Wednesday, June 3, 2009

Valuable Books on Indian Tradition by Prof. Sreekanta Kumaraswamy - A Review by Bedre Manjunath

Author
Prof. Sreekantakumaraswamy
No. 93, 3rd West Main Road, ITI Layout, BSK 3rd Stage, Bangalore-560 085
Phone : 080-26691627
(Request to call after 10 a.m.)
Publisher
Aapastamba Prakashana
No.142/8, Nirvana Apartments, 5th West Main Road,
ITI Layout, BSK 3rd Stage, Bangalore-560 085
Phone : 080-26793230, Mobile: 9342813258
e-mail:
rkm_rudrapatna@yahoo.co.in
(Sri R K Murali)





Valuable Books on Indian Tradition
by Prof. Sreekanta Kumaraswamy
A Review by Bedre Manjunath
(To be published soon)


Here is a review published in http://thatskannada.oneindia.in/ by Dr Jivi Kulkarni, Mumbai.

http://thatskannada.oneindia.in/column/gv/2009/0620-scientist-veda-expert-rk-srikanthakumarswamy.html

ಸನಾತನ ವೇದಪಂಡಿತ ಆರ್.ಕೆ. ಶ್ರೀಕಂಠಕುಮಾರಸ್ವಾಮಿ

ಮದ್ರಾಸ್ ಐಐಟಿಯಿಂದ ಎಂಎಸ್ ಡಿಗ್ರಿ ಪಡೆದು ಲೋಹಶಾಸ್ತ್ರ ವಿಭಾಗದಲ್ಲಿ ದುಡಿದ ಹೆಮ್ಮೆಯ ಕನ್ನಡಿಗ ಆರ್.ಕೆ. ಶ್ರೀಕಂಠಕುಮಾರಸ್ವಾಮಿಯವರು ನಿವೃತ್ತಿಯ ನಂತರ ಗುರುಕುಲ ನಡೆಸುವ ಮುಖಾಂತರ ವೇದಶಿಕ್ಷಣ ನೀಡುತ್ತಿದ್ದಾರೆ. ಅವರು ಬರೆದಿರುವ 'ಸಂಸ್ಕಾರಗಳು ಹಾಗೂ ಮಾನವೀಯ ಮೌಲ್ಯಗಳು' ಪುಸ್ತಕದಲ್ಲಿ ಧಾರ್ಮಿಕ ಆಚರಣೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಕರ್ಣಾಟಕವು ಪ್ರತಿಭಾವಂತರ ನಾಡು ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಇದಕ್ಕೆ ಎಲ್ಲೆಡೆ ಉದಾಹರಣೆಗಳು ದೊರೆಯುತ್ತವೆ. ಗುರುತಿಸುವ ದೃಷ್ಟಿ ನಮ್ಮಲ್ಲಿರಬೇಕು. ಅಚ್ಚ ಕನ್ನಡಿಗರೂ ಬಹುಭಾಷಾ ವಿಶಾರದರೂ ಆದ ವೇದವಿದ್ವಾನ್ ಆರ್.ಕೆ. ಶ್ರೀಕಂಠಸ್ವಾಮಿಗಳು ಒಬ್ಬ ಅಪರೂಪದ ಜ್ಞಾನನಿಧಿ. ಎಂಭತ್ತು ವರ್ಷಗಳ ಈ ಮೇಧಾವಿ ಜನಿಸಿದ್ದು 6 ಮೇ, 1928. ಇಂದಿಗೂ ತಮ್ಮ ಶರೀರ ಹಾಗೂ ಶಾರೀರ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಬೆನ್ನು ಬಾಗಿಲ್ಲ, ಕೈಗೆ ಕೋಲು ಬಂದಿಲ್ಲ. ಮನೆಯಲ್ಲಿ ಗುರುಕುಲ ನಡೆಸುತ್ತಾರೆ. ಅಸ್ಖಲಿತ ಶ್ರೀಕಂಠದಿಂದ ವೇದಮಂತ್ರ ಪಠಿಸುವುದು, ಶಿಸ್ತುಬದ್ಧವಾದ ವೈದಿಕ ರೀತಿಯ ಜೀವನ ನಡೆಸುವುದು ಇವರ ಹೆಗ್ಗಳಿಕೆ. ಇವರ ಇನ್ನೊಂದು ವೈಶಿಷ್ಠ್ಯವೆಂದರೆ, ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ವಿದ್ಯಾರ್ಥಿನಿಯರಿಗೂ ವೇದ ಪಾಠ ಹೇಳಿಕೊಡುತ್ತಾರೆ, ಸ್ವತಃ ಮಗಳಿಗೆ, ಮೊಮ್ಮಗಳಿಗೆ ವೇದ ಮಂತ್ರ ಕಲಿಸಿದ್ದಾರೆ. ಇವರು ಮನೆಯಲ್ಲಿ ತಮ್ಮ ತಂದೆಯಿಂದ ವೇದ ಸಂಸರ ಪಡೆದರು. ಆದರೆ ಶಾಲೆ ಕಾಲೇಜುಗಳಲ್ಲಿ ವಿಜ್ಞಾನದ ವಿದ್ಯಾರ್ಥಿ. ಬಿ.ಎಸ್‌ಸಿ.ಯಲ್ಲಿ ವಿಶ್ವವಿದ್ಯಾಲಕ್ಕೆ ಎರಡನೆಯ ರ‌್ಯಾಂಕ್. ರಸಾಯನಶಾಸ್ತ್ರದಲ್ಲಿ ಸ್ವರ್ಣ ಪದಕ(1947). ವಾರಣಾಸಿಯಿಂದ ಇಂಜಿನಿಯರಿಂದ ಪದವಿ ಪಡೆದರು. ಮುಂದೆ ಐಐಟಿ ಮದ್ರಾಸಿನಿಂದ ಮೆಟಲರ್ಜಿಯಲ್ಲಿ(ಲೋಹಶಾಸ್ತ್ರ) ಎಂ.ಎಸ್.ಡಿಗ್ರಿ ಪಡೆದರು(1975). ಇವರು ಭದ್ರಾವತಿಯಲ್ಲಿ 13 ವರ್ಷ ಕೆಲಸಮಾಡಿದರು.(1952-65). ಮದ್ರಾಸಿನ ಐಐಟಿಯಲ್ಲಿ 23 ವರುಷ ಲೋಹಶಾಸ್ತ್ರವಿಭಾಗದಲ್ಲಿ ಪ್ರಾಧ್ಯಾಪಕರಾಗಿ ದುಡಿದರು.(1965-88). ತಮ್ಮ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಮೌಲಿಕ ಪ್ರಬಂಧಗಳನ್ನು ಬರೆದರು, ಪ್ರಕಟಿಸಿದರು.ಇವರ ಇನ್ನೊಂದು ಮುಖ ಬಹಳೇ ಸ್ವಾರಸ್ಯಕರವಾಗಿದೆ. ಇವರು ಯಜುರ್ವೇದವನ್ನೂ ಆಪಸ್ತಂಬಸೂತ್ರವನ್ನೂ ಪೂರ್ಣವಾಗಿ ಅಧ್ಯಯನ ಮಾಡಿದರು. ಸಂಸ್ಕೃತ ಇತಿಹಾಸ (ರಾಮಾಯಣ, ಮಹಾಭಾರತ), ಕಾವ್ಯ ನಾಟಕಗಳನ್ನು, ಭಾಗವತ ಉಪನಿಷತ್ತುಗಳನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದಲ್ಲದೆ ಸನಾತನ ಧರ್ಮವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದ್ದಾರೆ. ಪ್ರವಚನ, ಲೇಖನ ಹಾಗೂ ಪುಸ್ತಕಗಳಿಂದ ತಮ್ಮ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸಿದ್ದಾರೆ. ಇವರ ಪರಿಚಯ ಹಲವು ವರ್ಷಗಳ ಹಿಂದೆ. ಕೆ.ಆರ್.ಮೋಹನ ಎಂಬ ನನ್ನ ಮೈಸೂರು ಮಿತ್ರರ ಮುಖಾಂತರ ಆಯಿತು. ಅವರ ಪುಸ್ತಕ `ಹೃದಯ ಸಂಪನ್ನತೆಯನ್ನು ಓದಿದೆ, ಮೆಚ್ಚಿ ಅವರಿಗೆ ಬರೆದೆ. ನಮ್ಮ ಮುಂಬೈಯ ವೇದಪಂಡಿತರಾದ ಗುರುಸ್ವರೂಪರಾದ ಪಂ. ಮಾಹುಲಿ ಗೋಪಾಲಾಚಾರ್ಯರ ಬಗ್ಗೆ ಆ ಪುಸ್ತಕದಲ್ಲಿ ಒಂದು ಲೇಖನವಿತ್ತು. ಅದನ್ನು ನಾನು ಮೆಚ್ಚಿದ್ದೆ. ಅವರೊಂದಿಗೆ ಪತ್ರವ್ಯವಹಾರ ನಡೆಯಿತು. ಮೈಸೂರಿಗೆ ಹೋದಾಗ ಅವರ ಆತಿಥ್ಯ ಪಡೆದೆ. ಅವರ ಪ್ರವಚನ ಕೇಳಿದೆ. ಶ್ರಾದ್ಧಕರ್ಮದ ಬಗ್ಗೆ ಇಡೀ ದಿನ ಅವರು ನಡೆಸಿದ ಒಂದು ಕಮ್ಮಟದಲ್ಲಿ ಪಾಲುಗೊಳ್ಳುವ ಅವಕಾಶ ದೊರೆತಿತ್ತು. ಈಗ ಅವರು ಬೆಂಗಳೂರಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಕೂಡ ಯಥಾಪ್ರಕಾರ ಪಾಠಪ್ರವಚನದಲ್ಲಿ ಸದಾ ತೊಡಗಿರುತ್ತಾರೆ. ಅವರ ಇತ್ತೀಚಿನ ಗ್ರಂಥ ನನ್ನ ಕೈಸೇರಿತು. ಅದರ ಶೀರ್ಷಿಕೆ, "ಸಂಸ್ಕಾರಗಳು ಹಾಗೂ ಮಾನವೀಯ ಮೌಲ್ಯಗಳು". ಅದನ್ನು ಓದಿದೆ. ನಮಗೆ ಗೊತ್ತಿಲ್ಲದ ಅನೇಕ ವಿಷಯ ಅದರಲ್ಲಿವೆ. ಮೂಢ ಆಚರಣೆಗಳಾವವು? ಶಾಸ್ತ್ರಕ್ಕೆ ಅನುಗುಣವಾಗಿ ನಡೆಯಬೇಕಾದವು ಯಾವವು? ಇವುಗಳ ಬಗ್ಗೆ ಆಧಾರ ಸಹಿತವಾಗಿ ಅವರು ವಿಶ್ಲೇಷಿಸಿದ್ದಾರೆ. ವಾಚಕರನ್ನು ಅಚ್ಚರಿಗೊಳಿಸುವ ಅನೇಕ ಸಂಗತಿಗಳು ಅವರ ಪುಸ್ತಕದಲ್ಲಿವೆ. ಅದರಲ್ಲಿ ಕೆಲವು ಮಹತ್ವದವುಗಳನ್ನು ಆರಿಸಿ ವಾಚಕರ ಗಮನಕ್ಕೆ ತರಬಯಸುವೆ. ಹೆಚ್ಚಿನ ವಿವರ ತಿಳಿಯಬೇಕೆನಿಸಿದರೆ ಅವರ ಪುಸ್ತಕವನ್ನು ಅವಶ್ಯವಾಗಿ ಓದಬೇಕು.ಷೋಡಶ ಸಂಸ್ಕಾರಗಳಲ್ಲಿ ಅತ್ಯಂತ ಮಹತ್ವದವುಗಳೆಂದರೆ ಉಪನಯನ ಹಾಗೂ ವಿವಾಹ. ಉಪನಯನ ವಾದಮೇಲೆ ದ್ವಿಜತ್ವ ಬರುತ್ತದೆ. ಎರಡನೆಯ ಜನ್ಮ. ಒಂದು ತಾಯಿಯ ಗರ್ಭದ ಜನನವಾದರೆ ಇನ್ನೊಂದು ಗುರುವಿನ ಕರುಣೆಯಿಂದ ವಿದ್ಯಾಭ್ಯಾಸ ಪ್ರಾರಂಭವಾಗುವ ಕಾಲ. ಇದು ಇನ್ನೊಂದು ಜನನಕ್ಕೆ ಕಾರಣವಾಗುತ್ತದೆ. ಉಪ= ಸಮೀಪ(ಹತ್ತಿರ), ನಯನಂ=ಕರೆದುಕೊಂಡು ಹೋಗುವುದು. ಉಪನಯನವು ವಿದ್ಯಾರ್ಜನೆ ಮಾಡಲು ಹೊರಟಿರುವವನಿಗೆ ಮಾಡುವ ವೇದೋಕ್ತ ಸಂಸ್ಕಾರ. ಉಪನಯನಕ್ಕೆ 8ನೆಯ ವಯಸ್ಸು ಯೋಗ್ಯ ಎಂದು ಹೆಚ್ಚಿನ ಋಷಿಗಳು ಹೇಳಿದರೆ ಆಪಸ್ತಂಬರು ಮಾತ್ರ ಗರ್ಭಾಷ್ಟಮೇಷು ಬ್ರಾಹ್ಮಣಮುಪನೀಯತ ಗರ್ಭದಿಂದ ಎಂಟನೆಯ ವರ್ಷ, ಎಂದರೆ ಏಳನೆಯ ವರ್ಷ ಉಪನಯನ ಮಾಡಬೇಕು ಎನ್ನುತ್ತಾರೆ. ಕ್ಷತ್ರಿಯನಿಗೆ 11ನೆಯ ವರ್ಷಕ್ಕೆ, ವೈಶ್ಯನಿಗೆ 12ನೆಯ ವರ್ಷಕ್ಕೆ ಉಪನಯನ ವಿಧಿ ಸೂಚಿಸಲಾಗಿದೆ. ಆಯಾ ವರ್ಷಗಳಲ್ಲಿ ಉಪನಯನ ಮಾಡಲು ಆಗದಿದ್ದರೆ 16ನೆಯ ವರ್ಷ ಕೂಡ ಪ್ರಾಯಶ್ಚಿತ್ತ ಮಾಡಿ ಈ ವಿಧಿಯನ್ನು ಪೂರೈಸಬಹುದು ಎನ್ನುತ್ತಾರೆ.* ಉಪನಯನ ಕಾಲ : (ಸಾಮಾನ್ಯವಾಗಿ ಯೋಗ್ಯ ಮುಹೂರ್ತ ಹುಡುಕುತ್ತಾರೆ, ಬಾಲಕನ ಗುರುಬಲ ನೋಡುತ್ತಾರೆ.) ಮುಹೂರ್ತಕ್ಕೆ ಜೋತಿಷಿಯ ಹತ್ತಿರ ಎಡತಾಕುವದನ್ನು ಬಿಟ್ಟು, ಉಪನಯನದ ಕರ್ಮಸ್ವರೂಪ, ಅವುಗಳಲ್ಲಿ ಉಪಯೋಗಿಸುವ ಮಂತ್ರ ತಾತ್ಪರ್ಯ, ಕ್ರಿಯೆಗಳ ಹಿನ್ನೆಲೆ ಇವುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಅದನ್ನು ಬಿಟ್ಟು ಜೋತಿಷಿ ಹೇಳಿದ ಯಾವುದೋ ಲಗ್ನದಲ್ಲಿ ಜನಿವಾರ ಹಾಕಿ ಸಾವಿತ್ರೀ ಉಪದೇಶ ಮಾಡಿಬಿಟ್ಟರೆ ಸಾಕು ಎಂದು ತಿಳಿದರೆ, ಅದಕ್ಕಿಂತ ಅಜ್ಞಾನ ಬೇರೆ ಇಲ್ಲ. `ಗುರುಬಲಭಾವೇಪಿ ಅಷ್ಟಮೇವರ್ಷೇ ವ್ರತ ಬಂಧಃ ಕಾರ್ಯಃ ಎಂದು ಧರ್ಮಸಿಂಧುಕಾರರು ಹೇಳುತ್ತಾರೆ.* ಉಪನಯನ ಯಾರು ಮಾಡಬೇಕು : ಆಪಸ್ತಂಬರ ಧರ್ಮ ಸೂತ್ರ (..ಅವಿದ್ವಾನ ಉಪನಯತೇ,) ``ವಿದ್ವಾಂಸನಲ್ಲದಿರುವವನು ಉಪನಯನ ಮಾಡಿದರೆ ಕತ್ತಲೆಯಿಂದ ಕತ್ತಲೆಗೇ ಹೋದಹಾಗೆ ಆಗುತ್ತದೆ. ಆದ್ದರಿಂದ ವೇದಾರ್ಥ ಶಾಸ್ತ್ರ ಸಂಪನ್ನನಾದ ಗುಣಸಂಪನ್ನನಾದವನಿಂದ ಸಂಸ್ಕಾರ ಮಾಡಿಸಬೇಕು.* ಉಪನಯನ ಪ್ರಯೋಗದ ಬಗ್ಗೆ ಸುಮಾರು 30 ಪುಟಗಳಲ್ಲಿ ವೇದಮಂತ್ರ ಹಾಗೂ ಅವುಗಳ ಅರ್ಥ ಸಹಿತವಾಗಿ ವಿವರಣೆ ನೀಡುತ್ತಾರೆ. ಉಪನಯನ ಸಂಸ್ಕಾರದಿಂದ ದ್ವಿಜನಾಗುವ ಬಗ್ಗೆ, `ಕರ್ಮಣಾಜಾಯತೇ ದ್ವಿಜಃ ಎಂಬುದರ ಬಗ್ಗೆ ವಿವರಿಸುತ್ತಾರೆ.* ಯಜ್ಞೋಪವೀತ ಎಂದರೆ ಜನಿವಾರವಲ್ಲ. ತೈತ್ತಿರೀಯ ಅರಣ್ಯಕದಲ್ಲಿ ಇದರ ಸ್ಪಷ್ಟ ವಿವರ ದೊರೆಯುತ್ತದೆ. ಯಜ್ಞೋಪವೀತವೆಂದರೆ ಕೃಷ್ಣಾಜಿನವನ್ನೋ, ವಸ್ತ್ರವನ್ನೋ, ಬಲಗಡೆಯಿಂದ ತೆಗೆದುಕೊಂಡು, ಬಲಗೈಯನ್ನು ಮೇಲಕ್ಕೆತ್ತಿ, ಅದರ ಕೆಳಗಿನಿಂದ ಎಡಗಡೆ ಹೆಗಲಿನ ಮೇಲೆ ಹಾಕಿಕೊಳ್ಳುವುದೇ ಯಜ್ಞೋಪವೀತ ಎಂದು ಶ್ರ್ರುತಿ ಹೇಳುತ್ತದೆ, ``ಯಜ್ಞೋಪವೀತಂ ನಾಮ ವಾಸೋವಿನ್ಯಾಸಃ.* ಭಿಕ್ಷೆ ಹಾಕುವುದು : ವಟುವಿಗೆ ತಾಯಿಯೇ ಮೊದಲ ಭಿಕ್ಷೆ ಹಾಕಬೇಕು. ಆಚಾರ್ಯರು ಉಪದೇಶದಲ್ಲಿ`ಭಿಕ್ಷಾಚಾರ್ಯಂ ಚರ ಎಂದು ಹೇಳುತ್ತಾರೆ. ಪ್ರಾಚೀನಕಾಲದಲ್ಲಿ ಗುರುಕುಲದ ವಿದ್ಯಾರ್ಥಿಗಳು ಊರಿನಲ್ಲಿ ಭಿಕ್ಷೆ ಬೇಡಿ, ಗುರುಗಳ ಮುಂದಿಟ್ಟು, ಅವರ ಅನುಜ್ಞೆಯಿಂದ ಸ್ವೀಕರಿಸುತ್ತಿದ್ದರು. ಹಿಂದೆ ತಕ್ಷಶಿಲಾ ವಿದ್ಯಾಲಯದಲ್ಲಿ 15000 ವಿದ್ಯಾರ್ಥಿಗಳಿದ್ದರು. ಅವರು ಭಿಕ್ಷಾನ್ನದಿಂದಲೇ ಊಟಮಾಡಬೇಕಾಗಿತ್ತಂತೆ. ರಾಜಪುತ್ರರು ಓದಲು ಬಂದಿದ್ದರೂ ಅವರೂ ಈ ನಿಯಮ ಪಾಲಿಸಬೇಕಾಗಿತ್ತು.* ಸಾಮೂಹಿಕ ಉಪನಯನ : ಇದರ ಬಗ್ಗೆ ವಿವರವಾಗಿ ಬರೆಯುತ್ತಾರೆ. ಮಧ್ಯಮವರ್ಗದವರು, ಬಡವರು, ವೆಚ್ಚಕ್ಕೆ ಹೆದರಿ ಉಪನಯನ ಸಂಸ್ಕಾರ ಮುಂದೆಹಾಕುತ್ತಾರೆ. ವೆಚ್ಚ ಉಳಿಸಲು ಸಾಮೂಹಿಕ ಉಪನಯನ ಪದ್ಧತಿ ಇತ್ತೀಚೆಗೆ ರೂಢವಾಗಿದೆ. (ಲೇಖಕರು ಐದು ಹೆಣ್ಣುಮಕ್ಕಳ ಮಧ್ಯೆ ಜನಿಸಿದ ಒಬ್ಬನೆ ಮಗನಾಗಿದ್ದರಿಂದ 8ನೆಯ ವರ್ಷಕ್ಕೆ ಚೆನ್ನಾಗಿ ಉಪನಯನ ಮಾಡಲು ಸಾಧ್ಯವಾಗದೆ, 13ನೆಯ ವಯಸ್ಸಿಗೆ ನಂಜನಗೂಡಿನಲ್ಲಿ ಮಾಡಿದ್ದು, ಹಣ ಉಳಿಸಲು ತಂಗಿಯರನ್ನೇ ಬಿಟ್ಟು ಹೋದ ಸ್ಥಿತಿಯ ಬಗ್ಗೆ ಬರೆಯುತ್ತಾರೆ.) ಸಾಮೂಹಿಕ ಉಪನಯನ ಒಂದು ರೀತಿಯ ಗೆಟ್-ಟು-ಗೆದರ್ ರೀತಿ ಆಗುತ್ತದೆ. ಇಲ್ಲಿ ಅಗ್ನಿಯನ್ನು ರಕ್ಷಣೆ ಮಾಡಿ, ಮೂರು ದಿನ ಕಾಪಾಡಿ, ಅಗ್ನಿಕಾರ್ಯ ಮಾಡಬೇಕೆಂಬುದು ಜನರಿಗೆ ಗೊತ್ತೇ ಇಲ್ಲ ಎಂಬುದನ್ನು ತಿಳಿಸುತ್ತಾರೆ. ಸಕಾಲಕ್ಕೆ ಕಡಿಮೆ ಖರ್ಚಿನಲ್ಲಿ ಶಾಸ್ತ್ರಸಮ್ಮತವಾಗಿ ಹೇಗೆ ಉಪನಯನ ನಡೆಸಬೇಕೆಂಬುದರ ಬಗ್ಗೆ ಬರೆಯುತ್ತಾರೆ.* ಕೆಲವರು ಚಿನ್ನದ ಹಾಗೂ ಬೆಳ್ಳಿಯ ಜನಿವಾರ ತೊಡಿಸುತ್ತಾರೆ. ವಿದ್ಯಾಭ್ಯಾಸ ಮಾಡಲು ಹೊರಟಿರುವ ಬ್ರಹ್ಮಚಾರಿಗೆ ಚಿನ್ನ ಬೆಳ್ಳಿಯ ಅಲಂಕಾರ ಏತಕ್ಕೆ? ಎನ್ನುತ್ತಾರೆ.* ಸಾವಿತ್ರೀ ಮಂತ್ರವೋ, ಗಾಯತ್ರಿಯೋ? ಸೂತ್ರಕಾರರೆಲ್ಲರೂ `ಸಾವಿತ್ರೀ ಶಬ್ದವನ್ನೇ ಬಳಸುತ್ತಾರೆ. `ಅಥ ಸಾವಿತ್ರೀಂ ಗಾಯತ್ರೀಂ ತ್ರಿರನ್ವಾಹ ಪಚ್ಛೋರ್ದರ್‍ಚಶೋನವಾನಂ(ಗಾಯತ್ರೀ ಛಂದಸ್ಸಿನಲ್ಲಿರುವ ಸಾವಿತ್ರೀ ಋಕ್ಕನ್ನು ಪಾದಪಾದವಾಗಿ, ಅರ್ಧಋಕ್ಕಾಗಿ, ಶ್ವಾಸಬಿಡದೆ, ಪೂರ್ತಿ ಹೇಳಬೇಕು) ಎಂದು ಶ್ರುತಿಯು ಹೇಳುತ್ತದೆ. ಉಪನಯನದಲ್ಲಿ ಉಪದೇಶ ಮಾಡುವುದು ಸಾವಿತ್ರೀ ಋಕ್ಕೇ. ಸವಿತೃದೇವತಾ ಪರವಾದ ಋಕ್ಕಿಗೆ ಸಾವಿತ್ರೀ ಎಂದು ಹೆಸರು. ಆ ಸಾವಿತ್ರೀ ಋಕ್ಕು ಗಾಯತ್ರೀ ಛಂದಸ್ಸಿನಲ್ಲಿದೆ. `ವಿಶ್ವಾಮಿತ್ರ ಋಷಿಃ, ಸವಿತಾ ದೇವತಾ, ಗಾಯತ್ರೀ ಛಂದಃ ಎಂದು ಹೇಳುತ್ತೇವೆ. `ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯಧೀಮಹಿ ಧಿಯೋಯೋನಃ ಪ್ರಚೋದಯಾತ್ ಎಂಬ ಪ್ರಸಿದ್ಧವಾದ ಸಾವಿತ್ರೀ ಮಂತ್ರಕ್ಕೆ ವಿಶ್ವಾಮಿತ್ರ ಋಷಿಗಳು ದ್ರಷ್ಟಾರರು. ಗಾಯತ್ರೀ ಛಂದೋಭಿಮಾನಿ ದೇವತೆ ಸ್ತ್ರೀಯಾಗಿದ್ದ್ದಾಳೆ. ಉಪನಯನ ಕಾಲದಲ್ಲಿ ಉಪದೇಶ ಮಾಡುವ ಸಾವಿತ್ರೀ ಮಂತ್ರ ದೇವತಾ ಸವಿತಾ ಪುರುಷ, ಸ್ತ್ರೀ ದೇವತೆಯಲ್ಲ.* ಸ್ತ್ರೀಯರಿಗೆ ಉಪನಯನ ಮಾಡಬಹುದೇ? ಲೇಖಕರ ಪ್ರಕಾರ ಧಾರಾಳವಾಗಿ ಮಾಡಬಹುದು. ವೇದವಿದ್ಯೆಯಾಗಲಿ, ಲೌಕಿಕ ವಿದ್ಯೆಯಾಗಲಿ, ಉಪನಯನ ಸಂಸ್ಕಾರವು ವಿದ್ಯಾರ್ಜನೆಗೆ ಪೋಷಕವೆಂದಾಗುವುದಾದರೆ, ಅದನ್ನು ಅವಶ್ಯವಾಗಿ ಅವರಿಗೂ ಮಾಡಬೇಕು. ರಾಮಾಯಣದಲ್ಲಿ ನಿದರ್ಶನಗಳಿವೆ. ರಾಮನು ತಾಯಿಯ ಅಂತಃಪುರಕ್ಕೆ ಪ್ರವೇಶ ಮಾಡಿದಾಗ, ಅಲ್ಲಿ ತಾಯಿಯು ಅಗ್ನಿಯಲ್ಲಿ ಹೋಮ ಮಾಡುತ್ತಿದ್ದುದನ್ನು ನೋಡಿದನು ಎಂಬ ವರ್ಣನೆ ಬರುತ್ತದೆ. ಹನುಮಂತನು ಅಶೋಕವನದಲ್ಲಿ ಸೀತೆಯನ್ನು ಹುಡುಕಲು ಹೋದಾಗ ಅಲ್ಲಿ ಸಣ್ಣ ನದಿ ಹರಿಯುತ್ತಿತ್ತು. ಸಂಧ್ಯಾಕಾಲವಾಗಿತ್ತು. ಸೀತೆ ಸಂಧ್ಯಾವಂದನೆ ಮಾಡಲು ನದೀತೀರಕ್ಕೆ ಬರುವಳು ಎಂದು ಯೋಚಿಸಿ ಮರದ ಮೇಲೆ ಕುಳಿತು ನಿರೀಕ್ಷಿಸಿದ. ಸ್ತ್ರೀಯರು ಹೋಮಹವನ, ಸಂಧ್ಯಾವಂದನೆ ಮಾಡುತ್ತಿದ್ದರು.* ಪ್ರಣಾಯಾಮ : ಯಾವ ಕರ್ಮಕ್ಕಾದರೂ ಮೊದಲು ಪ್ರಾಣಾಯಾಮ ಮಾಡಬೇಕು. ಪುರೋಹಿತರು ಮೂಗು ಹಿಡಿದುಕೊಳ್ಳಿ ಎನ್ನುತ್ತಾರೆ. ತಾವೇ `ಓಂ ಭೂಃ ಮಂತ್ರ ಅಂದುಬಿಡುತ್ತಾರೆ. ಇದು ಪ್ರಾಣಾಯಾಮವೇ? ಪ್ರಾಣಾಯಾಮವು ಅಷ್ಟಾಂಗ ಯೋಗದಲ್ಲಿ ನಾಲ್ಕನೆಯದು.(ಶ್ವಾಸ ಪ್ರಶ್ವಾಸಯೋಃ ಗತಿವಿಚ್ಛೇದಃ ಪ್ರಾಣಾಯಾಮಃ). ಇದರಿಂದ ಅಂತಃಕರಣ ಶುದ್ಧಿ, ದೇಹಶುದ್ಧಿ ಎರಡೂ ಉಂಟಾಗುತ್ತದೆ. ಉಸಿರು ಎಳೆದುಕೊಳ್ಳುವ ಪ್ರಕ್ರಿಯೆಗೆ ಪೂರಕ ಎಂತಲೂ, ನಿಲ್ಲಿಸುವುದಕ್ಕೆ ಕುಂಭಕ ಎಂತಲೂ, ಬಿಡುವ ಪ್ರಕ್ರಿಯೆಗೆ ರೇಚಕ ಎಂತಲೂ ಕರೆಯುತ್ತಾರೆ. ಆದರೆ ಸುಮ್ಮನೆ ಮೂಗು ಹಿಡಿದುಕೊಂಡು ಮಂತ್ರಪಠಣ ಮಾಡಿಬಿಟ್ಟರೆ ಪ್ರಾಣಾಯಾಮ ಆಗುವುದಿಲ್ಲ. ಅದನ್ನೆಲ್ಲ ಯೋಗಾಭ್ಯಾಸದಿಂದ ಕಲಿಯಬೇಕು.(ಸಂಸ್ಕಾರಗಳು ಹಾಗೂ ಮಾನವೀಯ ಮೌಲ್ಯಗಳು- ಆರ್.ಕೆ.ಶ್ರೀಕಂಠಕುಮಾರಸ್ವಾಮಿ, ಪುಟಗಳು 14+ 351, ಬೆಲೆ: ರೂ.250, ಪ್ರಕಾಶಕರು-ಆಪಸ್ತಂಬ ಪ್ರಕಾಶನ, ಬೆಂಗಳೂರು-85: ಪೋನ್ -080-26793230, ಸೆಲ್ - 9342813258)
Tags: rk srikanthakumarswamy, scientist, veda, religious rituals, humanity, gv kulkarni, kannada columnist, ಆರ್ಕೆ ಶ್ರೀಕಂಠಕುಮಾರಸ್ವಾಮಿ, ವಿಜ್ಞಾನಿ, ವೇದಪಂಡಿತ, ಲೋಹಶಾಸ್ತ್ರ, ಪುಸ್ತಕ ಪರಿಚಯ, ಜೀವಿ ಕುಲಕರ್ಣಿ.