೊತೆಗೆ ಲೌಕಿಕ ಯಶಸ್ಸಿನ ಜೀವನಚಿತ್ರವೇ ‘ನನಗೆ ಚಂದ್ರ ಬೇಕು’. ಈ ಕಾದಂಬರಿಯಲ್ಲಿ ರಂಗಕಲೆ, ಸಿನಿಮಾಗಳ ರಮ್ಯಲೋಕ ಮತ್ತು ಸಾಮಾನ್ಯ ಜನಜೀವನದ ಸಂಘರ್ಷದ ಯಥಾಚಿತ್ರವನ್ನು ಕಟ್ಟಿಕೊಡಲು ಪ್ರಯತ್ನಿಸಿರುವ ಹಿಂದಿ ನಾಟಕಕಾರ ಹಾಗೂ ಕಾದಂಬರಿಕಾರ ಸುರೇಂದ್ರ ವರ್ಮಾ, ಕಲೆ ಮತ್ತು ಕಲಾವಿದನ ಉನ್ನತಿ, ಅವನತಿಯ ಹಂತಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ವರ್ಮಾರ ಈ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದು, ಕಾದಂಬರಿಯಲ್ಲಿ ಅರ್ಧಕ್ಕಿಂತ ಹೆಚ್ಚುಭಾಗ ರಾಷ್ಟ್ರೀಯ ನಾಟಕಶಾಲೆ, ರೆಪರ್ಟರಿ, ಮಂಡಿಹೌಸ್‌ನ ದೈನಂದಿನ ವಿದ್ಯಮಾನಗಳೇ ಪ್ರತಿಬಿಂಬಿತವಾಗಿವೆ.

ನಯನಾಜೂಕು ಇಲ್ಲದ ಕಲ್ಲಿನ ಚೂರು (ಸಿಲ್‌ಬಿಲ್) ಅನುಭವದ ಸಾಣೆಗೆ ಸಿಕ್ಕು ವರ್ಷಾ ವಸಿಷ್ಠ ರೂಪದ ವಜ್ರವಾಗಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು, ಸಾಧನೆಯ ಪಥದ ಪಯಣದಲ್ಲಿ ಒಬ್ಬಂಟಿಯಾಗಿಯೇ ಸಾಗಿ, ಹಟತೊಟ್ಟು ಆತ್ಮಸಂಗಾತಿ ಹರ್ಷನ ಮಗುವನ್ನು ಉಳಿಸಿಕೊಂಡು ಅವಿವಾಹಿತ ತಾಯಿ- ಭಾವನಾತ್ಮಕ ವಿಧವೆಯಾಗಿ, ಸ್ತ್ರೀ-ಸ್ವಾತಂತ್ರ್ಯದ ಪಾರಮ್ಯ ಮೆರೆಯುವ, ಕಲಾಯಾತ್ರೆಯಲ್ಲಿ ಸಹಯಾತ್ರಿಕರಿಗೂ ನೆಲೆತೋರಿಸುವ, ಸಹೃದಯೀ ಕಲಾವಿದೆಯ ಸಂವೇದನೆಗಳ ಸಾರಸಂಗ್ರಹ ಈ ಕಾದಂಬರಿ.

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕೇವಲ ಅಭಿನಯವನ್ನು ಮಾತ್ರ ಹೇಳಿಕೊಡುವುದಿಲ್ಲ. ಜೀವನದ ಮತ್ತು ಕಲೆಯ ಎಲ್ಲ ಮಗ್ಗುಲುಗಳನ್ನೂ ಒಳಹೊಕ್ಕು ನೋಡುವ ಅಂತರ್‌ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತಾರೆ. ಹೇಳಿಕೊಟ್ಟಷ್ಟನ್ನು ಕಲಿಯುವುದಕ್ಕಿಂತ ಅನುಭವದ ಪಾಕಶಾಲೆಯಲ್ಲಿ ಪರಿಪಕ್ವವಾಗಿ ಹೊರಹೊಮ್ಮುವ ಪಾತ್ರಗಳು ರಂಗಮಂಚದ ಕಿನ್ನರ ಲೋಕದಿಂದ ಧರೆಗವತರಿಸಿ ವಾಸ್ತವದ ಧಗೆಯಲ್ಲಿ ಬೆಂದುಹೋಗುವ ಉದಾಹರಣೆಗಳೂ ಕಾಣಿಸುತ್ತವೆ. ಕಲೆಗಾಗಿ ಕಲೆ ಎನ್ನುವವರಿಗೆ ಮಂಡಿಹೌಸ್‌ನ ಶಾಪದ ಅರಿವೂ ಇರಬೇಕು. ರಂಗಮಂಚದಲ್ಲಿನ ಕಲಿಕೆ ಮತ್ತು ರೆಪರ್ಟರಿಯಲ್ಲಿನ ಪರಿಶ್ರಮ ಅಪ್ಪಟ ಕಲಾವಿದರನ್ನು ಸೃಷ್ಟಿಸುತ್ತದೆ. ಈ ಕಾರಣಗಳಿಂದಾಗಿ, ರಂಗಕಲೆಯನ್ನು ಅಭ್ಯಸಿಸಲು ಅನೌಪಚಾರಿಕ ಪಠ್ಯದಂತೆಯೂ ಸುರೇಂದ್ರ ವರ್ಮರ ಈ ಕೃತಿಯನ್ನು ಓದಿಕೊಳ್ಳಬಹುದು. ಅಂತೆಯೇ, ಅರಿಸ್ಟಾಟಲ್‌ನ ನಾಟಕ ಮೀಮಾಂಸೆಗೆ ಕಾದಂಬರಿಯನ್ನೇನಾದರೂ ಉದಾಹರಣೆಯಾಗಿ ನೀಡಬಹುದು ಎಂಬುದಿದ್ದರೆ ಈ ಕೃತಿಯನ್ನೂ ಹೆಸರಿಸಬಹುದು.


1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಪಾತ್ರವಾದ ಈ ಹಿಂದಿ ಕೃತಿಯನ್ನು ಎಚ್.ಎಸ್. ಪಾರ್ವತಿಯವರು ಕನ್ನಡಕ್ಕೆ ತಂದಿದ್ದು ಚಂದ್ರನ ತುಂಡೊಂದನ್ನು ಓದುಗರಿಗೆ ನೀಡಿದ್ದಾರೆ. ಮೂಲ ಕೃತಿಯ ಯಥಾವತ್ ಅವತರಣಿಕೆಯ ಪ್ರಯತ್ನದಲ್ಲಿ ಹಲವು ತೊಡಕುಗಳು, ಅಬದ್ಧಗಳು ಅಡ್ಡಬಂದಿದ್ದರೂ ಕಥೆಯ ಓಟವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವಲ್ಲಿ ಅನುವಾದ ಯಶಸ್ವಿಯಾಗಿದೆ. ಪ್ರಾಚೀನ ಕಾವ್ಯ, ನಾಟಕ, ಆಧುನಿಕ ರಂಗಭೂಮಿ, ಪಾಶ್ಚಾತ್ಯ ರಂಗಭೂಮಿಯ ಆಳವಾದ ಪರಿಚಯ ಇದ್ದು, ಮೂಲ ಉಚ್ಚಾರದ ಪರಿಕಲ್ಪನೆ ಅನುವಾದಕರಿಗೆ ಇದ್ದಿದ್ದರೆ ಅನುವಾದಕ್ಕೆ ಇನ್ನಷ್ಟು ಮೆರಗು ಬರುತ್ತಿತ್ತು.

ರಷ್ಯನ್, ಫ್ರೆಂಚ್ ಮತ್ತಿತರ ದೇಶಗಳ ನಾಟಕಗಳ ಹೆಸರುಗಳು ಮೂಲದ ಹೆಸರಿನಂತಿಲ್ಲವೆನ್ನುವ ಕೊರತೆ ಎದ್ದು ಕಾಣುತ್ತದೆ. ಮರುಮುದ್ರಣದ ಸಮಯದಲ್ಲಾದರೂ ತಪ್ಪುಗಳನ್ನು ಸರಿಪಡಿಸುವ ಕೆಲಸವನ್ನು ಅಕಾಡೆಮಿ ಮಾಡಬೇಕಿದೆ. ಪುಟಕ್ಕೆ ಒಂದೆರಡು ಅಕ್ಷರ ಸ್ಖಾಲಿತ್ಯ, ಮುದ್ರಣ ದೋಷಗಳು, ಮೂಲ ಹಿಂದಿಯ ಪರಿಸರವನ್ನು ಕಟ್ಟಿಕೊಡುವ ಕೆಲಸದಲ್ಲಿ ಸೊರಗುವ ಅನುವಾದದ ಗುಣಮಟ್ಟ ಓದಿನ ರುಚಿ ಕೆಡಿಸುವಂತಿದೆ. ಸಾಹಿತ್ಯ ಅಕಾಡೆಮಿ ಪ್ರಕಟಿಸುತ್ತಿರುವ ಕನ್ನಡ ಅನುವಾದಗಳೆಲ್ಲವೂ ಈ ರೀತಿಯ ಅವಜ್ಞೆಗೆ ತುತ್ತಾಗಿವೆ ಎನ್ನುವುದು ವಿಷಾದದ ಸಂಗತಿ.


ಅಭಿಶಪ್ತ ರಂಗನಾಯಕಿಯ ಸಾಧನೆಯ ಇತಿವೃತ್ತ
ಕಾದಂಬರಿ : ನನಗೆ ಚಂದ್ರ ಬೇಕು
ಮೂಲ ಹಿಂದಿ : ಸುರೇಂದ್ರ ವರ್ಮ

ಕನ್ನಡ ಅನುವಾದ : ಎಚ್. ಎಸ್. ಪಾರ್ವತಿ

ಪ್ರಕಾಶಕರು : ಸಾಹಿತ್ಯ ಅಕಾದೆಮಿ, ನವದೆಹಲಿ
ಪುಟಗಳು : 636
ಬೆಲೆ : 350

ಆವೃತ್ತಿ : 2010


ವಾಸ್ತವ ಸ್ಥಿತಿಯ ದುಃಖ ದುಮ್ಮಾನಗಳನ್ನೆಲ್ಲಾ ರಂಗಮಂಚದ ಕಿನ್ನರಲೋಕದಲ್ಲಿ ಮುಳುಗಿ ಮರೆಯಲೆತ್ನಿಸುವ ಅಭಿಶಪ್ತ ಸೌಮ್ಯಮುದ್ರಾ ಪಾತ್ರಧಾರಿ ಸಿಲ್ಬಿಲ್-ಉರುಫ್-ಯಶೋದಾ ಶರ್ಮ-ಉರುಫ್-ವಷರ್ಾ ವಸಿಷ್ಠ ಎಂಬ ಸಂಪ್ರದಾಯಬದ್ಧ ಮನೆತನದ ಸಹಜ ಅಭಿನೇತ್ರಿ ಶಹಜಹಾಂಪುರದ 54ನೇ ನಂಬರಿನ ಮನೆಯಿಂದ ಹೊರಟು, ಮಿಶ್ರಿಲಾಲ್ ಡಿಗ್ರಿ ಕಾಲೇಜಿನ ರಂಗಮಂಚದಲ್ಲಿ ದಿವ್ಯಾ ಕತ್ಯಾಲ್ಳಿಂದ ದೀಕ್ಷೆ ಪಡೆದು, ಲಕ್ನೋದ ನಾಟಕಾಸಕ್ತರ ಜೊತೆ ಬೆಳೆದು, ರಾಷ್ಟ್ರೀಯ ನಾಟಕ ಶಾಲೆ ಮತ್ತು ರೆಪರ್ಟರಿಯಲ್ಲಿ ಡಾಕ್ಟರ್ ಅಟಲ್, ಸೂರ್ಯಭಾನು, ಹರ್ಷ ಮತ್ತು ಸಹನಟರಲ್ಲಿ ಪಳಗಿ, ಅಭಿಶಪ್ತ ಅಭಿದಾನವನ್ನು ಸಾರ್ಥಕಗೊಳಿಸುವಂತೆ ರಂಗಮಂಚದ ಟ್ರ್ಯಾಜಿಡಿ ಕ್ವೀನ್ ಎನಿಸಿ, ಕಲಾತ್ಮಕ ಸಿನಿಮಾಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರೀಯ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡು, ಮುಂಬೈ ಮಾಯಾನಗರಿಯ ಕಮಷರ್ಿಯಲ್ ಚಿತ್ರಗಳಲ್ಲಿ ಯಶಸ್ವಿಯಾಗಿ, ವಿದೇಶೀ ಚಿತ್ರಗಳಲ್ಲೂ ಅವಕಾಶ ಗಿಟ್ಟಿಸಿ ಸೈ ಎನಿಸಿಕೊಂಡು, ಸೆಲ್ಯುಲಾಯ್ಡ್ನ ಮಾಂತ್ರಿಕ ದೀಪದಡಿಯಲ್ಲೇ ರಂಗಕಲೆಗೂ ಜೀವತುಂಬಿಸುವ, ಏಳೇಳು ತಲೆಮಾರಿನವರು ಸಾಧಿಸಲು ಸಾಧ್ಯವಾಗದ್ದನ್ನು ಒಬ್ಬಳೇ ಸಾಧಿಸಿ, ಗೆಲುವೆಂದರೆ ಇದೇ ಎಂದು ಹೆಮ್ಮೆಪಡುವಂತೆ ಮಾಡುವ ಸಾಧಕಿಯ ಆತ್ಮೋನ್ನತಿಯ ಜೊತೆಗೆ ಲೌಕಿಕ ಯಶಸ್ಸಿನ ಜೀವನಚಿತ್ರವೇ ನನಗೆ ಚಂದ್ರ ಬೇಕು. ರಂಗಕಲೆ, ಸಿನಿಮಾಗಳ ರಮ್ಯ ಲೋಕ ಮತ್ತು ಸಾಮಾನ್ಯ ಜನಜೀವನದ ಸಂಘರ್ಷದ ಯಥಾಚಿತ್ರವನ್ನು ಕಟ್ಟಿಕೊಡಲು ಪ್ರಯತ್ನಿಸಿರುವ ಹಿಂದಿ ನಾಟಕಕಾರ ಹಾಗೂ ಕಾದಂಬರಿಕಾರ ಸುರೇಂದ್ರ ವರ್ಮ ಕಲೆ ಮತ್ತು ಕಲಾವಿದನ ಉನ್ನತಿ, ಅವನತಿಯ ಹಂತಗಳನ್ನು ಕಣ್ಣಿಗೆ ಕಟ್ಟುವಂತೆ ವಣರ್ಿಸುತ್ತಾರೆ. ಹಲವು ಉತ್ಕೃಷ್ಟ ನಾಟಕಗಳನ್ನು ರಚಿಸಿ ರಾಷ್ಟ್ರೀಯ ನಾಟಕ ಅಕಾಡೆಮಿ ಪುರಸ್ಕಾರಗಳಿಸಿರುವ ವಮರ್ಾರ ಈ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದು ಇದರಲ್ಲಿ ಅರ್ಧಕ್ಕಿಂತ ಹೆಚ್ಚುಭಾಗ ರಾಷ್ಟ್ರೀಯ ನಾಟಕಶಾಲೆ, ರೆಪರ್ಟರಿ, ಮಂಡಿಹೌಸ್ನ ದೈನಂದಿನ ವಿದ್ಯಮಾನಗಳೇ ಪ್ರತಿಬಿಂಬಿತವಾಗಿವೆ.

ನಯಾನಾಜೂಕು ಇಲ್ಲದ ಕಲ್ಲಿನ ಚೂರು (ಸಿಲ್ಬಿಲ್) ಅನುಭವದ ಸಾಣೆಗೆ ಸಿಕ್ಕು ವಷರ್ಾ ವಸಿಷ್ಠ ರೂಪದ ವಜ್ರವಾಗಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು, ಲೋಕಾಪವಾದವನ್ನೂ ಮೀರಿ, ಸಾಧನೆಯ ಪಥದ ಪಯಣದಲ್ಲಿ ಒಬ್ಬಂಟಿಯಾಗಿಯೇ ಸಾಗಿ, ಹಠತೊಟ್ಟು ಆತ್ಮಸಂಗಾತಿ ಹರ್ಷನ ಮಗುವನ್ನು ಉದರದಲ್ಲಿ ಉಳಿಸಿಕೊಂಡು ಅವಿವಾಹಿತ ತಾಯಿ-ಭಾವನಾತ್ಮಕ ವಿಧವೆಯಾಗಿ, ಸ್ತ್ರೀ-ಸ್ವಾತಂತ್ರ್ಯದ ಪಾರಮ್ಯ ಮೆರೆಯುವ, ಕಲಾಯಾತ್ರೆಯಲ್ಲಿ ಸಹಯಾತ್ರಿಕರಿಗೂ ನೆಲೆತೋರಿಸುವ ಸಹೃದಯೀ ಕಲಾವಿದೆಯ ಸಂವೇದನೆಗಳ ಸಾರಸಂಗ್ರಹವೇ ನನಗೆ ಚಂದ್ರ ಬೇಕು ಕೃತಿಯಲ್ಲಿದೆ.


ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕೇವಲ ಅಭಿನಯವನ್ನು ಮಾತ್ರ ಹೇಳಿಕೊಡುವುದಿಲ್ಲ. ಜೀವನದ ಮತ್ತು ಕಲೆಯ ಎಲ್ಲ ಮಗ್ಗುಲುಗಳನ್ನೂ ಒಳಹೊಕ್ಕು ನೋಡುವ ಅಂತರ್ದೃಷ್ಟಿಯನ್ನು ಅಥರ್ೈಸಿಕೊಳ್ಳಲು ಸಹಾಯಮಾಡುತ್ತಾರೆ. ಹೇಳಿಕೊಟ್ಟಷ್ಟನ್ನು ಮಾತ್ರ ಕಲಿಯುವುದಕ್ಕಿಂತ ಅನುಭವದ ಪಾಕಶಾಲೆಯಲ್ಲಿ ಪರಿಪಕ್ವವಾಗಿ ಹೊರಹೊಮ್ಮುವ ಪಾತ್ರಗಳು ರಂಗಮಂಚದ ಕಿನ್ನರ ಲೋಕದಿಂದ ಧರೆಗವತರಿಸಿ ವಾಸ್ತವದ ಧಗೆಯಲ್ಲಿ ಬೆಂದುಹೋಗುವ ಉದಾಹರಣೆಗಳೂ ಕಾಣಿಸುತ್ತವೆ. ಕಲೆಗಾಗಿ ಕಲೆ ಎನ್ನುವವರಿಗೆ ಮಂಡಿಹೌಸ್ನ ಶಾಪದ ಅರಿವೂ ಇರಬೇಕು. ರಂಗಮಂಚದಲ್ಲಿನ ಕಲಿಕೆ ಮತ್ತು ರೆಪರ್ಟರಿಯಲ್ಲಿನ ಪರಿಶ್ರಮ ಅಪ್ಪಟ ಕಲಾವಿದರನ್ನು ಸೃಷ್ಟಿಸುತ್ತದೆ. ರಂಗಕಲೆಯನ್ನು ಅಭ್ಯಸಿಸಲು ಅನೌಪಚಾರಿಕ ಪಠ್ಯವಾಗಿ ಸುರೇಂದ್ರ ವರ್ಮರ ನನಗೆ ಚಂದ್ರ ಬೇಕು ಕೃತಿಯನ್ನು ನಿಗದಿಗೊಳಿಸಿದರೆ ಕಲಾವಿದರಿಗೆ ಅನುಭವದ ರಸಪಾಕವನ್ನೇ ಧಾರೆಯೆರೆದಂತಾಗುತ್ತದೆ.
ಅರಿಸ್ಟಾಟಲ್ನ ನಾಟಕ ಮೀಮಾಂಸೆಗೆ ಕಾದಂಬರಿಯನ್ನೇನಾದರೂ ಉದಾಹರಣೆಯಾಗಿ ನೀಡಬಹುದು ಎಂಬುದಿದ್ದರೆ ಸುರೇಂದ್ರ ವಮರ್ಾರ ನನಗೆ ಚಂದ್ರ ಬೇಕು (ಮುಝೆ ಚಾಂದ್ ಚಾಹಿಯೇ) ಕೃತಿಗಿಂತ ಉತ್ತಮ ಉದಾಹರಣೆ ಕೊಡಲು ಸಾಧ್ಯವೇ ಇಲ್ಲ.

ಇಂಗ್ಲಿಷ್ನ ಪಿಕರೆಸ್ಕ್ ನಾವೆಲ್ ಪ್ರಕಾರದಂತೆ ಎಲ್ಲಿಯೋ ಶುರುವಾಗಿ, ಎಲ್ಲೆಲ್ಲಿಯೋ ತಿರುಗಾಡಿ, ಇನ್ನೆಲ್ಲೋ ಕರೆದೊಯ್ದು, ಮತ್ತೆಲ್ಲೋ ಧುತ್ತೆಂದು ಪ್ರತ್ಯಕ್ಷವಾಗಿಸುವ ಕಥೆ ಇದರಲ್ಲಿದೆ. ಅದೆಷ್ಟು ಪಾತ್ರಗಳು, ಸನ್ನಿವೇಶಗಳು, ಪರ-ವಿರೋಧಿ ಭಾವಗಳು, ಟೊಳ್ಳು-ಗಟ್ಟಿ ಸಂಬಂಧಗಳು, ದೇಹ-ಮನಸ್ಸುಗಳ ಹಸಿವು, ಸಾಧನೆಯ ಕಿಚ್ಚು, ಅಚಲ ನಿಧರ್ಾರ, ಎಲ್ಲವೂ, ಎಲ್ಲರೂ ಒಂದೊಂದು ಜೀವಂತ ಪಾತ್ರಗಳೇ ಇಲ್ಲಿ. ಕಾಳಿದಾಸನ ಕಾವ್ಯ ಮತ್ತು ನಾಟಕಗಳ ಪ್ರಸ್ತಾಪ ಕೃತಿಯುದ್ದಕ್ಕೂ ಸೂತ್ರದಂತೆ ಸುತ್ತಿಕೊಂಡೇ ಬರುತ್ತದೆ. ಹಾಗೆಯೇ ಆ್ಯಂಟನ್ ಚೆಕೋವ್ನ ನಾಟಕಗಳು ಮತ್ತು ಅದರ ಪಾತ್ರಗಳೊಂದಿಗೆ ತಾದಾತ್ಮಹೊಂದುವ ವಷರ್ಾಳ ಮನೋಭಾವ ಕೃತಿಯುದ್ದಕ್ಕೂ ನೆರಳಿನಂತೆ ಹಿಂಬಾಲಿಸುತ್ತಲೇ ಇರುತ್ತದೆ. ಕಾಲಕ್ಕೆ ತಕ್ಕಂತೆ ಬದಲಾಗದ ತಂದೆ, ಪುರಾತನ ಮೌಲ್ಯಗಳ ಪ್ರತೀಕ ಅನುಷ್ಟುಪ್ ಎಂಬ ಮಾತನಾಡುವ ಗಿಳಿ, ಸನ್ನಿವೇಶಕ್ಕೆ ಬಣ್ಣ ಬದಲಿಸುವ ಗೋಸುಂಬೆ ಸಂಬಂಧಿಗಳು, ಸಾಧನೆಗೆ ಬೆಂಬಲ ನೀಡುವ ತಮ್ಮ-ತಂಗಿ-ಗೆಳತಿ-ಗೆಳೆಯರು, ಪ್ರೋತ್ಸಾಹನೀಡುವ ಗುರು-ಹಿರಿಯರು, ಕಾಲೆಳೆಯುವ ಸಮಯಸಾಧಕರು ಎಲ್ಲರೂ ತಮ್ಮ ಇರುವಿಕೆಯನ್ನು ಸಾರ್ಥಕಪಡಿಸಿಕೊಂಡಿದ್ದಾರೆ. ಇಲ್ಲಿ ಪ್ರಸ್ತಾಪಿತವಾಗಿರುವ ಕಾವ್ಯ, ಕಥೆ, ಕಾದಂಬರಿ, ನಾಟಕಗಳ ಜೊತೆಗೆ ಮೂಲ ಕೃತಿಗಳ ಆಯ್ದ ಭಾಗಗಳ ಅವತರಣಿಕೆಗಳೊಂದಿಗೆ ಓದುಗರನ್ನು ರಮ್ಯಲೋಕಕ್ಕೇ ಕರೆದೊಯ್ಯುವ ಸುರೇಂದ್ರ ವರ್ಮರ ಅಗಾಧ ಪಾಂಡಿತ್ಯಕ್ಕೆ ಎಂಥವರೂ ತಲೆದೂಗಲೇಬೇಕು. ಸಿನಿಮಾ ವ್ಯಾಕರಣ ಆಥರ್ೈಸಿಕೊಳ್ಳಲಿಕ್ಕೆ, ಕಲಾತ್ಮಕ, ಕಮಷರ್ಿಯಲ್, ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರರಂಗದ ತೌಲನಿಕ ಅಧ್ಯಯನಕ್ಕೆ, ಇಲ್ಲಿ ವಿಫುಲ ಅವಕಾಶವಿದೆ.


1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಪಾತ್ರವಾದ ಈ ಹಿಂದಿ ಕೃತಿಯನ್ನು ಹಿರಿಯ ಅನುವಾದಕಿ ಶ್ರೀಮತಿ ಎಚ್. ಎಸ್. ಪಾರ್ವತಿಯವರು ಕನ್ನಡಕ್ಕೆ ತಂದಿದ್ದು ಚಂದ್ರನ ತುಂಡೊಂದನ್ನು ಓದುಗರಿಗೆ ನೀಡಿದ್ದಾರೆ. ಮೂಲ ಕೃತಿಯ ಯಥಾವತ್ ಅವತರಣಿಕೆಯ ಪ್ರಯತ್ನದಲ್ಲಿ ಹಲವು ತೊಡಕುಗಳು, ಅಬದ್ಧಗಳು ಅಡ್ಡಬಂದಿದ್ದರೂ ಕಥೆಯ ಓಟವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವಲ್ಲಿ ಕನ್ನಡದ ಅನುವಾದ ಯಶಸ್ವಿಯಾಗಿದೆ. ಪ್ರಾಚೀನ ಕಾವ್ಯ, ನಾಟಕ, ಆಧುನಿಕ ರಂಗಭೂಮಿ, ಪಾಶ್ಚಾತ್ಯ ರಂಗಭೂಮಿಯ ಆಳವಾದ ಪರಿಚಯ ಇದ್ದು, ಮೂಲ ಉಚ್ಚಾರದ ಪರಿಕಲ್ಪನೆ ಅನುವಾದಕರಿಗೆ ಇದ್ದಿದ್ದರೆ ಕನ್ನಡ ಅನುವಾದಕ್ಕೆ ಇನ್ನಷ್ಟು ಮೆರಗು ಬರುತ್ತಿತ್ತು. ರಷ್ಯನ್, ಫ್ರೆಂಚ್ ಮತ್ತಿತರ ದೇಶಗಳ ನಾಟಕಗಳ ಹೆಸರುಗಳು ಮೂಲದ ಹೆಸರಿನಂತಿಲ್ಲವೆನ್ನುವ ಕೊರತೆ ಎದ್ದು ಕಾಣುತ್ತದೆ. ಬಹುಶಃ ಒತ್ತಡ ಮತ್ತು ಸೀಮಿತ ಕಾಲಾವಧಿಯಲ್ಲಿ ಅನುವಾದ ಕಾರ್ಯವನ್ನು ಮುಗಿಸಿ ಕೊಡಲೇಬೇಕೆಂಬ ಹಠಕ್ಕೆ ಬಿದ್ದು ಅನುವಾದಿಸಿದಂತೆ ಕಾಣುವ ಈ ಕೃತಿಯನ್ನು ಮರುಮುದ್ರಣದ ಸಮಯದಲ್ಲಾದರೂ ಸುಧಾರಿಸಿ, ತಪ್ಪುಗಳನ್ನು ತಿದ್ದುಪಡಿಮಾಡುವ ಕೆಲಸ ಸಾಹಿತ್ಯ ಅಕಾಡೆಮಿ ಮಾಡಬೇಕಿದೆ. ಕನಿಷ್ಟ ಪುಟಕ್ಕೆ ಒಂದೆರಡು ಅಕ್ಷರ ಸ್ಖಾಲಿತ್ಯ, ಮುದ್ರಣ ದೋಷಗಳು, ಮೂಲ ಹಿಂದಿಯ ಪರಿಸರವನ್ನು ಕಟ್ಟಿಕೊಡುವ ಕೆಲಸದಲ್ಲಿ ಸೊರಗುವ ಅನುವಾದದ ಗುಣಮಟ್ಟ ಕನ್ನಡದ ತಜರ್ುಮೆಯನ್ನು ಜರ್ಝರಿತಗೊಳಿಸಿವೆ. ಸಾಹಿತ್ಯ ಅಕಾಡೆಮಿ ಪ್ರಕಟಿಸುತ್ತಿರುವ ಕನ್ನಡ ಅನುವಾದಗಳೆಲ್ಲವೂ ಈ ರೀತಿಯ ಅವಜ್ಞೆಗೆ ತುತ್ತಾಗಿವೆ ಎನ್ನುವುದು ಕನ್ನಡದ ಓದುಗರಿಗೆ ಬೇಸರ ತರಿಸಿದೆ. ಮುಖಪುಟ ರಚಿಸುವ ಕಲಾವಿದರಾದರೂ ಅಷ್ಟೇ, ಕೃತಿಯನ್ನು ಒಮ್ಮೆ ಓದಿ, ಅದರ ಭಾವವನ್ನು ಸ್ಫುಟವಾಗಿ ಒಡಮೂಡಿಸಬೇಕು. ಸುಮ್ಮನೇ ಶೀಷರ್ಿಕೆಯಷ್ಟನ್ನೇ ಕೇಳಿ ನಾಲ್ಕುಗೆರೆ ಎಳೆದು ಸಂಭಾವನೆ ಪಡೆಯುವುದರಲ್ಲೇ ಸಾರ್ಥಕ್ಯ ಗಳಿಸಿಕೊಳ್ಳಬಾರದು, ಅಲ್ಲವೇ?


ಇದೇ ಸೆಪ್ಟೆಂಬರ್ 7 ಕ್ಕೆ 70ರ ಹರೆಯಕ್ಕೆ ಕಾಲಿಟ್ಟಿರುವ / ಕಾಲಿಡುತ್ತಿರುವ ಸುರೇಂದ್ರ ವರ್ಮ (ಜನನ: 1941) ಪ್ರಾದೇಶಿಕ ಹಾಗೂ ರಾಷ್ಟ್ರೀಯ ರಂಗಭೂಮಿ, ಕಲಾತ್ಮಕ ಹಾಗೂ ಕಮಷರ್ಿಯಲ್ ಸಿನಿಮಾ, ಟಿ.ವಿ. ಛಾನೆಲ್ಗಳ ಧಾರಾವಾಹಿಗಳು, ಸಾಂಗ್ ಅಂಡ್ ಡ್ರಾಮಾ ಡಿವಿಷನ್, ಮಂಡಿಹೌಸ್ಗಳೊಂದಿಗಿನ ನಿಕಟ ಒಡನಾಟದ ಅನುಭವಗಳನ್ನು ಕಾದಂಬರಿಯ ಭೂಮಿಕೆಯಾಗಿಯೇ ಬಳಸಿದ್ದು, ಎಲ್ಲಿಯೂ ಬೇಸರ ತರಿಸದೆ ಸೊಗಸಾದ ಡಾಕ್ಯುಡ್ರಾಮಾದಂತೆಯೇ ಓದಿಸಿಕೊಂಡು ಹೋಗುತ್ತದೆ. ರೆಪರ್ಟರಿ ಮತ್ತು ರಾಷ್ಟ್ರೀಯ ನಾಟಕಶಾಲೆಯ ರಿಸಹರ್ಸಲ್ಗಳ ಪ್ರತಿಯೊಂದೂ ಸೂಕ್ಷ್ಮ ವಿವರಗಳು, ಪಾತ್ರಧಾರಿಗಳ ಮಾನಸಿಕ ಸಿದ್ಧತೆಗಳನ್ನು ಕುರಿತ ವಿಶ್ಲೇಷಣೆ ಅತ್ಯಂತ ಸಹಜವಾಗಿ ಮೂಡಿಬಂದಿದ್ದು ಭಾರತದ ಯಾವುದೇ ನಾಟಕ ಕಂಪೆನಿ, ರೆಪರ್ಟರಿ ಅಥವಾ ರಂಗಭೂಮಿ ತರಬೇತಿ ಶಾಲೆಗಳ ವಿದ್ಯಾಥರ್ಿಗಳಿಗೆ ಸಮೃದ್ಧ ಅನುಭವ ಉಣಬಡಿಸುವ ಪೂರಕ ಪಠ್ಯವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ನಮ್ಮ ರಂಗಭೂಮಿ ಕಲಾವಿದರು, ನಿದರ್ೇಶಕರು, ನಟರು ಈ ಕೃತಿಯನ್ನು ಅಭ್ಯಸಿಸುವಷ್ಟು ಪುರುಸೊತ್ತು ಮಾಡಿಕೊಳ್ಳುವರೆಂದು ಆಶಿಸೋಣ.


(ಮುಝೆ ಚಾಂದ್ ಚಾಹಿಯೇ ಹಿಂದಿ ಕಾದಂಬರಿಯ ಮುಖಪುಟದಲ್ಲಿ ನಟಿ ಉಮರ್ಿಳಾ ಮಾತೋಂಡ್ಕರ್ಳ ಭಾವಚಿತ್ರ ಮುದ್ರಿತವಾಗಿದ್ದು ಅನೇಕರು ಆಕೆಯ ಜೀವನಚಿತ್ರವಿದು ಎಂದು ತಪ್ಪಾಗಿ ಭಾವಿಸಬಹುದಾದ ಸಾಧ್ಯತೆಗಳಿವೆ. ಮುಝೆ ಚಾಂದ್ ಚಾಹಿಯೇ ಎಂಬ ಹೆಸರಿನ ಹಿಂದಿ ಚಲನಚಿತ್ರವೂ ತೆರೆಕಂಡಿದ್ದು ಅದರ ಕಥೆಗೂ ಈ ಕಾದಂಬರಿಯ ಕಥೆಗೂ ಯಾವುದೇ ಸಂಬಂಧವಿಲ್ಲ.)

Thursday, August 19, 2010

Sir Francis Bacon and Cold Mortuary - A Short Story in Kannada by Yajnyavalkya - Published in Thushara Monthly Sept. 2010

http://issuu.com/BedreManjunath/docs/sir_francis_bacon_and_cold_mortuary_story_in_thushಸರ್ ಫ್ರಾನ್ಸಿಸ್ ಬೇಕನ್ ಮತ್ತು ಶೀತಲ ಶವಾಗಾರ


- ಯಾಜ್ಞವಲ್ಕ್ಯ


'ಇದೆಲ್ಲಾ ಹೇಳಿದ್ರೆ ನೀವು ನಂಬೋದಿಲ್ಲ ಅಂತ ನಂಗೂ ಗೊತ್ತು. ಆಪ್ತರಕ್ಷಕ ಸಿನಿಮಾದ ಪ್ರಭಾವ ಜಾಸ್ತಿ ಆಗಿದ್ರಿಂದ ಹೀಗೆ ಆಡ್ತಾ ಇದ್ದೀರಿ ನೀವು ಅಂತ ಆರೋಪ ಬೇರೆ ನನ್ನ ಮೇಲೆ. ಅಬ್ನಾರ್ಮಲ್ ಸೈಕಾಲಜಿ ಮತ್ತು ಪ್ಯಾರಾ ಸೈಕಾಲಜಿಯನ್ನು ಆಸಕ್ತಿಯಿಂದ ಓದಿದ್ದರಿಂದ ನನ್ನ ತಲೆ ಕೆಟ್ಟುಹೋಗಿದೆ ಅನ್ನುವ ತೀಮರ್ಾನಕ್ಕೂ ಬಂದಿರಬಹುದು. ಆದರೆ ನಾನು ಹೇಳೋ ವಿಷಯ ಅಷ್ಟು ಸುಲಭವಾಗಿ ತಳ್ಳಿಹಾಕುವಂಥಾದ್ದಲ್ಲ ಅನ್ನೋದು ನಿಮಗೇ ಗೊತ್ತಾಗುತ್ತೆ,' ಪ್ರೊ. ಛಾಯಾಪತಿ ಬಡಬಡಿಸುತ್ತಲೇ ಇದ್ದರು. ಅವರು ಅಷ್ಟೊಂದು ಭಾವತೀವ್ರತೆಗೊಳಗಾಗಿದ್ದನ್ನು ನೋಡಿಯೇ ಇರದಿದ್ದ ಅವರ ಮಗ ಸುಹಾಸನಿಗೆ ತಂದೆಯನ್ನು ಸಮಾಧಾನ ಮಾಡುವುದು ಹೇಗೆ ಎನ್ನುವುದು ತಿಳಿಯದೇ ಸುಮ್ಮನೇ ನೋಡುತ್ತಾ ನಿಂತುಬಿಟ್ಟ.
ಇತ್ತೀಚೆಗಷ್ಟೇ ಇಬ್ಬರು ಆಪ್ತ ಸ್ನೇಹಿತರನ್ನು ಕಳೆದುಕೊಂಡಿದ್ದ ಪ್ರೊ. ಛಾಯಾಪತಿ ಯಾಕೋ ಒಂಥರಾ ಅಂತರಮುಖಿಯಾಗಿದ್ದನ್ನು ಗಮನಿಸಿದ್ದ ಸುಹಾಸ ಅವರನ್ನು ಹೆಚ್ಚು ಮಾತಾಡಿಸುವ ಗೋಜಿಗೇ ಹೋಗಿರಲಿಲ್ಲ. ಬೆಳಗ್ಗೆ, ಸಂಜೆ ವಾಕ್ ಮುಗಿಸಿ ಬಂದ ಮೇಲೆ ಲವಲವಿಕೆಯಿಂದಲೇ ಇರುತ್ತಿದ್ದವರು ಎರಡು ದಿನಗಳ ಹಿಂದೆ ವಾಕ್ ಮುಗಿಸಿ ಬಂದವರ ಮುಖ ಎಂದಿನಂತಿರಲಿಲ್ಲ. ಏನೋ ದುಮು ದುಮು. ಅಸಮಾಧಾನ. ಹಂಚಿಕೊಳ್ಳಲು ಅವರ ಗೆಳೆಯರು ಹತ್ತಿರದಲ್ಲಿರಲಿಲ್ಲ. ನಿವೃತ್ತಿಯ ನಂತರ ಮಗನ ಮನೆಯಲ್ಲಿ ಒಂದು ಕೊಠಡಿಯಲ್ಲಿ ಸೇರಿ, ತಾವಾಯ್ತು, ತಮ್ಮ ಕಂಪ್ಯೂಟರ್ ಆಯ್ತು, ಎನ್ನುವಷ್ಟಕ್ಕೆ ಮೌನಿಯಾಗಿಬಿಟ್ಟಿದ್ದರು.
ಸರಸ್ವತಿಪುರಂನಿಂದ ಸರಿಸುಮಾರು ಎರಡು ಕಿಲೋಮೀಟರ್ ನಡೆದರೆ ಬೋಗಾದಿ ಸಿಗುತ್ತೆ. ಅಲ್ಲಿನ ಗೋಶಾಲೆ, ಗೋವೈದ್ಯ ಕೇಂದ್ರ, ಸಾಯಿಸರಸ್ವತಿ ವಿದ್ಯಾಕೇಂದ್ರದ ಪೂಜ್ಯ ಶ್ರೀಗಳೊಂದಿಗೆ ಸಂಜೆ ಸ್ವಲ್ಪ ಹೊತ್ತು ಕಳೆಯುವ ಪ್ರೊಫೆಸರ್ ಆಧ್ಯಾತ್ಮದತ್ತ ವಾಲಿದ್ದರೋ, ಮನಃಶಾಂತಿಗಾಗಿ ಸುಮ್ಮನೇ ಹೋಗುತ್ತಿದ್ದರೋ ಹೇಳುವುದು ಕಷ್ಟವಿತ್ತು. ಅವರ ಹೆಂಡತಿ ದೂರದ ಡೆಹ್ರಾಡೂನ್ನಲ್ಲಿ ಎರಡನೇ ಸೊಸೆಯ ಬಾಣಂತನಕ್ಕೆ ಹೋದವರು ಅಲ್ಲಿಯೇ ಉಳಿದುಬಿಟ್ಟು ಇವರು ಇಲ್ಲಿ ಒಬ್ಬಂಟಿಯಾಗಿದ್ದರು. ಸಂಶೋಧನೆಗಾಗಿ ಸದಾ ಏಕಾಂಗಿಯಾಗಿ ಅಭ್ಯಾಸವಿದ್ದ ಪ್ರೊಫೆಸರ್ ಹೆಂಡತಿ ದೂರವಿದಾರೆನ್ನುವದನ್ನೊಂದು ಕೊರತೆ ಅಂದುಕೊಂಡಿರಲೇ ಇಲ್ಲ.
ಸಂಶೋಧನೆಯ ವಿಷಯ ಬಂದರೆ, ಇಂಗ್ಲಿಷ್ ಸಾಹಿತ್ಯದ ಆರಂಭದಿಂದ ಇಲ್ಲಿನವರೆಗಿನ ಪ್ರಬಂಧ ಸಾಹಿತ್ಯದ ಬಗ್ಗೆ ಅಥಾರಿಟಿ ಎನಿಸಿಕೊಂಡಿದ್ದವರೂ ಹೆಚ್ಚಿನ ಮಾಹಿತಿಗಾಗಿ ಛಾಯಾಪತಿಯವರನ್ನೇ ಅವಲಂಬಿಸುತ್ತಿದ್ದದ್ದು ನೋಡಿದರೆ ದೇಶ ವಿದೇಶಗಳಲ್ಲಿ ಅವರ ಪಾಂಡಿತ್ಯಕ್ಕೆ ಇದ್ದ ಬೆಲೆ ಅರ್ಥವಾಗುತ್ತದೆ. ಪ್ರಚಾರ, ಪ್ರದರ್ಶನ, ಪ್ರಶಸ್ತಿಗಳಿಂದ ದೂರವಾಗಿ, ಬರೆದದ್ದೆಲ್ಲವನ್ನು ತಮ್ಮ ವೆಬ್ಸೈಟ್ಗಳಲ್ಲಿ ಪ್ರಕಟಿಸಿ ಉಚಿತ ಉಪಯೋಗಕ್ಕೆ ಬಿಟ್ಟುಕೊಡುತ್ತಿದ್ದ ಉದಾರಿ ಪ್ರೊಫೆಸರ್ ಎಂದರೆ ಎಲ್ಲರಿಗೂ ಪ್ರೀತಿಯೇ. ಇವರ ಮಾರ್ಗದರ್ಶನದಲ್ಲಿ ಪ್ರೌಢಪ್ರಬಂಧಗಳನ್ನು ಮಂಡಿಸಿದವರೆಷ್ಟೋ ಮಂದಿ ಉನ್ನತ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದರೂ ತಾವು ಮಾತ್ರ ವೇದಿಕೆಯ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳದಷ್ಟು ನಮ್ರವಾಗಿ ದೂರವೇ ಉಳಿದಿದ್ದರು. ನೆಂಟರಿಷ್ಟರಲ್ಲಿಯೂ ಅಷ್ಟಾಗಿ ಬೆರೆಯದೇ, ಶುಭಾಶುಭ ಸಮಾರಂಭಗಳಲ್ಲಿ ಮನಸ್ಸಿಲ್ಲದೇ ತಮ್ಮದೇ ಲೋಕದಲ್ಲಿ ವಿಹರಿಸುವುದು ಅವರಿಗೆ ತುಂಬಾ ಇಷ್ಟ.
ಮೊನ್ನೆ ಸಂಜೆ ವಾಕ್ ಮುಗಿಸಿ ಬಂದವರು ರಾತ್ರಿ ಹತ್ತಕ್ಕೆ ಬೋಗಾದಿಯ ಆಶ್ರಮಕ್ಕೆ ಬಿಟ್ಟುಬರಲು ಸುಹಾಸನಿಗೆ ಕೇಳಿದರು. ಊಟ ಮುಗಿಸಿ ಇಬ್ಬರೂ ಬೈಕ್ ಹತ್ತಿ ಆಶ್ರಮ ತಲುಪಿದಾಗ ಆಶ್ರಮ ಶಾಲೆಯ ವಿದ್ಯಾಥರ್ಿಗಳೆಲ್ಲಾ ಆಗಲೇ ನಿದ್ರೆಗೆ ಜಾರಿದ್ದ ಲಕ್ಷಣ ಕಂಡುಬಂದಿತ್ತು. ಸ್ವಾಮೀಜಿಯವರ ಕುಟೀರವೊಂದರಲ್ಲಿ ಬೆಳಕಿತ್ತು. ಪಕ್ಕದಲ್ಲಿದ್ದ ಯೋಗಶಾಲೆಯ ಬೃಹತ್ ಆಡಿಟೋರಿಯಂ, ಲಕ್ಷಣವಾದ, ಸಾಂಪ್ರದಾಯಿಕ ಕಲೆಯಿಂದ ಅಲಂಕೃತವಾದ ವೇದಿಕೆಯಲ್ಲಿ ಮಂದವಾದ ಬೆಳಕು ಬೀರುತ್ತಿದ್ದ ದೀಪಸ್ತಂಭಗಳು ನೋಡುವವರಿಗೆ ಪ್ರಶಾಂತ ವಾತಾವರಣದ ಅನುಭವ ತರಿಸುವಂತಿತ್ತು.
ವಿಶಾಲವಾದ ಸಭಾಭವನದ ವೇದಿಕೆಯ ಬಳಿ ಹೋದಾಗ ಸ್ವಾಮೀಜಿಯವರ ಜೊತೆ ಮನೋವೈದ್ಯ ಧನಂಜಯ, ಇಂಜಿನಿಯರ್ ಉಮೇಶ, ಫಿಸಿಕ್ಸ್ ಲೆಕ್ಚರರ್ ರಾಘವೆಂದ್ರ ಮಾತಾಡುತ್ತ ಕುಳಿತಿದ್ದರು. ತಂದೆ - ಮಗ ಇಬ್ಬರೂ ಗುರುಗಳಿಗೆ ನಮಸ್ಕರಿಸಿ, ಜೊತೆಯವರಿಗೂ ಅಭಿವಾದನ ಹೇಳಿ ಅಲ್ಲೇ ಕುಳಿತರು.
'ಪ್ರೊ. ಛಾಯಾಪತಿಯವರೇ, ನೀವು ತಪ್ಪು ಭಾವಿಸೋಲ್ಲ ಅಂತ ತಿಳ್ಕೊಂಡೇ ನಾನಿವರನ್ನು ಇವತ್ತು ಇಲ್ಲಿ ಕರೆಸಿದ್ದೇನೆ. ನಿಮ್ಮ ವೆಬ್ಸೈಟ್ಗಳ ಮೂಲಕ ಇವರಿಬ್ಬರಿಗೂ ನಿಮ್ಮ ಪರಿಚಯ ಇದೆ. ಇವರು ಪರಿಚಯ ನಿಮಗೂ ಇದೆ ಅಂದ್ಕೊಂಡಿದ್ದೇನೆ. ನಿಮ್ಮ ಪ್ರಯೋಗಕ್ಕೆ ಒಂದಿಬ್ಬರು ಸಾಕ್ಷಿದಾರರು ಬೇಕು ಅನ್ನಿಸಿತು. ರೆಕಾಡರ್್ ಮಾಡುವ ವ್ಯವಸ್ಥೆ ರೆಡಿ ಇದೆ. ಉಮೇಶ ಅದನ್ನೆಲ್ಲಾ ನೋಡ್ಕೋತಾರೆ. ಪ್ಯಾರಾ ಸೈಕಾಲಜಿಯ ಬಗ್ಗೆ ಸಂಶೋಧನೆ ಮಾಡಲಿಕ್ಕೆ ಶುರುಮಾಡಿರೋ ಡಾ. ಧನಂಜಯ ನಿಮ್ಮ ಪ್ರಯೋಗ ನೋಡಬೇಕು ಅಂತಲೇ ಸಿದ್ಧರಾಗಿದ್ದಾರೆ. ಪ್ರಯೋಗಕ್ಕೆ ಬೇಕಾದ ಸಿದ್ಧತೆಗಳೇನಾದ್ರೂ ಇದ್ರೆ ಹೇಳಿ, ಶಿಷ್ಯರಿಗೆ ಹೇಳಿ ಏಪರ್ಾಡು ಮಾಡಿಸ್ತೇನೆ,' ಎಂದರು ನಾರಾಯಣ ಸ್ವಾಮಿಜಿ.
'ಏನೂ ಬೇಡ ಗುರುಗಳೇ. ಇದೇನು ಅಂತಹ ದೊಡ್ಡ ಪ್ರಯೋಗ ಅಲ್ಲ. ಸರಳವಾದ, ನಂಬಿಕೆಯ ಆಧಾರದ ಮೇಲೆ ನಡೆಸುವ ಒಂದು ಸೆಷನ್ ಅಷ್ಟೆ. ನನ್ನ ಮಗನಿಗೂ ಇದನ್ನು ನಾನು ತೋರಿಸಿಲ್ಲ. ಇವತ್ತು ಅವನೂ ನೋಡಲಿ ಅಂತಲೇ ಕರೆತಂದಿದ್ದೇನೆ. ಈಗ ಇಲ್ಲಿರುವಷ್ಟು ಜನ ಬಿಟ್ಟು ಇನ್ನಾರೂ ಇರುವುದು ಬೇಡ ಅಂದ್ಕೋತೇನೆ. ಏಕಾಂತಕ್ಕೆ ಧಕ್ಕೆ ಬಂದರೆ ಪ್ರಯೋಗ ಯಶಸ್ವಿಯಾಗೋಲ್ಲ. ನನಗೆ ಗೊತ್ತಿರೋವಷ್ಟನ್ನು ಮಾತ್ರ ನಾನು ಮಾಡಿ ತೋರಿಸ್ತೇನೆ. ಇದರಲ್ಲಿ ನನಗೆ ಹೆಚ್ಚಿನ ಪಾಂಡಿತ್ಯ ಏನೂ ಇಲ್ಲ. ಕುತೂಹಲ ಮಾತ್ರ ಇದೆ,' ಎಂದ ಛಾಯಾಪತಿ ತಮ್ಮ ಪ್ರಯೋಗದ ಬಗ್ಗೆ ಮಾತಾಡಲು ಉತ್ಸುಕರಾದರು.
ವೇದಿಕೆಯ ಒಂದು ಮೂಲೆಯಲ್ಲಿದ್ದ ದೊಡ್ಡ ಗಾಜಿನ ಟೀ-ಪಾಯ್ ಅನ್ನು ನಡುವೆ ತಂದಿಟ್ಟರು. ಒಂದಿಂಚು ದಪ್ಪನೇ ಕರಿ ಗಾಜಿನ ಹಲಗೆ ಅದು. ಅದರ ಮೇಲೆ ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳನ್ನು, ಸೊನ್ನೆಯಿಂದ ಒಂಬತ್ತರವರೆಗಿನ ಅಂಕಿಗಳನ್ನು, ಯೆಸ್, ನೊ, ಗುಡ್ ಬೈ ಪದಗಳನ್ನು ಬಿಳಿಯ ಮಾರ್ಕರ್ನಿಂದ ಬರೆದು ಔಜé ಬೋರ್ಡನ್ನು ಸಿದ್ಧಗೊಳಿಸಿದರು. ಒಂದು ಪುಟ್ಟ ಗಾಜಿನ ಲೋಟವನ್ನು ಮಗುಚಿ ಬೋಡರ್ಿನ ಮೇಲೆ ಇಟ್ಟರು. ವೇದಿಕೆಯಲ್ಲಿದ್ದ ಎಣ್ಣೆಯ ದೀಪಗಳ ಬೆಳಕೇ ಸಾಕಷ್ಟಿತ್ತು. ಒಂದು ಪುಟ್ಟ ಕರಂಡದಲ್ಲಿ ಇದ್ದಿಲು ತುಂಬಿ, ಬೆಂಕಿಕೊಟ್ಟು, ನಿಗಿನಿಗಿ ಕೆಂಡ ಉರಿಸಿದರು. ಇವೆಲ್ಲವನ್ನು ಉಮೇಶ ತನ್ನ ವೀಡಿಯೋದಲ್ಲಿ ಮುದ್ರಿಸಿಕೊಳ್ಳುತ್ತಲೇ ಇದ್ದ. ಟೀ-ಪಾಯ್ ಸುತ್ತ, ತುಸು ದೂರದಲ್ಲಿ ಉಳಿದ ನಾಲ್ವರು ಕುಳಿತು ನೋಡುವಂತೆ ಕುಚರ್ಿ ಹಾಕಿ, ತಾವು ನೆಲದ ಮೇಲೆ ಪದ್ಮಾಸನ ಹಾಕಿ ಕುಳಿತರು. ಡಾ. ಧನಂಜಯ ತನ್ನ ಜೇಬಿನಲ್ಲಿದ್ದ ಐಪಾಡ್ನ ಧ್ವನಿಮುದ್ರಣದ ಬಟನ್ ಒತ್ತಿದ.
'ನೋಡಿ ಗುರುಗಳೇ, ಇದನ್ನೆಲ್ಲಾ ನಿಮ್ಮ ಎದುರು ತೋರಿಸುವುದು ಎಷ್ಟು ಸೂಕ್ತ ಅನ್ನೋದು ನನಗೆ ಗೊತ್ತಿಲ್ಲ. ಇದೇ ವೇದಿಕೆಯಲ್ಲಿ ನೀವು ಹೋಮ, ಹವನಗಳನ್ನು ಮಾಡಿದ್ದೀರಿ. ಯೋಗಾಸನದ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟು ಸಿ.ಡಿ. ತಯಾರಿಸಿದ್ದೀರಿ. ದೇವಾನುದೇವತೆಗಳ ಬಗ್ಗೆ ನಿರರ್ಗಳವಾಗಿ ಮಾತಾಡುವ ತಮ್ಮ ಪಾಂಡಿತ್ಯದ ಮುಂದೆ ಅತ್ಯಂತ ಕ್ಷುಲ್ಲಕವಾದದ್ದನ್ನು ತೋರಿಸಲು ಹೊರಟಿರುವ ನನ್ನ ಹುಂಬತನವನ್ನು ಕ್ಷಮಿಸಬೇಕು,' ಎಂದು ಕ್ಷಮೆಕೋರುವ ಧಾಟಿಯಲ್ಲಿ ಮಾತಿಗೆ ಶುರು ಮಾಡಿದರು ಛಾಯಾಪತಿ.
ಔಜé ಬೋಡರ್್ ಬರೆದಾಗಲೇ ಸುಹಾಸನಿಗೆ ಇದು ಸಿಯಾನ್ಸ್ಗೆ ನಡೆಸಿರುವ ಸಿದ್ಧತೆ ಎಂದು ಗೊತ್ತಾಗಿತ್ತು. ನೇರವಾಗಿ ತೋರಿಸಿಕೊಡದಿದ್ದರೂ ಆಗೀಗ ಅಪ್ಪ ಬರೆಯುತ್ತಿದ್ದ ಟಿಪ್ಪಣಿಗಳನ್ನು, ಲೇಖನಗಳನ್ನು ಗಮನಿಸುತ್ತಿದ್ದ ಸುಹಾಸನಿಗೆ ಇದರ ಪ್ರಾತ್ಯಕ್ಷಿಕೆ ನೋಡಲು ಅವಕಾಶ ಸಿಕ್ಕಿರಲಿಲ್ಲ. ತನ್ನ ಜೇಬಿನಲ್ಲಿದ್ದ ಟಚ್ಪ್ಯಾಡ್ನಲ್ಲಿ ಕ್ವಿಲ್ ಸಹಾಯದಿಂದ ಅಲ್ಲಿನ ದೃಶ್ಯವನ್ನು ರಚಿಸತೊಡಗಿದ. ಪ್ಯಾರಾಸೈಕಾಲಜಿಯಲ್ಲಿ ಬರುವ ಪ್ರೇತಾತ್ಮ ಸಂಭಾಷಣೆಯ ಥಿಯರಿ ಓದಿದ್ದ ಡಾ. ಧನಂಜಯನಿಗೆ ಇದೊಂದು ಥ್ರಿಲ್ಲಿಂಗ್ ಅನುಭವ. ಓದಿದ್ದಕ್ಕಿಂತ ಹೆಚ್ಚು ವಿಷಯ ತಿಳಿಯುವ ಕುತೂಹಲ. ಸ್ವಾಮೀಜಿಯವರು ಇಂಗ್ಲೆಂಡಿನಲ್ಲಿದ್ದಾಗ ಅವರ ಅತಿಥೇಯರು ಸ್ಪಿರಿಟ್ ಎಂಬ ಹೆಸರಿನಲ್ಲಿ ಇಂಥದ್ದೇ ಏನೋ ಒಂದನ್ನು ಮಾಡಿತೋರಿಸಿದ್ದನ್ನು ನೆನಪಿಸಿದರು.
'ಈ ಔಜé ಬೋಡರ್್ ಸಿಯಾನ್ಸ್ನಲ್ಲಿ ಶತಶತಮಾನಗಳಿಂದ ಬಳಕೆಯಲ್ಲಿದೆ. ಈಗ ಅದಕ್ಕೂ ಮುಂದೆ ಹೋಗಿದೆ ಈ ಆಕಲ್ಟ್ ಸೈನ್ಸ್. ಒಂಥರಾ ಮೆಟಾಫಿಸಿಕ್ಸ್ ಅನ್ನಿ. ಇದನ್ನು ವಿಜ್ಞಾನ ಅಂತಲೇ ಕರೀತೇನೆ. ಇದು ಭೂತ ಪ್ರೇತಗಳನ್ನು ಆವಾಹಿಸಿ, ಕೆಟ್ಟದ್ದಕ್ಕಾಗಿ ಬಳಸಿಕೊಳ್ಳೋ ವಿದ್ಯೆ ಅಲ್ಲ. ಅದನ್ನು ವಾಮಾಚಾರಿಗಳು ಬೇಕಾದಂತೆ ಬಳಸಿಕೊಳ್ತಾರೆ ಅಂತ ಕೇಳಿದ್ದೇನೆ. ಸಿಯಾನ್ಸ್ ಬಗ್ಗೆ ನಿಮಗೆ ಗೊತ್ತೇ ಇದೆ ಅಂದುಕೊಂಡಿದ್ದೇನೆ. ಆದರೂ ಪ್ರಾಸ್ತಾವಿಕವಾಗಿ ಒಂದೆರಡು ನುಡಿಗಳಲ್ಲಿ ವಿವರಿಸೋದಾದ್ರೆ, ನಮಗೆ ಆತ್ಮೀಯರಾದವರ ಅಥವಾ ತುಂಬಾ ಬೇಕಾದವರ ಆತ್ಮಗಳನ್ನು ಆವಾಹಿಸಿ ಅವರಿಂದ ಮಾರ್ಗದರ್ಶನ ಪಡಿಯೋದು. ಹಿರಿಯರ ಆತ್ಮಗಳು ಕಿರಿಯರಿಗೆ ಮಾರ್ಗದರ್ಶನ ಮಾಡಲು ಯಾವಾಗಲೂ ಕಾತರಿಸುತ್ತಿರುತ್ತವಂತೆ. ಕಿರಿಯರು ಅವರನ್ನು ಕೇಳುವುದೇ ಕಡಿಮೆ ಆಗಿರುವುದರಿಂದ ಆತ್ಮಗಳು ತಟಸ್ಥವಾಗಿವೆಯಂತೆ! ಸದಾ ಎಲ್ಲವನ್ನೂ ಪ್ರಶ್ನೆ ಮಾಡುವ ಕಿರಿಯರು ಹಿರಿಯರ ಆತ್ಮಗಳನ್ನು ಏಕೆ ಕೇಳುವ ಪ್ರವೃತ್ತಿ ಬೆಳಸಿಕೊಂಡಿಲ್ಲವೋ ಅರ್ಥವಾಗುತ್ತಿಲ್ಲ. ಇವತ್ತು ನಿಮ್ಮ ಎದುರಿಗೆ ನಾನು ಸಮಾಜಕ್ಕೆ ಅತ್ಯಂತ ಉಪಕಾರಿಗಳಾಗಿದ್ದ ಇಬ್ಬರು ಸಜ್ಜನರ ಆತ್ಮಗಳನ್ನು ಆವಾಹಿಸಿ ತೋರಿಸ್ತೇನೆ. ಕಿರಿಲಿಯನ್ ಫೋಟೋಗ್ರಫಿ ಗೊತ್ತಿದ್ದರೆ ಅವರ ಚಿತ್ರಗಳನ್ನು ಸೆರೆಹಿಡಿಯಬಹುದು,' ಎಂದು ಹೇಳಿ, ತಮ್ಮ ಮಾತು ನಿಲ್ಲಿಸಿ, ಕರಂಡದಲ್ಲಿದ್ದ ಕೆಂಡದ ಮೇಲೆ ಒಂಚೂರು ಸಾಂಬ್ರಾಣಿ ಉದುರಿಸಿ, ಘಮ ಘಮ ಧೂಮ ಎದ್ದಮೇಲೆ ಧ್ಯಾನಮುದ್ರೆಯಲ್ಲಿ ಒಂದು ನಿಮಿಷ ಕೂತು ನಂತರ ಬಲಗೈ ಮೇಲೆ ಚಾಚಿ, ತೋರು ಬೆರಳಿನಿಂದ ಔಜé ಬೋಡರ್ಿನ ಮೇಲಿದ್ದ ಪುಟ್ಟ ಗಾಜಿನ ಲೋಟದ ಮೇಲೆ ಮೃದುವಾಗಿ ಅದುಮಿದರು. ದೀಪದ ಮಂದ ಬೆಳಕಿನಲ್ಲಿ ಎಂಥದ್ದೋ ಸಂಚಲನೆ.
ಬೆರಳು ಇಡುವುದನ್ನೇ ಕಾದಿದ್ದಂತಿದ್ದ ಆ ಲೋಟ ಕಂಪಿಸಿತು. ನಿಧಾನಕ್ಕೆ ಅತ್ತ ಇತ್ತ ಚಲಿಸಲಾರಂಭಿಸಿತು. ನೋಡಿದವರಿಗೆ ಅದನ್ನು ಇವರೇ ದೂಡುತ್ತಿದ್ದಾರೆ ಎಂಬ ಭಾವನೆ ಬರಿಸುತ್ತಿತ್ತು.
'ಆರ್ ಯು ಮಿಸ್ಟರ್ ಕಣ್ಣನ್?' ಪ್ರಶ್ನೆ ಕೇಳಿದ ಛಾಯಾಪತಿ ತಮ್ಮ ಗಮನವನ್ನು ಲೋಟದ ಮೇಲಿದ್ದ ಬೆರಳಮೇಲೆ ಕೇಂದ್ರೀಕರಿಸಿದರು. ಲೋಟ ಈಗ ನಿಧಾನವಾಗಿ ಅಲ್ಲಾಡುತ್ತಾ 'ಯೆಸ್' ಎಂದು ಗುರುತಿಸಿದ್ದ ಜಾಗದಲ್ಲಿ ನಿಂತಿತು.
'ಥ್ಯಾಂಕ್ಯು ಕಣ್ಣನ್. ನಿಮ್ಮ ಮನೆಯನ್ನು ಯಾರಿಗೋ ಬಾಡಿಗೆ ಕೊಟ್ಟು, ಈಗ ಅದನ್ನು ಮಾರ್ತಾ ಇದ್ದಾನಲ್ಲ ನಿಮ್ಮ ಪುತ್ರ. ಅದರ ಬಗ್ಗೆ ನಿಮಗೆ ಬೇಜಾರಿಲ್ಲವಾ? ನಿಜ ಹೇಳಿ?' ಮತ್ತೆ ಪ್ರಶ್ನಿಸಿದರು. ಗಾಜಿನ ಲೋಟ ಈಗ 'ನೋ' ಜಾಗಕ್ಕೆ ಬಂತು.
'ನಿಜವಾಗಿಯೂ?!' ಆಶ್ಚರ್ಯ ಪಡುವ ಸರದಿ ಛಾಯಾಪತಿಯವರದ್ದು. ಲೋಟ 'ಯೆಸ್' ಜಾಗ ಸೇರಿತು.
'ಯಾಕೆ ಅಂತ ವಿವರಿಸ್ತೀರಾ?' ಕೇಳಿದರು ಛಾಯಾಪತಿ. ಲೋಟ 'ನೊ' ಜಾಗಕ್ಕೆ ಹೋಗಿ ನಿಂತಿತು.
'ಸಾರಿ ಸರ್. ಬೇಜಾರಾಗಿದ್ರೆ ಕ್ಷಮಿಸಿ. ಬಂದು ನನ್ನ ಪ್ರಶ್ನೆಗೆ ಉತ್ತರ ಕೊಟ್ಟದ್ದಕ್ಕಾಗಿ ತುಂಬಾ ಥ್ಯಾಂಕ್ಸ್. ನೀವೀಗ ದಯಮಾಡಿ ಸ್ವಸ್ಥಾನಕ್ಕೆ ವಾಪಸ್ ತೆರಳಬಹುದು. ಶುಭವಿದಾಯ,' ಎಂದು ಹೇಳಿ ಲೋಟದತ್ತ ನೋಡಿದರು. ಅದು ಈಗ 'ಗುಡ್ ಬೈ' ಎಂದು ಬರೆದಿರೋ ಜಾಗದಲ್ಲಿ ನೆಲೆಸಿತ್ತು. ನಿಧಾನಕ್ಕೆ ತಮ್ಮ ತೋರುಬೆರಳನ್ನು ಲೋಟದ ಮೇಲಿಂದ ಎತ್ತಿ, ಕೈಯನ್ನು ಹಿಂದಕ್ಕೆ ಎಳೆದುಕೊಂಡು, ಪದ್ಮಾಸನದಲ್ಲಿ ಧ್ಯಾನ ಮುದ್ರೆಯಲ್ಲಿ ಒಂದು ನಿಮಿಷ ಕುಳಿತು ನಂತರ ರಿಲ್ಯಾಕ್ಸ್ ಆದರು. ನೋಡುತ್ತಿದ್ದವರಿಗೆ ಅಷ್ಟಿಷ್ಟು ಮಾತ್ರ ಅರ್ಥವಾಗಿತ್ತು. ಆತ್ಮ ಬಂದದ್ದು, ಉತ್ತರ ಕೊಟ್ಟದ್ದು, ಮರಳಿ ಹೋದದ್ದು ಹೇಗೆ ಅಂತ ಮಾತ್ರ ಗೊತ್ತಾಗಲಿಲ್ಲ.
ನೀರವ ಮೌನ ಮುರಿಯುತ್ತಾ ಛಾಯಾಪತಿ, 'ನಾನು ಬಹುಶಃ ಏನು ಮಾಡಿದೆ ಎನ್ನುವುದನ್ನು ನೀವೆಲ್ಲಾ ನೋಡಿ ಅರ್ಥ ಮಾಡಿಕೊಂಡಿದ್ದೀರಿ ಅಂದ್ಕೋತೇನೆ. ಈ ಕಣ್ಣನ್ ಅವರನ್ನೇ ಯಾಕೆ ಕರೆದೆ ಅನ್ನೋದನ್ನೂ ಹೇಳ್ತೇನೆ,' ಎಂದರು.
ಎರಡು ದಿನಗಳ ಹಿಂದೆ ಸಂಜೆ ವಾಕಿಂಗ್ ಮುಗಿಸಿ ಬಂದವರು ಎಂದಿನಂತಿರಲಿಲ್ಲ ಎಂಬುದನ್ನು ಗಮನಿಸಿದ್ದ ಸುಹಾಸ್ಗೆ ಕಣ್ಣನ್ ಅವರ ಮನೆಯನ್ನು ಮಾರುವ ವಿಚಾರ ಗೊತ್ತಿರಲಿಲ್ಲ. ಕಣ್ಣನ್ ಅವರನ್ನು ಅಪ್ಪ ಅದೆಷ್ಟು ಹಚ್ಚಿಕೊಂಡಿದ್ದರು ಎನ್ನುವುದನ್ನು ಹತ್ತಿರದಿಂದ ಬಲ್ಲ ಸುಹಾಸ್ಗೆ ಏನೋ ಆಗಿದೆ ಎನ್ನುವುದು ಗಮನಕ್ಕೆ ಬಂತು.
'ನಲವತ್ತು ವರ್ಷಗಳಿಂದ ಪುಸ್ತಕ ಪುಸ್ತಕ ಅಂತ ಪುಸ್ತಕಗಳ ಜೊತೆ ಒಡನಾಡಿದ ನನ್ನ ಮಿತ್ರ ಕಣ್ಣನ್ ಮೊನ್ನೆ ಮೊನ್ನೆಯಷ್ಟೇ ತೀರಿಕೊಂಡಿದ್ದಾರೆ. ಅದೆಷ್ಟು ಜನ ಸಾಹಿತಿಗಳನ್ನು ಊರಿಗೆ ಕರೆಸಿ ಅದೆಷ್ಟು ಕಾರ್ಯಕ್ರಮಗಳನ್ನು ಮಾಡಿದ್ರು ಅನ್ನೋದು ನಮ್ಮೂರಿನವರು ಮರೆಯಲಿಕ್ಕೇ ಆಗೋಲ್ಲ. ಅವರ ಪುಸ್ತಕಾಲಯ ಅದೆಷ್ಟೋ ಸಾಹಿತಿಗಳ, ಲೇಖಕರ ಪುಸ್ತಕಗಳನ್ನು ಪ್ರಕಟಿಸಿ ಅನ್ನಕ್ಕೆ, ಹೆಸರಿಗೆ ದಾರಿಮಾಡಿಕೊಟ್ಟಿದೆ. ಇರೋರು, ಇಲ್ಲದಿರೋರು ಅನ್ನುವ ಭೇದ ಮಾಡದೇ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸ್ಬೇಕು ಅಂತ ಗೆಳೆಯರ ಜೊತೆ ಸೇರಿ ಊರಿಗೇ ದೊಡ್ಡ ಶಿಕ್ಷಣ ಸಂಸ್ಥೆ ತೆರೆದು ಮೂವತ್ತು ವರ್ಷ ದುಡಿದವರು. ದುಡಿಸಿಕೊಂಡವರು ಹೊರದೂಡಿದರೂ ಆ ಶಾಲೆಯ ಉನ್ನತಿಗೆ ಶ್ರಮಿಸಿದವರು. ಊರಿನ ಸ್ಮಶಾನವನ್ನೂ ಚೆಂದದ ಪಾಕರ್್ನಂತೆ ಮಾಡಿ ಅಂತಿಮ ಗೌರವ ಸಲ್ಲಿಸಲು ಹೋದವರಿಗೆ ದೈವಿಕ ಭಾವನೆ ಉಕ್ಕಿಸುವಂತಹ ಸನ್ನಿವೇಶ ಕಲ್ಪಿಸಿದವರು. ಮಕ್ಕಳು ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿರುವುದರಿಂದ ಆಗಾಗ್ಗೆ ಜಗತ್ತನ್ನು ಸುತ್ತಿ ಬರುತ್ತಿದ್ದವರು. ಅಂತಹವರ ಕೊನೆಯ ದಿನಗಳು ತುಂಬಾ ನೋವುಂಟುಮಾಡುವ ರೀತಿ ಇತ್ತು ಅಂತ ತಿಳೀತು. ಅವರು ಬೆಂಗಳೂರಿನಲ್ಲಿ ಹೋಗಿ ಮಗಳ ಮನೆಯಲ್ಲಿದ್ದುದರಿಂದ ಕೊನೆಯ ಘಳಿಗೆಯಲ್ಲಿ ಏನಾಯ್ತು ಅನ್ನೋದು ಸರಿಯಾಗಿ ಗೊತ್ತಾಗ್ಲಿಲ್ಲ. ಅದಕ್ಕೇ ಅವರನ್ನೇ ಈಗ ಕರೆದು ಕೇಳಿದೆ. ಅವರು ತೃಪ್ತರಾಗಿರುವಂತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ,' ಎಂದು ದೀರ್ಘವಾದ ನಿಟ್ಟುಸಿರು ಬಿಟ್ಟರು.
'ಕಣ್ಣನ್ ನಮ್ಮ ಆಶ್ರಮ ಶಾಲೆಗೂ ಸಾಕಷ್ಟು ಪುಸ್ತಕಗಳನ್ನು ದಾನವಾಗಿ ಕಳಿಸಿದ್ದಾರೆ. ಅವರ ಪುಸ್ತಕಾಲಯಕ್ಕೆ ಮತ್ತೆ ಶಿಕ್ಷಣ ಸಂಸ್ಥೆಗೆ ಸ್ಯಾಂಪಲ್ ಆಗಿ ರಾಶಿಗಟ್ಟಲೇ ಪುಸ್ತಕ ಬಂದು ಬೀಳುತ್ತಿತ್ತಂತೆ. ಪ್ರತಿ ವರ್ಷ ಅವರ ಹುಟ್ಟೂರಿನ ಶಾಲೆಗೆ ಮತ್ತು ಪರಿಚಯದವರ ಶಾಲೆಗಳಿಗೆ ಸಾಕಷ್ಟು ಪುಸ್ತಕಗಳನ್ನು ಕೊಟ್ಟುಕಳಿಸುವ ರೂಢಿ ಬೆಳೆಸಿಕೊಂಡಿದ್ದರು. ಅವರು ತೀರಿಕೊಂಡದ್ದು ನಮಗೂ ತಿಳೀಲಿಲ್ಲ. ಸಜ್ಜನರು ಮಾತ್ರ. ದೇವರು ಅವರ ಆತ್ಮಕ್ಕೆ ಸದ್ಗತಿ ಕೊಡಲಿ ಅಂತ ಆಶಿಸ್ತೇವೆ,' ಎಂದರು ಸ್ವಾಮೀಜಿ.
'ಕಣ್ಣನ್ ಅವರು ಇತ್ತೀಚೆಗೆ ದೈವಸಾನಿಧ್ಯ ಸೇರಿದವರಾದ್ದರಿಂದ ಅವರ ಆತ್ಮ ಬೇಗನೇ ಸಂಪರ್ಕಕ್ಕೆ ಬಂತು ಅಂದ್ಕೋತೇನೆ. ಈಗ ಒಂದೈದು ಶತಮಾನಗಳ ಹಿಂದಿನ ಇಂಗ್ಲೆಂಡಿನ ಮಹಾಶಯರೊಬ್ಬರನ್ನು ಕರೀಲಿಕ್ಕೆ ಪ್ರಯತ್ನಿಸ್ತೇನೆ. ನೀವು ಈ ಔಜé ಬೋಡರ್್ನ್ನೇ ಗಮನಿಸ್ತಾ ಇರಿ. ಸಂಭಾಷಣೆ ದೀರ್ಘ ಆದರೆ ಈ ಅಕ್ಷರಗಳ ಮೇಲೆ ಎಲ್ಲೆಲ್ಲಿ ಲೋಟ ನಿಲ್ಲುತ್ತದೆಯೋ ಆಯಾ ಅಕ್ಷರಗಳನ್ನು ಒಂದು ಕಡೆ ಬರೆದುಕೊಂಡು ಒಟ್ಟಿಗೇ ಓದಬೇಕು' ಎಂದವರೇ ಒಂದರೆಘಳಿಗೆ ಧ್ಯಾನ ಮಾಡಿ ತಮ್ಮ ತೋರುಬೆರಳಿನಿಂದ ಲೋಟವನ್ನು ಹಗುರವಾಗಿ ಒತ್ತಿಹಿಡಿದರು. ಅದು ಇಡೀ ಔಜé ಬೋಡರ್್ ತುಂಬಾ ಓಡಾಡಿ 'ಯೆಸ್' ಜಾಗದಲ್ಲಿ ನಿಂತಿತು.
'ಥ್ಯಾಂಕ್ಯು ಸರ್ ಫ್ರಾನ್ಸಿಸ್ ಬೇಕನ್. ಥ್ಯಾಂಕ್ಸ್ ಫಾರ್ ರೆಸ್ಪಾಂಡಿಂಗ್. ಮೇ ಐ ಆಸ್ಕ್ ಯು ವೈ ಯು ಡಿಸ್ಕವರ್ಡ್ ದಿ ಪ್ರಿನ್ಸಿಪಲ್ ಆಫ್ ರೆಫ್ರಿಜಿರೇಷನ್,' ಎಂಬ ಪ್ರಶ್ನೆ ಒಗೆದರು.
ಔಜé ಬೋಡರ್್ನ ಅಕ್ಷರಗಳ ಮೇಲೆ ಲೋಟ ಚಲಿಸುತ್ತಿದ್ದಂತೆಯೇ ಆ ಅಕ್ಷರಗಳನ್ನು ಜೋಡಿಸಿ ಓದಿಕೊಂಡ ಪ್ರೊಫೆಸರ್ ತುಟಿಯಲ್ಲಿ ನಗು. ಮನುಕುಲದ ಉದ್ಧಾರಕ್ಕೆ ಶೀತಲೀಕರಣ ತಂತ್ರವನ್ನು ಕಂಡುಹಿಡಿದದ್ದೆಂಬ ಉತ್ತರ ಅಲ್ಲಿತ್ತು. ಇಂಗ್ಲಿಷ್ ಪ್ರಬಂಧಗಳ ಪಿತಾಮಹ, ಕಾನೂನು ತಜ್ಞ, ರಾಜಕಾರಣಿ ಎಂದೆಲ್ಲಾ ಹೆಸರುಗಳಿಸಿದ್ದ ಸರ್ ಫ್ರಾನ್ಸಿಸ್ ಬೇಕನ್ ವಿಜ್ಞಾನದಲ್ಲಿಯೂ ಸಾಕಷ್ಟು ಪ್ರಯೋಗಗಳನ್ನು ನಡೆಸಿ ಕೊನೆಗೆ ತನ್ನ ಕೊನೆಯ ಪ್ರಯೋಗವಾದ ಶೀತಲೀಕರಣ ತಂತ್ರಜ್ಞಾನದ ಹೆಚ್ಚಿನ ಅಧ್ಯಯನದಲ್ಲಿ ನಿರತನಾದಾಗ ಸನ್ನಿಹಿಡಿದು ಕೊನೆಯುಸಿರೆಳೆದಿದ್ದ. ಅವನ ಪ್ರಯೋಗ ಯಶಸ್ವಿಯಾಗಿ ಅಂದಿನಿಂದ ಇಂದಿನವರೆಗೂ ಮನುಕುಲದ ಪ್ರಗತಿಗೆ, ಜೀವರಕ್ಷಕಗಳ ಸಂರಕ್ಷಣೆಗೆ, ಭೂಗರ್ಭದಿಂದ ಅಂತರೀಕ್ಷದವರೆಗೆ ನಡೆಸಲಾಗುತ್ತಿರುವ ವಿವಿಧ ಪ್ರಯೋಗಗಳಿಗೆ ಬಳಕೆಯಾಗುತ್ತಲೇ ಇದೆ. ರೆಫ್ರಿಜಿರೇಷನ್ ತಂತ್ರಜ್ಞಾನ ಇಲ್ಲದಿದ್ದರೆ ಲಕ್ಷಾಂತರ ಲೀಟರ್ ಹಾಲು ಮನೆ ಮನೆಗಳನ್ನು ತಲುಪುವುದನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ. ರೂಮಿನ ಏರ್ ಕಂಡೀಷನಿಂಗ್, ಮನೆಗಳಲ್ಲಿನ ರೆಫ್ರಿಜಿರೇಟರ್ಗಳು, ತಿನ್ನುವ ಐಸ್ ಕ್ರೀಂ ಎಲ್ಲವೂ ಈ ಶೀತಲೀಕರಣ ತಂತ್ರಜ್ಞಾನದಿಂದಾಗಿ ಉತ್ತಮಗೊಂಡಿರುವುದು ಎಲ್ಲರಿಗೂ ತಿಳಿದದ್ದೇ. ಅದನ್ನು ಈ ಸಿಯಾನ್ಸ್ನಲ್ಲಿ ಕೇಳಿ ತಿಳಿಯಬೇಕಾಗಿತ್ತೇ?
'ಥ್ಯಾಂಕ್ಯು. ಡು ಯು ನೋ ಇಟ ಇಸ್ ಬೀಯಿಂಗ್ ಯೂಸ್ಡ್ ಫಾರ್ ಅನ್ಎಥಿಕಲ್ ಪರ್ಪಸಸ್ ಆಲ್ಸೋ? ಐ ಥಿಂಕ್ ಯುವರ್ ಡಿಸ್ಕವರಿ ಹ್ಯಾಸ್ ಲೆಡ್ ದ ಮ್ಯಾನ್ ಟು ಡು ಥಿಂಗ್ಸ್ ದಟ್ ಹಾಮರ್್ ಹ್ಯುಮಾನಿಟೇರಿಯನ್ ವ್ಯಾಲ್ಯೂಸ್. ಐ ಅ್ಯಮ್ ಸಾರಿ ಟು ಸೇ ದಿಸ್. ಎನಿವೇ, ಥ್ಯಾಂಕ್ಯು, ಬೈ,' ಎಂದಾಗ ಲೋಟ 'ಗುಡ್ ಬೈ' ಸ್ಥಳಕ್ಕೆ ಹೋಗಿ ನಿಂತಿತ್ತು.
ಆತ್ಮ ಆವಾಹನೆಯಾಗಿ ಪ್ರಶ್ನೆಗೆ ಉತ್ತರಕೊಡುವ ಸಂದರ್ಭದಲ್ಲಿ ದೀಪದ ಜ್ವಾಲೆ ಉಜ್ವಲವಾಗಿ ಉರಿದದ್ದು, ಧೂಪದ ಹೊಗೆ ಸುರುಳಿ ಸುರುಳಿಯಾಗಿ ಮೇಲೆ ಎದ್ದಿದ್ದನ್ನು ಉಮೇಶ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ. ಲೋಟದ ಪ್ರತಿಯೊಂದು ಚಲನೆಯನ್ನೂ ಹತ್ತಿರದಿಂದ ಕಾಣುವಂತೆ ಚಿತ್ರಿಸಿಕೊಂಡಿದ್ದ. ಮುಂದೇನು ಎಂಬುದನ್ನೇ ಎಲ್ಲರೂ ಕಾಯುತ್ತಿದ್ದರು.
'ರೆಫ್ರಿಜಿರೇಷನ್ನಿಗೂ ಫ್ರಾನ್ಸಿಸ್ ಬೇಕನ್ಗೂ ಎಥಿಕಲ್ ವ್ಯಾಲ್ಯೂಸ್ಗೂ ಏನು ಸಂಬಂಧ?' ರಾಘವೇಂದ್ರ ಕೇಳಿದ.
'ಅದನ್ನೇ ಈಗ ವಿವರಿಸ್ತೀನಿ. ತೀಮರ್ಾನ ನೀವೇ ಮಾಡುವಿರಂತೆ. ಶೀತಲೀಕರಣ ತಂತ್ರಜ್ಞಾನದಿಂದ ಏನೆಲ್ಲಾ ಒಳ್ಳೆಯದೇ ಆಗಿದ್ದರೂ ವೈಯಕ್ತಿಕವಾಗಿ ನನಗೆ ಇದು ಅಮಾನವೀಯ ಅಂತ ಕಾಣಿಸ್ತಾ ಇದೆ. ನಿಸರ್ಗದಲ್ಲಿ ಎಲ್ಲವೂ ಫ್ರೆಶ್ ಆಗಿರ್ತವೆ. ಆಹಾರವೂ ಫ್ರೆಶ್ ಆಗಿರಬೇಕು. ಆರೋಗ್ಯವೂ ಚೆನ್ನಾಗಿರುತ್ತೆ. ಮಾಂಸಾಹಾರವಾದರೂ ಅಷ್ಟೇ, ಪ್ರಾಣಿವಧೆಯ ಕೆಲವೇ ಗಂಟೆಗಳಲ್ಲಿ ಬಳಕೆಯಾದರೆ ಹಾನಿಯ ಅಂಶ ಕಡಿಮೆ. ಅದು ಬಿಟ್ಟು ಎಲ್ಲವನ್ನೂ ಉಳಿಸಿ, ತಂಗಳ ಪೆಟ್ಟಿಗೆಯಲ್ಲಿಟ್ಟು, ಇಂದಿನದನ್ನು ನಾಳೆಯೋ, ನಾಡಿದ್ದೋ ತಿನ್ನುವುದು, ವಷರ್ಾನುಗಟ್ಟಲೇ ಉಸಿರುಗಟ್ಟಿಸಿಡುವುದು ಪ್ರಕೃತಿ ವಿರುದ್ಧ, ಅಲ್ವೇ? ಅದು ಬಿಡಿ, ಅನ್ಎಥಿಕಲ್ ಅನ್ನುವ ವಿಷಯಕ್ಕೆ ಬರೋದಾದ್ರೆ ಜೀವಮಾನವಿಡೀ ಸಮಾಜದ ಒಳಿತಿಗೆ ಶ್ರಮಿಸಿದ ಮಹನೀಯರನ್ನು ಶೀತಲ ಶವಾಗಾರದ ವಸ್ತುವಾಗಿಸಿ, ಶವವನ್ನು ಮನೆಗೆ ತಂದರೆ ಅಕ್ಕಪಕ್ಕದವರಿಗೆ ತೊಂದರೆ ಎಂದು ಭಾವಿಸಿ ಕೋಲ್ಡ್ ಮಾಚರ್ುಅರಿಯಲ್ಲಿಟ್ಟು, ಏನೂ ಆಗದವರಂತೆ ಮೊಮ್ಮಗನ ಮದುವೆ ಮಾಡಿಸಿ, ಮೂರು ದಿನಗಳ ನಂತರ ಶವವನ್ನು ಹೊರಗೆ ತಂದು ನೇರ ಕ್ರಿಮೆಟೋರಿಯಂಗೆ ತಗೊಂಡು ಹೋಗೋದಿದೆಯಲ್ಲಾ, ಅದು ಅನ್ಎಥಿಕಲ್ ಅಲ್ವಾ?' ಎಂದು ಹೇಳಿ ದೀರ್ಘವಾಗಿ ಉಸಿರೆಳೆದುಕೊಂಡರು ಪ್ರೊಫೆಸರ್.
ಕಣ್ಣನ್ ಅಂಕಲ್ ಊಟ ಮುಗಿಸಿ ಮಧ್ಯಾಹ್ನದ ಸ್ಟಾರ್ ನ್ಯೂಸ್ ನೋಡುತ್ತಾ ಕೂತವರು ನೀರು ಕುಡಿಯಲೆಂದು ಕುಚರ್ಿಯಿಂದ ಎದ್ದವರು ಹಾಗೇ ಮುಗ್ಗರಿಸಿದ್ದರು ಅಷ್ಟೇ. ಒಳಗೆ ಊಟಮಾಡುತ್ತಿದ್ದ ಅವರ ಶ್ರೀಮತಿಯವರು 'ಧೊಪ್' ಎಂಬ ಶಬ್ದಕೇಳಿ ಓಡಿಬಂದು ನೊಡಿದರೆ ಕಣ್ಣನ್ ಕಣ್ಬೆಳಕು ಆರಿಹೋಗಿತ್ತು. ಜೋರಾದ ಅಳುಕೇಳಿ ಬಂದ ಪಕ್ಕದ ಮನೆಯವರು ಕೂಡಲೇ ತಮ್ಮ ಕಾರಿಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರೆ 'ಬ್ರಾಟ್ ಡೆಡ್' ಎಂದು ಷರಾ ಬರೆದು ಹಾಗೇ ಮರಳಿ ಶವವನ್ನು ತೆಗೆದುಕೊಂಡು ಹೋಗಲು ಹೇಳಿದರು. ಆಸ್ಪತ್ರೆಗೆ ಬರುವಾಗ ದಾರಿಯಲ್ಲೇ ಕಣ್ಣನ್ ಅಂಕಲ್ ಮಗ, ಮಗಳು, ಅಳಿಯ ಮೂವರನ್ನೂ ಪಕ್ಕದ ಮನೆಯಾಕೆ ಮೊಬೈಲ್ನಲ್ಲಿ ಸಂಪಕರ್ಿಸಿ 'ಅಂಕಲ್ಗೆ ಸೀರಿಯಸ್ ಆಗಿದೆ' ಎಂಬ ವಿಷಯ ಮುಟ್ಟಿಸಿದ್ದರು. ಅವರೆಲ್ಲಾ ಅಮೇರಿಕೆಯ ಬೇರೆ ಬೇರೆ ಪ್ರಾಂತ್ಯಗಳಲ್ಲಿದ್ದರು. ರಾತ್ರಿಯ ನಿದ್ದೆ ಅವರಿಗೆ ಅಲ್ಲಿ. ಇಲ್ಲಿದ್ದ ಸೊಸೆಯೂ ಮಗುವನ್ನು ಶಾಲೆಯಿಂದ ಕರೆತರಲು ಹೋಗಿದ್ದಳು. ಕಣ್ಣನ್ ಅಂಕಲ್ ಪತ್ನಿಯೂ ಆಘಾತಕ್ಕೊಳಗಾಗಿದ್ದರಿಂದ ಆಸ್ಪತ್ರೆ ಸೇರಬೇಕಾಯ್ತು.
ಪಕ್ಕದ ಮನೆಯಾಕೆ ಸರಳ ಸಮಾಜಸೇವಾ ಕಾಯಕತರ್ೆಯಾದ್ದರಿಂದ ಬೇಗನೇ ಅವರ ಪತಿಯನ್ನು ಬರಹೇಳಿದ್ದರು. 'ಆಂಟಿ ಅಣ್ಣ ಹೇಗಿದ್ದಾರೆ?' ಎಂದು ಕಣ್ಣನ್ ಮಗಳು ಸುಮನ ಕರೆಮಾಡಿದಾಗ ಅವರು ತೀರಿಕೊಂಡ ಸುದ್ದಿಕೊಟ್ಟು ಆದಷ್ಟು ಬೇಗ ಅಲ್ಲಿಂದ ಹೊರಟುಬರಲು ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚನೆಕೊಟ್ಟರು.
ಅಷ್ಟರಲ್ಲಿ ಮಗ ಮೋಹನ ಕರೆ ಮಾಡಿದ. ಅವನಿಗೂ ಅದೇ ವಿಷಯ ಹೇಳಿದರು. 'ಆಂಟಿ, ಈಗ ಇಲ್ಲಿ ರಾತ್ರಿ. ನಾವು ಎಷ್ಟೇ ಬೇಗ ಹೊರಡ್ತೀವಿ ಅಂದ್ರೂ ಬೆಂಗಳೂರಿಗೆ ಬರೋಕೆ ಒಂದುವರೆಯಿಂದ ಎರಡು ದಿನ ಬೇಕಾಗುತ್ತೆ. ಕಂಪನಿಗೆ ವಿಷಯ ತಿಳಿಸಿ, ಸಿಕ್ಕ ಫ್ಲೈಟ್ ಹತ್ತಿ ಹೀಗೇ ಹಾರ್ತೀವಿ ಅಂದ್ರೂ ನಲವತ್ತು ಗಂಟೇನಾದ್ರೂ ಬೇಕು. ಅಲ್ಲೀ ತನಕ ಅಣ್ಣನ ಬಾಡಿಯನ್ನು ಮನೇಲಿಟ್ಟುಕೊಳ್ಳಕ್ಕಾಗಲ್ಲ. ಅಕ್ಕಪಕ್ಕದವರಿಗೂ ತೊಂದರೆ. ನೀವು ಈಗ ಅಲ್ಲಿರೋ ಆಸ್ಪತ್ರೆಯಲ್ಲಿ ಕೋಲ್ಡ್ ಮಾಚರ್ುಅರಿ (ಶೀತಲ ಶವಾಗಾರ) ಇದೆಯಾ ಕೇಳಿ, ಅಲ್ಲಿ ಬಾಡಿಯನ್ನು ಕಾಪಾಡಲಿಕ್ಕೆ ಹೇಳಿ. ಈಗಲೇ ನಾವು ಹೊರಟು ಬರ್ತೇವೆ. ಅಮ್ಮನಿಗೆ ಚೆನ್ನಾಗಿ ನೋಡ್ಕೊಳ್ಳಿ, ಪ್ಲೀಸ್' ಎಂದು ಮೋಹನ ಅಳುತ್ತಲೇ ಮುಂದಿನ ವ್ಯವಸ್ಥೆ ಏಪರ್ಾಡುಮಾಡಲು ಕೇಳಿಕೊಂಡ.
ಸಂಜೆಯಾಗುವಷ್ಟರಲ್ಲಿ ಕಣ್ಣನ್ ಅವರ ನೆಂಟರಿಗೆ ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದರು. ಕೋಲ್ಡ್ ಮಾಚರ್ುಅರಿಯಲ್ಲಿ ಶವವನ್ನು ದಾಖಲಿಸಿ ಹೊರಗೆ ನಿಂತಿದ್ದ ಸರಳ ಮತ್ತು ಕಣ್ಣನ್ ಪತ್ನಿಯನ್ನು ನೋಡಿಕೊಳ್ಳುತ್ತಿದ್ದ ಸೊಸೆ ಕೋಮಲ ಇಬ್ಬರಿಗೂ ಏನು ಹೇಳಲೂ ತೋಚದಂತಾಗಿ ಮೌನಿಯಾಗಿದ್ದರು. ಬಂದವರೇ ಮಾತನಾಡುತ್ತಿದ್ದರು.
ಅಮೆರಿಕೆಯ ಫ್ಲೈಟ್ ಮುಂಬೈನಲ್ಲಿಳಿದು, ಅಲ್ಲಿಂದ ಬೆಂಗಳೂರಿಗೆ ಮತ್ತೆ ಹಾರಿ, ಮನೆಗೆ ಹೋಗಿ ಮಕ್ಕಳು ಮತ್ತು ಅಳಿಯ ಆಸ್ಪತ್ರೆಗೆ ಬರುವಷ್ಟರಲ್ಲಿ ಮೂರನೇ ದಿನದ ಸೂರ್ಯ ಮೂಡುತಲಿದ್ದ. ಬೆಳಗಿನ ಜಾವ ಮನೆಗೆ ಕಳೇಬರ ಒಯ್ದು ಅಕ್ಕಪಕ್ಕದವರಿಗೆಲ್ಲಾ ತೊಂದರೆ ಕೊಡುವ ಬದಲು ಆಸ್ಪತ್ರೆಯಿಂದ ನೇರ ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ತೆಗೆದುಕೊಂಡು ಹೋಗಿ, ಅಲ್ಲೇ ಅಂಗಳದಲ್ಲಿ ಅಂತಿಮ ಕರ್ಮಗಳನ್ನೆಲ್ಲಾ ಮುಗಿಸಿ, ಮುಡಿಕೊಟ್ಟು, ಶಾಸ್ತ್ರಕ್ಕೆ ಅತ್ತು, ಚಿತೆಯಲ್ಲಿ ಶವವನ್ನಿಟ್ಟಾಗ ಬೆಳಗಿನ ಎಂಟು ಗಂಟೆ. ವಿದ್ಯುಚ್ಚಿತೆಯ ಬಾಗಿಲು ಹಾಕಿ ಎಲ್ಲರನ್ನೂ ಹೊರಗೆ ಕಳಿಸಿದ ಮಾಲಿ ಸಂಜೆ ಬಂದು ಚಿತಾಭಸ್ಮ ತೆಗೆದುಕೊಂಡು ಹೋಗುವಂತೆ ತಿಳಿಸಿದ.
ಊರಿನಲ್ಲಿ ಅಂತಿಮ ಕ್ಷಣವನ್ನೂ ಸುಂದರಗೊಳಿಸಲು ಕಟ್ಟಿಸಿದ ಸ್ಮಶಾನದಲ್ಲಾದರೂ ಕಣ್ಣನ್ ಅವರ ಶವ ಶಾಂತಿಯಿಂದ ದಹನವಾಗಿದ್ದರೆ, ಊರವರ ಗೌರವಾರ್ಪಣೆಗೂ ಒಂದು ಅವಕಾಶವಾಗುತ್ತಿತ್ತು. ಜೀವನವಿಡೀ ಶಾಸ್ತ್ರ, ಕರ್ಮ, ಆಚರಣೆ, ಹವನ, ಹೋಮ, ಗೃಹಪ್ರವೇಶ, ಮದುವೆ ಎಂದೆಲ್ಲಾ ಓಡಾಡಿದ ಕಣ್ಣನ್ ತೀರಿಕೊಂಡಾಗ ಮನೆಯ ಒಳಗೂ ಶವ ತರದೇ ಮಸಣದಲ್ಲೇ ವಿದ್ಯುತ್ತಿನಲ್ಲಿ ದಹಿಸಲ್ಪಟ್ಟದ್ದು ನಾಗರಿಕ ಪ್ರಪಂಚದ ಬದಲಾಗುತ್ತಿರುವ ಮೌಲ್ಯಗಳ ಪ್ರತಿಫಲನವಾಗಿತ್ತು. ಮರುದಿನ ಎಲ್ಲೋ ಒಂದು ಚಿಕ್ಕ ಚೂರು ಸುದ್ದಿ ಸ್ಥಳೀಯ ಪತ್ರಿಕೆಗಳಲ್ಲಿ ಬಂದು ಶ್ರದ್ಧಾಂಜಲಿ ಎನಿಸಿಕೊಂಡಿತು. ಇಷ್ಟಕ್ಕಾಗಿ ಅವರು ಅಷ್ಟೆಲ್ಲಾ ಶ್ರಮಪಟ್ಟಿದ್ದರೆ? ಈಗ ಅವರು ಸೊಂಟಕಟ್ಟಿ, ಇಟ್ಟಿಗೆ ಜೋಡಿಸಿ ಕಟ್ಟಿದ್ದ ಮನೆಯನ್ನೂ ಅವರ ಮಗ ಸತ್ತ ತಿಂಗಳೊಪ್ಪತ್ತಿಗೆ ಮಾರಿ, ಪುಸ್ತಕದಂಗಡಿಯನ್ನೂ ಗುತ್ತಿಗೆಗೆ ಕೊಟ್ಟು ಅಮೆರಿಕೆಗೆ ಹಾರಿದ್ದು ಎಷ್ಟು ಎಥಿಕಲ್?
ಸಮಾಜದ ಪ್ರಗತಿಗಾಗಿ ಹಗಲಿರುಳು ಶ್ರಮಿಸಿದ ಶತಾಯುಷಿ ಜ್ಞಾನದೇವರ ಕೊನೆಯ ಘಳಿಗೆಯಲ್ಲಿ ಆಸ್ಪತ್ರೆಗೆ ಸೇರಿಸಿದ ಮಗ ಕಿರಿಯ ಮೊಮ್ಮಗನ ಮದುವೆಗಾಗಿ ಸಕಲ ಏಪರ್ಾಡುಗಳನ್ನೂ ಮಾಡಿ, ರಾತ್ರಿ ಬಸ್ಗೆ ಹೊರಟು ಬೆಳಗ್ಗೆ ಮಡಕೇರಿ ಮಂಜಿನಲ್ಲಿ ಧಾರಾಮುಹೂರ್ತಕ್ಕೆ ಧಾವಿಸಿದ. 'ಇನ್ಟೆನ್ಸಿವ್ ಕೇರ್ ಯೂನಿಟ್ನಲ್ಲಿದ್ದಾರೆ ಅಪ್ಪ. ಬೇಗ ಮದುವೆ ಮಾಡಿಕೊಂಡು ವಾಪಸ್ ಹೋಗಿಬಿಡೋಣ,' ಎನ್ನುತ್ತಲೇ ಶಾಸ್ತ್ರೋಕ್ತವಾಗಿ ಮದುವೆ, ಮಂಗಲ ಕಾರ್ಯ ಮುಗಿಸಿ, ಭೂರೀಭೋಜನ ಸವಿದು, ಭರ್ಜರಿ ನಗುವಿನೊಂದಿಗೆ ದಿಬ್ಬಣ ವಾಪಸ್ ಹೊರಟು ಮರುದಿನ ಬೆಳಗ್ಗೆ ಊರು ತಲುಪಿದ ನಂತರ ಎಂಟು ಗಂಟೆಗೆ, 'ಹಿರಿಯರು ತೀರಿಕೊಂಡರು' ಎಂದು ಮನೆಯ ಮುಂದೆ ಹೊಗೆ ಹಾಕಿತು. ಹರ್ಷದ ಮನೆಯಲ್ಲಿ ಸ್ಮಶಾನ ಮೌನ. 'ಮರಿಮಗನ ಮದುವೆ ಆಗುವವರೆಗೂ ತಡೆದುಕೊಂಡಿತ್ತಲ್ಲ, ಗಟ್ಟಿ ಮುದುಕ' ಎಂಬ ಹೊಗಳಿಕೆ ಜ್ಞಾನದೇವರ ಕಳೇಬರಕ್ಕೆ. ಮುದುಕ ಗಟ್ಟಿಯೇ?
ಇಂಟೆನ್ಸಿವ್ ಕೇರ್ ಯೂನಿಟ್ಗೆ ಸೇರಿಸಿ ನಾಲ್ಕು ದಿನ ಇಟ್ಟಿದ್ದರು ಎಂಬ ವಿಷಯದ ಹಿಂದಿನ ರಹಸ್ಯ ಎರಡನೇ ಮೊಮ್ಮಗನಿಗೆ ಮಾತ್ರ ಗೊತ್ತಿತ್ತು. ಮದುವೆಗೆ ಮುನ್ನಾದಿನ ಮದ್ಯಾಹ್ನವೇ ಜ್ಞಾನದೇವರು ಕೊನೆಯುಸಿರೆಳೆದಿದ್ದರು. ಎಲುಬಿನ ಗೂಡಿನಂತಾಗಿದ್ದ ಅವರು ಉಸಿರಾಡುತ್ತಿದ್ದಾರೋ, ಇಲ್ಲವೋ ಬೇರೆಯವರಿಗೆ ತಿಳಿಯುವಂತಿರಲಿಲ್ಲ. ಅವರನ್ನು ನೋಡಿಕೊಳ್ಳುತ್ತಿದ್ದ ಆಪ್ತವಲಯದ ವೈದ್ಯರು 'ಅಜ್ಜ ಇನ್ನಿಲ್ಲ' ಎಂಬ ವಿಷಯವನ್ನು ಹೇಳಿದರೂ, ಮನೆಯಲ್ಲಿ ಶುಭಕಾರ್ಯ ನಡೆಯುತ್ತಿದೆ, ರಾಜಕೀಯ ನಾಯಕರೆಲ್ಲಾ ಆಹ್ವಾನಿತರಾಗಿದ್ದಾರೆ. ಊರೂರಿನಿಂದ ನೆಂಟರಿಷ್ಟರು ಬಂದಿಳಿದಿದ್ದಾರೆ. ಲಕ್ಷಾಂತರ ಖಚರ್ು. ಈಗ ಮದುವೆ ಮುಂದೂಡಿದರೆ ಲೆಕ್ಕಾಚಾರಗಳೆಲ್ಲಾ ತಲೆಕೆಳಗು.
'ಈ ವಿಷಯ ನಮ್ಮಲ್ಲಿಯೇ ಇರಲಿ. ದಯಮಾಡಿ ಯಾರೂ ಹತ್ತಿರ ಬರಬೇಡಿ, ತೀವ್ರ ನಿಗಾದಲ್ಲಿಟ್ಟಿದ್ದೇವೆ ಎಂಬ ಹೇಳಿಕೆ ಕೊಡಿ. ಬೇಕಿದ್ದರೆ ಬಾಡಿಯನ್ನು ಕೋಲ್ಡ್ ಮಾಚರ್ುಅರಿಯಲ್ಲಿಡಿ ಪರವಾಗಿಲ್ಲ. ಮದುವೆ ಮುಗಿಸಿ ಬಂದವರೇ ತೆಗೆದುಕೊಂಡು ಹೋಗುತ್ತೇವೆ,' ಎಂಬ ಒಳ ಒಪ್ಪಂದದ ಪ್ರಕಾರ ಮದುವೆಯ ಮರುದಿನ ಬೆಳಗಿನ ವೇಳೆ ಅಜ್ಜ ಕೊನೆಯುಸಿರೆಳೆದ ವಿಷಯವನ್ನು ಪ್ರಕಟಿಸಲಾಗಿತ್ತು. ಶೀತಲ ಶವಾಗಾರದ ಉಪಯೋಗ ಇಲ್ಲಿಯೂ ಆಗಿತ್ತು. ಸಮಾಜಕ್ಕಾಗಿ ಶ್ರಮಿಸಿದವರಿಗೆ ಸಿಕ್ಕ ಮನ್ನಣೆ ಇದು. ನೆರೆದವರೆಲ್ಲಾ ಅಹುದಹುದು ಎಂದೇ ತಲೆ ಹಾಕಿದರು.
'ಈಗ ಹೇಳಿ ಸ್ವಾಮೀಜಿ, ನಾನು ನನ್ನ ನೆಚ್ಚಿನ ಗುರು ಎಂದೇ ನಂಬಿಕೊಂಡಿರುವ ಬೇಕನ್ನನ ರೆಫ್ರಿಜಿರೇಷನ್ ತಂತ್ರಜ್ಞಾನವನ್ನು ಹೊಗಳಲೇ, ಇಲ್ಲ ಅದರ ಅನಾಗರಿಕ ಉಪಯೋಗವನ್ನು ಕಂಡು ಮರುಗಲೇ, ಅದೂ ನನ್ನ ಗೆಳೆಯನಿಗೇ ಹೀಗೆ ಆದಾಗ ಇದನ್ನು ಹೇಗಾದರೂ ಸಹಿಸಿಕೊಳ್ಳಬೇಕು. ಇವರು ಮನುಷ್ಯರೇ! ಥತ್!' ಎಂದು ದುಃಖದಿಂದ ಬಿಕ್ಕಿದರು.
'ಸಮಾಧಾನ ಮಾಡ್ಕೊಳ್ಳಿ ಪ್ರೊಫೆಸರ್. ಪ್ರಕೃತಿಯನ್ನು ಯಾರೂ ಮೀರಲಾಗದು. ಕಾರ್ಯಕಾರಣ ಸಂಬಂಧಗಳನ್ನು ಸ್ಥೂಲವಾಗಿ ನೋಡಿದಾಗ ಅವರವರ ದೃಷ್ಟಿಗೆ ಅವರವರ ಕ್ರಿಯೆಗಳು ಸರಿಯಾಗಿಯೇ ಕಾಣುತ್ತವೆ. ಅದನ್ನು ಭಿನ್ನ ಪರಿಸರದಲ್ಲಿಟ್ಟಾಗ ತಪ್ಪು ಅನ್ನಿಸಬಹುದು. ತೀರಿಕೊಂಡವರು ಮತ್ತೆ ತಿರುಗಿ ಬರಲಾರರು. ಏನಾಗಿದೆ ಎನ್ನುವುದನ್ನು ಅವರು ನಮಗೆ ಹೇಳಲಾರರು. ನೀವು ಈಗ ಕರೆದ ಕಣ್ಣನ್ ಅವರೇ ತಮ್ಮ ಮಗ ಮನೆ ಮಾರಾಟ ಮಾಡಿದ್ದರಿಂದ ಬೇಜಾರಿಲ್ಲ ಎಂದು ಹೇಳಿದ್ದಾರಲ್ಲ. ಯಾವುದು ಏನಾಗಬೇಕೋ ಅದಾಗಿಯೇ ತೀರುತ್ತದೆ. ಸುಮ್ಮನೇ ಘಾಸಿಮಾಡಿಕೊಳ್ಳುವುದು ತರವಲ್ಲ, ಅಲ್ಲವೇ?' ಎಂದರು ಸ್ವಾಮೀಜಿ.
ಸಿಯಾನ್ಸ್ ಬಗ್ಗೆ ಎಷ್ಟೇ ಥಿಯರಿ ಓದಿದರೂ, ಪ್ರಾತ್ಯಕ್ಷಿಕೆ ನೋಡಿದರೂ ಮನುಷ್ಯನ ಮನಸ್ಸಿನ ವ್ಯಾಪಾರಗಳನ್ನು ಅರ್ಥ ಮಾಡಿಕೊಳ್ಳಲು ಸೋಲುವ, ಸ್ವಂತ ಮಕ್ಕಳೇ ತಂದೆ, ತಾಯಿಯರನ್ನು ಪರಕೀಯರಂತೆ ಕಾಣುವ, ಸಂಬಂಧವಿಲ್ಲದವರಂತೆ ವತರ್ಿಸುವ ಸನ್ನಿವೇಶಗಳ ಅಧ್ಯಯನ ನಿಜಕ್ಕೂ ಛಾಲೆಂಜಿಂಗ್ ಎಂದುಕೊಂಡರು ಡಾ. ಧನಂಜಯ.
ಫಿಸಿಕ್ಸ್ಗಿಂತ ಮೆಟಾಫಿಸಿಕ್ಸ್ ಎಲ್ಲೋ ಬೇರೆಯೇ ಪಾತಳಿಯ ವಿಷಯ. ಕಲಿಯುವುದು ಇನ್ನೂ ಬಹಳಷ್ಟಿದೆ ಎಂದುಕೊಂಡ ರಾಘವೇಂದ್ರ, ಕುತೂಹಲಕ್ಕಾಗಿ ರೆಕಾಡರ್್ಮಾಡಿಕೊಂಡರೂ ಹೊಸ ವಿಷಯ ಕಲಿತ ಖುಷಿಯಲ್ಲಿದ್ದ ಉಮೇಶ, ಅಪ್ಪನ ದುಗುಡಕ್ಕೆ ಕಾರಣ ತಿಳಿದು ಹಗುರಾದ ಸುಹಾಸ್ ಮುಂದೇನು ಎಂದು ಕಾತರರಾಗಿದ್ದರು.
'ಸಾರಿ, ನಿಮಗೆ ಬೇಸರ ಮಾಡಿಸಿದೆ ಅಂದ್ಕೋತೇನೆ. ಇನ್ನೊಮ್ಮೆ ವೈಜ್ಞಾನಿಕವಾದ ಅಧ್ಯಯನಕ್ಕಾಗಿಯೇ ಸಿಯಾನ್ಸ್ ನಡೆಸೋಣಂತೆ. ಡಾ. ಧನಂಜಯ ಅವರೇ, ನೀವು ಕೂಡ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಳ್ಳಿ, ಆಯ್ತಾ. ಸ್ವಾಮೀಜಿಯವರಿಗೆ ತುಂಬಾ ತುಂಬಾ ಧನ್ಯವಾದಗಳು. ಈಗ ರಾತ್ರಿ ತುಂಬಾ ಆಗಿದೆ. ಅಪ್ಪಣೆಯಾದರೆ ನಾವು ಹೊರಡ್ತೇವೆ,' ಎಂದರು ಪ್ರೊಫೆಸರ್ ಛಾಯಾಪತಿ ಮೌನಮುರಿಯುತ್ತಾ.
'ಒಳ್ಳೆಯದು. ನನಗೂ ಈ ವಿಷಯವಾಗಿ ತಿಳಿಯಲಿಕ್ಕೆ ಬಹಳ ಆಸಕ್ತಿ ಇದೆ. ದಯಮಾಡಿ ಇನ್ನೊಮ್ಮೆ ಬನ್ನಿ. ಗುಡ್ನೈಟ್' ಎಂದು ಸ್ವಾಮೀಜಿ ಎಲ್ಲರನ್ನೂ ಬೀಳ್ಕೊಟ್ಟರು.

(ಸಿಯಾನ್ಸ್ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಜಾಲತಾಣಗಳನ್ನು ಭೇಟಿಮಾಡಿರಿ:

www.en.wikipedia.org/wiki/Séance www.crystalinks.com/seance.html

www.imdb.com/title www.newagedirectory.com/sixth/seance.htm

www.photographymuseum.com/seance.html www.skepdic.com/seance.html


ಔಜé ಬೋಡರ್್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭೇಟಿ ಮಾಡಿ :

www.en.wikipedia.org/wiki/Ouija

www.allabouttheoccult.org/ouija-board.htm

www.paranormal.about.com/cs/ouijaboards/ht/use_ouija.htm

www.skepdic.com/ouija.html
www.crystalinks.com/ouija.html


- ಯಾಜ್ಞವಲ್ಕ್ಯ

Sir Francis Bacon and Cold Mortuary
A Short Story in Kannada by Yajnyavalkya
Published in Thushara Monthly Sept. 2010

Monday, August 16, 2010

Kavalu - A Reflection of Unsettled Life - Review by Bedre Manjunath in Karmaveera 22 Aug 2010Kavalu - A Reflection of Unsettled Life
Review by Bedre Manjunath in Karmaveera 22 Aug 2010

ಕವಲು - ಸಮಾಜೋ-ಆಥರ್ಿಕ-ಸಾಂಸ್ಕೃತಿಕ-ಕೃತಿಕೇಂದ್ರಿತ-ಪ್ರಸ್ತುತ ವಿಮಶರ್ಾ ನೋಟ

ಕಾದಂಬರಿ : ಕವಲು
ಕಾದಂಬರಿಕಾರರು : ಎಸ್. ಎಲ್. ಭೈರಪ್ಪ
ಪ್ರಕಾಶಕರು : ಸಾಹಿತ್ಯ ಭಂಡಾರ, ಬಳೇಪೇಟೆ, ಬೆಂಗಳೂರು.
ಪುಟಗಳು : 304 ಬೆಲೆ : 250
ಆವೃತ್ತಿ : 2010 ಜೂನ್ (ಹದಿನೈದೇ ದಿನಗಳಲ್ಲಿ 6 ಆವೃತ್ತಿಗಳು!)

'ಐ ವಾಂಟ್ ಟು ಟಾಕ್ ಟು ಯು' ಎಂದು ಕಾಲುಕೆರೆದು ನಿಲ್ಲುವ, 'ತಿಳುಕ' ಎಂದು ತೀಮರ್ಾನ ನೀಡುವ ಪಾತ್ರಗಳ ಅಸಂಗತ ಸಾಂಗತ್ಯದ ಭೈರಪ್ಪನವರ 'ಕವಲು' ವಿನಾಕಾರಣ ಟೀಕೆಗೊಳಗಾಗುತ್ತಿದೆ. ಬದಲಾದ ಮತ್ತು ನಿರಂತರ ಸ್ಥಿತ್ಯಂತರಗೊಳ್ಳುತ್ತಿರುವ ಸಾಮಾಜಿಕ ಮೌಲ್ಯಗಳನ್ನು ಕಲಾಕೃತಿಯಾಗಿಸಿ, ತಿದ್ದಿ ತೀಡಿ ವಣರ್ಿಸಲು ಪ್ರಯತ್ನಿಸದೇ ಕೇವಲ ಕನ್ನಡಿ ಹಿಡಿದು ತೋರಿಸುತ್ತಿರುವುದೇ 'ಕವಲು' ಕಾದಂಬರಿಯ ವಿಶೇಷತೆಯಾಗಿದ್ದು 'ಇದ್ದದ್ದು ಇದ್ಹಂಗೆ ಹೇಳಿದ್ರೆ ಎದ್ ಬಂದು ಎದೆಗೇ ಒದ್ರಂತೆ' ಎನ್ನುವವರೇ ಜಾಸ್ತಿಯಾಗಿದ್ದಾರೆ. 'ಯಾವ ಯಾವ ಜೀವಂತ ಅಥವಾ ಭೂಗತ ವ್ಯಕ್ತಿಗಳತ್ತ ಕನ್ನಡಿ ಹಿಡಿದಿದ್ದೀರಿ?' ಎಂದು ಭೈರಪ್ಪನವರನ್ನೇನು ಕೇಳುವ ಅಗತ್ಯವಿಲ್ಲ. ಹಲವು ರಾಜಕಾರಣಿಗಳ, ಮುಖಂಡರ, ಗೋಮುಖ ವ್ಯಾಘ್ರಗಳ ಕಾಮಕಾಂಡಗಳನ್ನು ಈಗಾಗಲೇ ಓದಿದವರಿಗೆ ಪಾತ್ರಗಳ ಹೆಸರುಗಳು ಥಟ್ಟಂತ ಹೊಳೆದುಬಿಡುತ್ತವೆ. ಉದಾಹರಣೆಗೆ ಕೆಲವೇ ಕಾಲ ವಿದ್ಯಾಮಂತ್ರಿಯಾಗಿದ್ದ ರಸಿಕ ಪಾತ್ರ. ಹೆಸರಿನಲ್ಲೇ ಗುರುತಿಸಿಕೊಂಡುಬಿಟ್ಟಿದೆ!
ಒಂದು ಕಾದಂಬರಿಯನ್ನು ಅದು ಇರುವಂತೆಯೇ ಸ್ವೀಕರಿಸುವುದನ್ನು ಬಿಟ್ಟು, 'ಅದು ಹಾಗಿರಬೇಕಿತ್ತು, ಹೀಗಿರಬೇಕಿತ್ತು, ಹಾಗೆ ಹೇಳಿದ್ದರಿಂದ ಎಲ್ಲೆಲ್ಲಿಯೋ ಚಿವುಟಿದಂತಾಗಿದೆ, ಇವರ ಪಾತ್ರಗಳು ಬರೀ ಸ್ತ್ರೀವಾದ ವಿರೋಧಿಯಾಗಿ, ಸನಾತನ ಸಂಸ್ಕೃತಿಯ ಪೋಷಕವಾಗಿ ಮಾತನಾಡುತ್ತಿವೆ, ಹಾದರದ ಅನಾವಶ್ಯಕ ವೈಭವೀಕರಣ ಹೈ ಸೊಸೈಟಿಯ ಪ್ರತೀಕವಾಗಿದೆ, ಹಾಗೆ, ಹೀಗೆ' ಎಂದು ಹೀಗಳೆಯುತ್ತಿರುವ ವಿದ್ಯಾಪರ್ವತಗಳ ದಂತಗೋಪುರದ ವಿಮರ್ಶಕರು ಯತಾರ್ಥವನ್ನು ಗ್ರಹಿಸಲು ಸೋಲುತ್ತಿದ್ದಾರೆ ಅಥವಾ ಗ್ರಹಿಸಿದ್ದರೂ ಹಾಗೆಂದು ಹೇಳಿಬಿಟ್ಟರೆ ತಮ್ಮ ಬಂಡವಾಳವೆಲ್ಲಿ ಬಯಲಿಗೆ ಬರುತ್ತದೋ ಎಂದು ತೋರಿಕೆಯ ಪ್ರತಿಭಟನೆಗಿಳಿದಿದ್ದಾರೆ.
ಪಾಶ್ಚಾತ್ಯ ಕಾದಂಬರಿಗಳು, ಅದರಲ್ಲೂ ಥ್ರಿಲ್ಲರ್ಗಳು ಬೆಸ್ಟ್ ಸೆಲ್ಲರ್ಗಳಾದಾಗ ಮತ್ತು ಅವುಗಳನ್ನು ಆಧರಿಸಿದ ಚಲನಚಿತ್ರಗಳು ತೆರೆಗೆ ಬಂದಾಗ ಅಲ್ಲಿ ಕಾಣುವುದು ಸಾಫಿಸ್ಟಿಕೇಟೆಡ್ ಡಿಬಾಚರಿ. ಜೇಮ್ಸ್ಬಾಂಡ್ ಪಾತ್ರದ ಸುತ್ತ ಅದೆಷ್ಟುಬಾರಿ ಇದು ಪುನಾವರ್ತನೆಯಾಗುತ್ತದೆ ಎನ್ನುವುದು ಯಾವುದೇ ಮುಜುಗರವಿಲ್ಲದೇ ಜಗಜ್ಜಾಹೀರಾಗಿದೆ. ಇತ್ತೀಚಿನ ಕಾಪರ್ೊರೆಟ್ ಜಗತ್ತಿನಲ್ಲಿ ಸೆಕ್ರೆಟರಿಗಳಾಗಿ ನೇಮಕವಾಗುವವರು 'ಬಾಸ್' ಹೇಳುವ ಯಾವುದೇ ಕೆಲಸಕ್ಕೂ ಸೈ ಎನ್ನಬೇಕು ಮತ್ತು ಅದರ ಮೂಲಕವೇ ಬ್ಯುಸಿನೆಸ್ ಕುದುರಿಸಬೇಕು ಕೂಡ. 'ಎ ಸೂಟಬಲ್ ಬಾಯ್' ಎಂಬ ಸಾಧಾರಣ ಕಾದಂಬರಿ ವಿಶ್ವಮಟ್ಟದಲ್ಲಿ ಮಾರುಕಟ್ಟೆ ಆಕ್ರಮಿಸಲು ಕಾಮಿನಿಯರ ಸಹಾಯ ಪಡೆಯಲಾಗಿತ್ತು ಎಂಬ ಟೀಕೆಯಲ್ಲಿ ಹೊಸದೇನೂ ಇಲ್ಲ. ಪಾಶ್ಚಾತ್ಯ ದೇಶಗಳೇಕೆ, ನಮ್ಮ ಬೆಂಗಳೂರಿನ ಕೆಲವು ಕಛೇರಿಗಳ ಆಂಟೆ ಛೇಂಬರ್ಗಳ ಪೀಠೋಪಕರಣಗಳು ನಡುಮಧ್ಯಾಹ್ನದ ಹೊತ್ತಿನಲ್ಲೇ ಕಿರುಗುಟ್ಟುವ ಸದ್ದುಹೊರಡಿಸುವುದು ಅಲ್ಲಿನ ಪ್ಯೂನ್ಗಳಿಗೆ ಮಾತ್ರವಲ್ಲದೇ ಹೊರಗಿನವರಿಗೂ ತಿಳಿದಿರುವ ಬಹಿರಂಗ ರಹಸ್ಯ! ಬ್ರೌಸಿಂಗ್ ಸೆಂಟರ್ಗಳಲ್ಲಿ 'ಸವಿತಾ ಭಾಭಿ' ಎಂದು ಹೇಳಿದರೆ ಅರ್ಥವಾಗದೇ ಇರುವವರು, ಕಾಪರ್ೊರೇಟ್ ಸೆಕ್ಸ್ ಸೈಟ್ ಗೊತ್ತಿಲ್ಲದವರು, ಬ್ಲೋಜಾಬ್ಗೆ ಡಿಕ್ಷನರಿಗಳಲ್ಲಿ ಅರ್ಥಹುಡುಕುವವರು ನಿಜಕ್ಕೂ ಮೂರ್ಖರೇ!
'ಕವಲು' ಶುಂಠಿಯ ಬೇರಿನಂತೆ ಎತ್ತೆತ್ತೆತ್ತಲೋ ಕರೆದೊಯ್ಯುತ್ತದೆ ನಿಜ. ಆದರೂ ಅದಕ್ಕೊಂದು ಬಂಧ, ಬಿಗಿ, ಹಂದರವಿದೆ. ಅದರ ಪೋಷಣೆಗೆ ಆಥರ್ಿಕ ಪರಿಸರ, ಸಾಮಾಜಿಕ ಬದ್ಧತೆ, ಯಶಸ್ಸಿನ ತಂತ್ರಗಾರಿಕೆ, ಶ್ರಮಜೀವನದ ಸಾರ್ಥಕತೆಯ ಜೀವದ್ರವ್ಯವೂ ಇದೆ. ಹಾದರದ ನಿರೂಪಣೆ ಪ್ರಕ್ಷಿಪ್ತವಷ್ಟೇ! ಎರಡು ಕುಟುಂಬಗಳ ಕಥೆ ಎಂದೆನಿಸಿದರೂ ಅವುಗಳ ಸುತ್ತಲೇ ಇರುವ ಇನ್ನೂ ಕೆಲವರ ಅತಂತ್ರ ಬದುಕಿನ ಚಿತ್ರಗಳು ಅದೇಕೋ ಬಹುತೇಕ ವಿಮರ್ಶಕರಿಗೆ ಕಾಣಿಸುತ್ತಲೇ ಇಲ್ಲ. ಕುಸುರಿ ಕೆಲಸಗಾರ ಸಣ್ಣಪುಟ್ಟ ವಿವರಗಳನ್ನೂ ಸ್ಫುಟಗೊಳಿಸುತ್ತಾನೆ. ಭೈರಪ್ಪನವರು ಕೂಡ ಅದು ಎಷ್ಟೇ ಚಿಕ್ಕ ಪುಟ್ಟ ಪಾತ್ರವಿದ್ದರೂ ಅವುಗಳಿಗೆ ಜೀವತುಂಬಿ, ಅವು ಇರುವಷ್ಟು ಹೊತ್ತು ಅವುಗಳದ್ದೇ ಪರಿಸರದ ಘಮಘಮಿಸುವಿಕೆಯನ್ನು ಸೃಷ್ಟಿಸಿ, ಅಲ್ಲೇ ಮರೆಯಾಗುವ ನಿತ್ಯಪುಷ್ಪಗಳಾಗಿಸುತ್ತಾರೆ. ಅದನ್ನು ಕುರಿತಂತೆ ಯಾರೂ ಗಮನಿಸದಿರುವುದು ಭೈರಪ್ಪನವರಿಗೆ ಬೇಸರ ತರಿಸಿರಬಹುದು. ದೊಡ್ಡ ಕ್ಯಾನ್ವಾಸಿನ ಚಿತ್ರದಲ್ಲಿ ತುಂಬದೇ ಬಿಟ್ಟ ಭಾಗಗಳೇ ಜಾಸ್ತಿ ಎನಿಸಿದರೂ ಆ ರಿಕ್ತತೆಯೇ ಒಂದು ಅರ್ಥ ಒದಗಿಸುವಂತೆ ಹೇಳದೇ ಬಿಟ್ಟ ಮಾತುಗಳಲ್ಲೇ ಕಥೆ ಬೆಳೆಯುತ್ತಾ ಸಾಗುವುದು ಸೋಜಿಗವೇನೂ ಅಲ್ಲ. ಮೌನವೇ ಮಾತಿಗಿಂತ ಹೆಚ್ಚು ಅರ್ಥಕೊಡುವ ಸನ್ನಿವೇಶಗಳನ್ನು, ಸೂಕ್ಷ್ಮತೆಗಳನ್ನು ಕಥನಕಾರನ ದೃಷ್ಟಿಯಿಂದ ನೋಡಿದಾಗ ಪಾತ್ರಗಳ ಮನೋಭೂಮಿಕೆ ಎಂತಹುದೆಂಬುದು ತಿಳಿಯುತ್ತದೆ. ವಿಮರ್ಶಕನೂ ಕೃತಿಕಾರನ ಬೂಟುಗಳಲ್ಲಿ ತನ್ನ ಪಾದಗಳನ್ನು ಊರಿದಾಗ ಮಾತ್ರ ಆತನ ವಿಮಶರ್ೆಗೊಂದು ಅರ್ಥಬಂದೀತು. ಅದನ್ನು ಬಿಟ್ಟು ಕೂರಂಬುಗಳಂತಹ ಮಾತುಗಳಿಂದ ಚುಚ್ಚಿ, ಯಾವುದೋ ಪಂಥಕ್ಕೆ ಕಟ್ಟಿಹಾಕಿಸುವ ಹುನ್ನಾರ ಏನನ್ನೂ ಸಾಧಿಸಲಾರದು.
ಕಥೆಗಾರ ತನ್ನ ಮನೋಲಹರಿ ಬಂದಂತೆ ಏನನ್ನೋ ಒಂದಷ್ಟು ಕಲ್ಪಿಸಿ, ಕಥಾಹಂದರಕ್ಕಿಳಿಸಿ, ಸೂಕ್ತ ಮಾಧ್ಯಮದ ಮೂಲಕ ಪ್ರಕಟಿಸುವುದು ಸಾಮಾನ್ಯ. ಜನಮೆಚ್ಚುವಂತೆಯೇ ಬರೆಯಬೇಕೆಂಬ ಹಪಾಹಪಿಗೆ ಇಳಿದವರ ಯಶಸ್ಸು ಬಹಳಕಾಲ ಬಾಳದು. ತನ್ನ ಇಷ್ಟದ ರುಚಿಗಟ್ಟಿನ ತಿನಿಸನ್ನು ಉಣಬಡಿಸುವವನಿಗೆ ಯಾವಾಗಲೂ ಡಿಮ್ಯಾಂಡ್ ಇದ್ದದ್ದೇ. ಯಶಸ್ಸಿನ ಏರಿಳಿತದಲ್ಲಿ ಗಟ್ಟಿ ಸರಕು ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಳ್ಳುತ್ತದೆ. ಮಂಗಳೆ-ಜಯಕುಮಾರ್, ಇಳಾ-ವಿನಯ್ ಸಂಬಂಧಗಳ ಹಿಂದಿನ ಮತ್ತು ಮುಂದಿನ ಘಟನೆಗಳತ್ತಲೇ ಸುತ್ತಿಕೊಂಡಿರುವಂತೆ ತೋರುವ 'ಕವಲು' ಇವೇ ಸಂಬಂಧಗಳ ಕವಲುಗಳಲ್ಲೇ ಸಾಗುತ್ತಾ, ಅಲ್ಲಲ್ಲಿ ಮಿಂಚುವ ಮಾನವೀಯ ಎಳೆಗಳು, ತೋರಿಬರುವ ಭಯಾನಕ ಮುಖಗಳು, ಭೀಬತ್ಸ ದೃಶ್ಯಗಳು, ಸ್ವಾರ್ಥಸಾಧನೆಯೊಂದೇ ಗುರಿ ಎಂದು ಒದರಾಡುವ ಪಕ್ಷಪಾತಿಗಳು, ಮನೋರೋಗಿಗಳಂತೆನಿಸುವ ಎಡಬಡಂಗಿಗಳು, ಜೀವಕಳೆಯೇ ಇಲ್ಲದ ಕೀಲುಗೊಂಬೆಗಳು, ಮಹಾನಗರದಲ್ಲಿನ ದಿಬ್ಬಣದ ದೃಶ್ಯದಂತೆ ಸಾಗಿಹೋಗಿ ಮನರಂಜಿಸಿ ಮರೆಯಾಗಿಬಿಡುತ್ತವೆ. ಪಾತ್ರದ ತುಮುಲವನ್ನು ಅದರ ಭಾಷೆಯಲ್ಲಿಯೇ ವ್ಯಕ್ತಮಾಡುವುದು ಕಾದಂಬರಿಕಾರನ ಪ್ರಬದ್ಧತೆಗೆ ಸಾಕ್ಷಿಯಾಗುತ್ತದೆ. ಗಾಢವಾಗಿ ಕಾಡಲೇಬೇಕೆಂಬ ಮಾನವೀಯ ಪಾತ್ರಗಳ ಸೃಷ್ಟಿ ನಿಜಕ್ಕೂ ಕಷ್ಟವೇ. ಉರಿವ ಮನೆಯ ಗಳ ಹಿರಿಯುವ ಪೋಲೀಸ್, ವಕೀಲೆ, ಫ್ಯಾಕ್ಟರಿ ಕೆಲಸಗಾರರು, ಮಂಗಳೆ ಎಲ್ಲರೂ ಸ್ವಾಥರ್ಿಗಳೇ ಆದರೂ ಅವರಿಗೆ ಅದು ಅನಿವಾರ್ಯ. ಬೇರೆ ದಾರಿ ಏನಿತ್ತು ಅಲ್ಲಿ?
ಭೈರಪ್ಪನವರ ಇತರೆ ಕಾದಂಬರಿಗಳ ಹಿನ್ನೆಲೆಯಲ್ಲಿ, ಇತರೆ ಪಾತ್ರಗಳ ಬೆಳಕಿನಲ್ಲಿ 'ಕವಲು' ಕಾದಂಬರಿಯನ್ನು ನೋಡುವುದು ಸೂಕ್ತವಲ್ಲ. ಭೈರಪ್ಪನವರು ಕಾಲದೊಂದಿಗೇ ಮಾಗಿದ್ದಾರೆ. ಏಳುಬೀಳುಗಳನ್ನು ಕಂಡಿದ್ದಾರೆ. ಅವರ ಕೃತಿಯನ್ನು ಅವರ ವ್ಯಕ್ತಿತ್ವದ ಭಾಗವಾಗಿಯೋ, ನೆರಳಾಗಿಯೋ ನೋಡುವುದು, ಕೃತಿಕಾರನ ಯೋಚನೆಗಳೊಟ್ಟಿಗೇ ತುಲನೆಮಾಡುವುದು ಕೃತಿಗೆ ಮಾಡುವ ಅನ್ಯಾಯ. ಈಗಿನ ಸಮಾಜೋ-ಆಥರ್ಿಕ-ಸಾಂಸ್ಕೃತಿಕ ಪರಿಸರದಲ್ಲಿ ಹಳೆಯದೆಲ್ಲವನ್ನೂ ಬಿಟ್ಟ ಪ್ರಸ್ತುತ ಕೃತಿಕೇಂದ್ರಿತವಾದ ವಿಮಶರ್ೆ ಮಾತ್ರ ಯಾವುದೇ ಕೃತಿಗೆ ಕಾವ್ಯ ನ್ಯಾಯ ಒದಗಿಸಬಲ್ಲುದು. ಸಾಹಿತ್ಯ ಅಭ್ಯಾಸಿಗಳಿಗೆ 'ಪ್ರಾಯೋಗಿಕ ವಿಮಶರ್ೆಗೆ ಒದಗಿಸುವ ಕೃತಿಯಂತೆ' ಲೇಖಕನ ಹೆಸರಿನ ಹಂಗಿಲ್ಲದೇ, ಪೂವರ್ಾಗ್ರಹದ ಛಾಯೆಯಿಲ್ಲದೇ, ಶುದ್ಧ ಕೃತಿ ಕೇಂದ್ರಿತ ವಿಮಶರ್ೆ ಯಾವಾಗ ಬರುತ್ತದೆಯೋ ಆಗ ಲೇಖಕನ ಸೃಜನಶೀಲತೆಗೆ ಕಿರೀಟ ದೊರೆತೀತು. ಕೃತಿಕಾರನ ನೆರಳೇ ಗಾಢವಾಗಿ ಕೃತಿಯ ಮೇಲೆ ಬೀಳಿಸುವ, ಬೆಚ್ಚಿ ಬೀಳುವಂತೆ ವತರ್ಿಸುವ ವಿಮರ್ಶಕರಿಂದ ಕೃತಿಯ ವಿಮೋಚನೆ ಸಾಧ್ಯವಾಗುವ ದಿನಕ್ಕಾಗಿ ಎದುರುನೋಡುವ ಪರಿಸ್ಥಿತಿ ನಿಮರ್ಾಣವಾಗಿದೆ. ಭೈರಪ್ಪನವರ 'ಕವಲು' ಕಾದಂಬರಿಯನ್ನು ಕೇವಲ ಒಂದು ಕೃತಿ ಮಾತ್ರವಾಗಿ ಓದುವ ಮನಸ್ಥಿತಿಯವರು ಮಾತ್ರ ಅದನ್ನು ನಿಜವಾಗಿ ಅನುಭವಿಸಬಲ್ಲರು. ಅದರಲ್ಲಿನ ತುಮುಲ, ಸಂಚಲನೆಯನ್ನು ಅರ್ಥಮಾಡಿಕೊಳ್ಳಬಲ್ಲರು.
ಪ್ರಸ್ತುತ ಸಮಾಜದಲ್ಲೊಂದು ಸಂಚಲನವುಂಟುಮಾಡಿರುವ 'ಕವಲು' ಭೈರಪ್ಪನವರಿಗೆ ಇನ್ನಷ್ಟು ಕಸುವು ನೀಡಿ ಪ್ರಖರ ಕೃತಿಗಳನ್ನು ಬರೆಯಲು ಉತ್ಸಾಹತುಂಬಲಿ ಎಂದು ಹಾರೈಸೋಣ.


ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಟೀಚರ್ಸ್ ಕಾಲನಿ, ಚಿತ್ರದುರ್ಗ
ವಿಳಾಸ: ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ - ಫೋ: 9448589089