Monday, March 23, 2009

Sting Operation - A Story on Bogus Sting Operations in the US

http://issuu.com/bedremanjunath/docs/sting_operation_-_a_story_on_bogus_sting_operation


Adventure - A Children's Novel by Bedre Manjunath published on http://issuu.com/bedremanjunath/docs/adventure_novel1

Humour - the essence of life - Symposium in Mayura Monthly April 2009




Book Review - Mateyaru Manyaragiddaga of Debiprasad Chattopadhyaya - Published in Suddigiduga Daily - 23-03-2009


23-03-2009
ಕೃಷಿ ಆವಿಷ್ಕರಿಸಿ ತುತ್ತಿನ ಚೀಲ ತುಂಬಿಸಿದ ಅನ್ನದಾತೆಯರು
ಕೃತಿ : ಮಾತೆಯರು ಮಾನ್ಯರಾಗಿದ್ದಾಗ
ಬಂಗಾಳಿ ಲೇಖಕರು : ದೇವಿಪ್ರಸಾದ್ ಚಟ್ಟೋಪಾಧ್ಯಾಯ
ಕನ್ನಡ ಅನುವಾದ : ಜಿ. ಕುಮಾರಪ್ಪ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಟಗಳು : 56 ಬೆಲೆ : ರೂ. 20-00

'ಮಾತೆಯರು ಅನ್ನಪೂರ್ಣೆಯರು' ಎಂದು ಬಾಯಿತುಂಬಾ ಹರಸಿದ್ದನ್ನು ಕೇಳಿದಾಗ 'ಬರೀ ಶಿಷ್ಟಾಚಾರದ ಮಾತು ಇದು' ಎಂದು ಉಪೇಕ್ಷೆ ಮಾಡುವವರೇ ಬಹಳ. ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರದ ದೃಷ್ಟಿಯಿಂದ ಇತಿಹಾಸವನ್ನು ಕೆದಕಿದಾಗ ನಾಗರೀಕತೆಯ ಉಗಮಕ್ಕೂ ಮುಂಚಿನಿಂದಲೂ ಮಾತೆಯರೇ ಅನ್ನ ನೀಡುವ ಪವಿತ್ರ ಕಾರ್ಯ ಮಾಡುತ್ತಿದ್ದುದಷ್ಟೇ ಅಲ್ಲ ಧಾನ್ಯಗಳನ್ನು ಬೆಳೆಯುವ ಅದ್ಭುತವನ್ನು ಆವಿಷ್ಕರಿಸಿದ ಪರಿಸರ ವಿಜ್ಞಾನಿಗಳು ಎಂಬ ಅಂಶವೂ ಗಮನಕ್ಕೆ ಬರುತ್ತದೆ. ವಿಶ್ವ ಮಹಿಳಾ ದಿನ ಆಚರಿಸುವ ವೇದಿಕೆಗಳಲ್ಲಿ ಆದಿ ಮಾತೆಯರು ಜಗತ್ತಿಗೆ ನೀಡಿದ ಅಪರೂಪದ ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಉಚಿತ, ಅಲ್ಲವೇ?

'ಕೃಷಿ ಕಾರ್ಯ ಸ್ತ್ರೀಯರ ಆವಿಷ್ಕಾರ. ಇದರ ಆವಿಷ್ಕಾರದ ಆರಂಭದ ದಿನಗಳಲ್ಲಿ ವ್ಯವಸಾಯದ ಕೆಲಸ ಪೂರ್ತಿಯಾಗಿ ಸ್ತ್ರೀಯರದ್ದೇ ಆಗಿದ್ದಿತು. ಈ ವಿಚಾರದಲ್ಲಿ ಗಂಡಸರ ಸಹಾಯ, ಪ್ರಯತ್ನ ಎಳ್ಳಷ್ಟೂ ಇರಲಿಲ್ಲ. ಗಂಡಸರು ಬೇಟೆಯನ್ನು ಅರಸುತ್ತಾ ಕಾಡಿನಲ್ಲಿ ಅಲೆಯುತ್ತಿದ್ದರು. ಸ್ತ್ರೀಯರು ವಾಸಸ್ಥಳದ ಸುತ್ತಮುತ್ತ ನೆಲ ಅಗೆದು ಧಾನ್ಯ ಬೆಳೆಯುವ ಪ್ರಯತ್ನ ಮಾಡುತ್ತಿದ್ದರು....ಕೃಷಿ ಕೆಲಸ ಸ್ತ್ರೀಯರಿಂದ ಆವಿಷ್ಕರಿಸಲ್ಪಟ್ಟಿದ್ದರೂ, ಎತ್ತುಗಳನ್ನು ಹೂಡಿ ನೇಗಿಲಿನಿಂದ ಉಳುಮೆ ಮಾಡಿ ದೊಡ್ಡ ಜಮೀನುಗಳ ವ್ಯವಸಾಯ ಆರಂಭವಾದ ಮೇಲೆ, ಸ್ತ್ರೀಯರ ಕೈಯಿಂದ ಇದು ಪುರುಷರ ಕೈಗೆ ಬಂದಿತು....' ಎಂದು ಹಲವಾರು ದಂತೆಕಥೆಗಳು, ಪುರಾವೆಗಳು ಮತ್ತು ಕ್ಷೇತ್ರ ಅಧ್ಯಯನದ ಆಧಾರದ ಮೇಲೆ ನಿರೂಪಿತವಾಗಿರುವ ಸತ್ಯವನ್ನು'ಮಾತೆಯರು ಮಾನ್ಯರಾಗಿದ್ದಾಗ' ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು. ಜಿ. ಕುಮಾರಪ್ಪ ಅವರು ಬೆಂಗಾಲಿಯಿಂದ ಕನ್ನಡಕ್ಕೆ ಅಷ್ಟೇ ಸಮರ್ಥವಾಗಿ ಅನುವಾದಿಸಿದ್ದಾರೆ.

'ಅಮೆರಿಕಾದಲ್ಲಿನ ಒಂದು ಆದಿವಾಸಿ ಗುಂಪಿನ ಹೆಸರು ಚೆರೋಕಿ. ಅವರ ಒಂದು ದಂತಕಥೆಯ ಪ್ರಕಾರ ಒಬ್ಬ ಸ್ತ್ರೀ ಅರಣ್ಯದಲ್ಲಿ ಮೊದಲು ಸಸ್ಯವನ್ನು ಹುಡುಕಿದಳು. ಸಾಯುವಾಗ ಆ ಸ್ತ್ರೀ ತಾನು ಸತ್ತಮೇಲೆ ತನ್ನ ದೇಹವನ್ನು ನೆಲದ ಮೇಲಿಂದ ಎಳೆದುಕೊಂಡು ಹೋಗಬೇಕೆಂದು ಹೇಳಿದ್ದಳು. ಅವಳ ದೇಹ ಎಲ್ಲೆಲ್ಲಿ ನೆಲವನ್ನು ಸ್ಪಶರ್ಿಸಿದ್ದಿತೋ ಅಲ್ಲೆಲ್ಲಾ ಬೆಳೆ ಸಮೃದ್ಧಿಯಾಗಿ ಬೆಳದಿದ್ದಿತು.' ಈ ಬಗೆಯ ದಂತಕಥೆಗಳು ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಪ್ರಚಲಿತವಾಗಿರುವುದನ್ನು ಸಂಗ್ರಹಿಸಿ ದಂತೆಕಥೆಗಳ ಕೋಶವನ್ನೇ ರಚಿಸಿರುವ ಸಂಶೋಧಕ ರಾಬಟರ್್ ಬ್ರಿಫಾಲ್ಟ್ ಅವರ ಕ್ಷೇತ್ರಕಾರ್ಯದ ಅನುಭವಗಳನ್ನು ಉಲ್ಲೇಖಿಸುತ್ತಾ ವಿಶ್ವದ ಎಲ್ಲೆಡೆಯೂ ಸ್ತ್ರೀಯರಿಂದ ಆಗಿರುವ ಹಲವು ಆವಿಷ್ಕಾರಗಳ ಸುದೀರ್ಘ ಪಟ್ಟಿಯನ್ನೇ ನೀಡುತ್ತಾರೆ ದೇಬಿಪ್ರಸಾದ್ ಚಟ್ಟೋಪಾಧ್ಯಾಯ. ಮಾತೃ ಪ್ರಧಾನ ನಾಗರಿಕ ಸಮುದಾಯದ ಉಗಮ ಮತ್ತು ಅದರ ಪರಿಣಾಮಗಳ ಬಗ್ಗೆ ಸಚಿತ್ರ ವಿವರಗಳ ಜೊತೆ ಕ್ರಮೇಣ ಪಿತೃಪ್ರಧಾನ ವ್ಯವಸ್ಥೆಯತ್ತ ನಡೆದ ಕಥೆಯನ್ನು ಕಟ್ಟಿಕೊಡುತ್ತದೆ ಈ ಕೃತಿ.

ಭಾರತದ ಈಶಾನ್ಯ ರಾಜ್ಯಗಳಲ್ಲಿ, ಅದರಲ್ಲೂ ಕಾಮರೂಪದ ಕಾಮಾಕ್ಷ ಪ್ರದೇಶದ ಮತ್ತು ಖಾಸಿ ಜನಾಂಗದಲ್ಲಿ ಇರುವ ಮಾತೃಪ್ರಧಾನ ವ್ಯವಸ್ಥೆಯ ನಿರೂಪಣೆ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಅಭ್ಯಾಸಿಗಳಿಗೆ ಅತ್ಯುಪಯುಕ್ತವಾಗಿದೆ. ಕೇರಳದ ಕೆಲವು ಜನಾಂಗಳಲ್ಲಿ, ಈಜಿಪ್ಟ್, ಸಿಂಧೂ ಬಯಲು, ರೋಮ್, ಅಮೆರಿಕದ ಕೆಲವು ಬುಡಕಟ್ಟುಗಳಲ್ಲಿ ಇರುವ ಮಾತೃಪ್ರಧಾನ ವ್ಯವಸ್ಥೆಯನ್ನು ಇಲ್ಲಿ ಪರಿಚಯಿಸಿದ್ದಾರೆ. 'ಭಾರತೀಯ ನಾಗರೀಕತೆಯ ಮೂಲದಲ್ಲಿ ಮಾತೃಪ್ರಧಾನ ಸಮಾಜದ ಇತಿಹಾಸವಿರುವ ಕಾರಣವು ಅಸ್ಪಷ್ಟವೇನೂ ಅಲ್ಲ. ಏಕೆಂದರೆ, ಸಾಧಾರಣವಾಗಿ ಈ ದೇಶದ ಜನರು ಪಶುಪಾಲನೆಯ ಮೇಲೆ ಅವಲಂಬಿತರಾಗಿಲ್ಲ; ಬದಲಾಗಿ, ವ್ಯವಸಾಯದ ಮೇಲೆ ಅವಲಂಬಿತರಾಗಿದ್ದಾರೆ. ಈ ಕೃಷಿ ಕಾರ್ಯ ಸ್ತ್ರೀಯರ ಆವಿಷ್ಕಾರ. ಕೃಷಿಕೆಲಸವನ್ನು ಅವಲಂಬಿಸಿ ಬೆಳೆದ ಸಮಾಜದಲ್ಲಿ ಸ್ತ್ರೀಯರೇ ಮುಖ್ಯರು, ತಾಯಂದಿರೇ ಮಾನ್ಯರು..........ಒಟ್ಟಂದದಲ್ಲಿ ಭಾರತೀಯ ನಾಗರಿಕತೆ ಎಂದು ಹೇಳುವಲ್ಲಿ ಅರ್ಥವಾಗುವ ಸಂಸ್ಕೃತಿಗಳು ಮಾತೃಪ್ರಧಾನ ಸಮಾಜದ ಗುರುತುಗಳಿಂದ ತುಂಬಿವೆ...........ಭಾರತೀಯ ನಾಗರಿಕತೆಯ ಇತಿಹಾಸವೆಂದು ಬರೆಯಲಾಗಿರುವ ಎಷ್ಟೋ ಇತಿಹಾಸ ಗ್ರಂಥಗಳಲ್ಲಿ ಈ ಮಾತೃಪ್ರಧಾನ ಸಮಾಜದ ಲಕ್ಷಣಗಳ ಬಗ್ಗೆ ಹೆಚ್ಚಿನ ಆಲೋಚನೆ ನಡೆದಿಲ್ಲ....' ಎಂದು ಭಾರತೀಯ ನಾಗರಿಕತೆಯ ಇತಿಹಾಸವನ್ನು ಹೊಸ ದೃಷ್ಟಿಕೋನದಿಂದ ನೋಡಲು, ಹೊಸ ಇತಿಹಾಸ ನಡೆಸಲು ಕರೆಕೊಡುವುದರೊಂದಿಗೆ ಈ ಕೃತಿ ಮುಕ್ತಾಯವಾಗುತ್ತದೆ. ಬಹುಶಃ ಜನ್ಮದಾತೆ, ಅನ್ನದಾತೆ, ಪ್ರಾಣದಾತೆ, ಜಗನ್ಮಾತೆ ಎಲ್ಲವೂ ಆಗಿರುವ ಸ್ತ್ರೀಯರು ಈಗ ಸಮಾನತೆಗಾಗಿ, ಸ್ವಾತಂತ್ರ್ಯಕ್ಕಾಗಿ, ಮೀಸಲಾತಿಗಾಗಿ, ತುತ್ತು ಅನ್ನಕ್ಕಾಗಿ ಬೊಗಸೆಯೊಡ್ಡುತ್ತಿರುವುದು ನವ ನಾಗರಿಕತೆಯ ಅವನತಿಗೆ ಸಾಕ್ಷಿಯಾಗುತ್ತಿದೆಯೇ

Saturday, March 14, 2009

Makkala Sahitya : Andu - Indu - Compilation of Essays on Children's Literature by T S Nagaraja Setty



ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತ ಒಂದು ಪಕ್ಷಿನೋಟ
ಕೃತಿ : ಮಕ್ಕಳ ಸಾಹಿತ್ಯ : ಅಂದು - ಇಂದು
ಲೇಖಕರು : ಟಿ.ಎಸ್. ನಾಗರಾಜ ಶೆಟ್ಟಿ ಮತ್ತು ಎಂ.ಜಿ. ಗೋವಿಂದರಾಜು
ಪ್ರಕಾಶಕರು : ನಿರ್ಮಲ ಪ್ರಕಾಶನ, ಗೋವಿನಪುರ ಬಡಾವಣೆ, ತಿಪಟೂರು
ಪುಟಗಳು : 8 + 48 ಬೆಲೆ : ರೂ. 50-00

ಮಕ್ಕಳ ಸಾಹಿತ್ಯ ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ದಿನಗಳಲ್ಲಿ ಮಕ್ಕಳಿಗಾಗಿ ಬರೆಯುವವರು 'ವೈಯಕ್ತಿಕವಾಗಿ ನಷ್ಟವಾದರೂ ಚಿಂತಿಲ್ಲ ಒಂದಷ್ಟು ಏನಾದರೂ ಮಾಡೋಣ' ಎಂಬ ಹಂಬಲದಿಂದ ಅಲ್ಲಲ್ಲಿ ಕೃತಿ ಪ್ರಕಟಣೆಯನ್ನು ಮಾಡುತ್ತಲೇ ಬಂದಿದ್ದಾರೆ. ಕಥೆ, ಕವನ, ಚುಟುಕ, ನಾಟಕ, ಚಿಣ್ಣರ ಕಥೆಗಳು ಹಾಗೋ ಹೀಗೋ ಖರ್ಚಾಗಬಹುದು. ಮಕ್ಕಳ ಬಗ್ಗೆ ಪ್ರಬಂಧ, ಸಂಶೋಧನಾ ಲೇಖನಗಳು ಪ್ರಕಟವಾಗುವುದು, ಪ್ರಕಟವಾದರೂ ಖgïಗುವುದು ಅನುಮಾನವೇ. ಆದರೂ ಒಳಗಿನ ತುಡಿತ, ಮಕ್ಕಳ ಸಾಹಿತ್ಯದ ದಾಖಲೀಕರಣ ಎಂಬ ಸೇವೆಯನ್ನು ಪ್ರಾಂಜಲವಾಗಿ ಮಾಡುವ ಕೆಲವರು ಅಲ್ಲಲ್ಲಿ ಇದ್ದಾರೆ. ಈ ಸಾಲಿಗೆ ತೀರಾ ಇತ್ತೀಚೆಗೆ ಸೇರ್ಪಡೆಯಾದ ತಿಪಟೂರಿನ ನಿರ್ಮಲ ಪುಸ್ತಕ ಮಾಲೆಯ 26ನೇ ಹೂ 'ಮಕ್ಕಳ ಸಾಹಿತ್ಯ : ಅಂದು - ಇಂದು'. 'ಕನ್ನಡದಲ್ಲಿ ಮಕ್ಕಳ ಸಾಹಿತ್ಯ' ಎಂಬ ಎಂ.ಜಿ. ಗೋವಿಂದರಾಜು ಅವರ ಬಹುಮಾನಿತ ಪ್ರಬಂಧ ಮತ್ತು 'ಕನ್ನಡದಲ್ಲಿ ಮಕ್ಕಳ ಸಾಹಿತ್ಯ : ಇಂದು' (ಸ್ವಾತಂತ್ರ್ಯೋತ್ತರ ಅವಧಿ) ಎಂಬ ಟಿ.ಎಸ್. ನಾಗರಾಜ ಶೆಟ್ಟಿಯವರ ಲೇಖನಗಳನ್ನು ಒಳಗೊಂಡ ಈ ಕೃತಿ ಕನ್ನಡದಲ್ಲಿರುವ ಮಕ್ಕಳ ಸಾಹಿತ್ಯ ಕೃತಿಗಳು, ಕೃತಿಕಾರರು ಮತ್ತು ಪ್ರಕಾಶನಗಳ ಪಕ್ಷಿನೋಟ ನೀಡುವಲ್ಲಿ ಯಶಸ್ವಿಯಾಗಿದೆ.

'ಕನ್ನಡದಲ್ಲಿ ಮಕ್ಕಳ ಸಾಹಿತ್ಯ' ಎಂಬ ಎಂ.ಜಿ. ಗೋವಿಂದರಾಜು ಅವರ ಸುದೀರ್ಘ ಪ್ರಬಂಧ 1977ರಲ್ಲಿ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ದಿ. ಶೇಷಮ್ಮ ಭಾಸ್ಕರರಾಯರ ದತ್ತಿನಿಧಿ ಪ್ರಬಂಧ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನ ಗಳಿಸಿತ್ತು. ದುರ್ಗಸಿಂಹನ ಕನ್ನಡ ಪಂಚತಂತ್ರ ಕೃತಿಯಿಂದ ಹಿಡಿದು ಸ್ವಾತಂತ್ರ್ಯ ಪೂರ್ವದ ಪ್ರಮುಖ ಮಕ್ಕಳ ಕೃತಿಗಳ ಕಿರುಚಿತ್ರಣ ನೀಡುವ ಈ ಪ್ರಬಂಧ ಅಂದಿನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಮಕ್ಕಳಿಗಾಗಿ ದುಡಿದವರ ಪರಿಚಯವನ್ನೂ ಮಾಡಿಕೊಡುತ್ತದೆ. ನವೋದಯ ಪಂಥದ ಅನೇಕ ಹಿರಿಯರು, ಪಂಜೆ ಮಂಗೇಶರಾಯರು, ಕುವೆಂಪು, ಜಿ.ಪಿ. ರಾಜರತ್ನಂ, ಹೊಯಿಸಳ, ದಿನಕರ ದೇಸಾಯಿ ಮೊದಲಾದವರು, ಮಕ್ಕಳಿಗಾಗಿ ಕಥನ ಕವನ, ಪದ್ಯಗಳು, ನಾಟಕ, ಕಥೆಗಳನ್ನು ರಚಿಸಿದ್ದು ಮಕ್ಕಳ ಮೇಲಿನ ಅವರ ಕಳಕಳಿಗೆ ಸಾಕ್ಷಿಯಾಗಿದ್ದರೆ, ಮಕ್ಕಳ ನಾಲಿಗೆಯ ಮೇಲೆ ಅವು ನಲಿದಾಡುತ್ತಿರುವುದು ಅವುಗಳ ಜನಪ್ರಿಯತೆ ತೋರಿಸಿದೆ. 1977ರವರೆಗೆ ಲಭ್ಯವಿದ್ದ ಮಾಹಿತಿಯನ್ನಷ್ಟೇ ಆಧರಿಸಿ ರಚಿಸಿದ ಪ್ರಬಂಧ ಕೇವಲ ಪರಿಚಯಾತ್ಮಕ ನೆಲೆಯಲ್ಲಿ ನಿಲ್ಲುತ್ತದೆ. ಮೂವತ್ತು ವರ್ಷಗಳ ನಂತರ ಪುಸ್ತಕ ರೂಪದಲ್ಲಿ ಬರುವಾಗ ಒಮ್ಮೆ ಪರಿಷ್ಕರಿಸಲ್ಪಡುವ ಅಗತ್ಯವಿತ್ತು. ಕನ್ನಡ ವಿಶ್ವಕೋಶದಲ್ಲಿ ಚೂರು ಇಣುಕಿದ್ದರೂ ಇನ್ನಷ್ಟು ಮಾಹಿತಿ ಸಿಗುತ್ತಿತ್ತು. ಕೇವಲ ದಾಖಲೆಗಾಗಿ ಮಾತ್ರ ಮೂಲ ಪ್ರಬಂಧವನ್ನು ಉಳಿಸಿಕೊಂಡು ಕೊನೆಯಲ್ಲಿ 'ಅಪ್ಡೇಟ್' ಎಂಬ ಪರಿಷ್ಕರಣ ಪುಟ ಸೇರಿಸಿದ್ದರೆ ಇನ್ನಷ್ಟು ಸಮಕಾಲೀನವಾಗುತ್ತಿತ್ತು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಹೈದರಾಬಾದ್ ಕನ್ನಡ, ಮುಂಬೈ ಕನ್ನಡದ ನೆಲದಲ್ಲಿ ಮಕ್ಕಳ ಸಾಹಿತ್ಯ ಬೇರೆ ಬೇರೆ ಪ್ರಭಾವಗಳಿಗೆ ಒಳಗಾದರೂ ಚೆನ್ನಾಗಿ ಬೆಳೆದು ಹೂ ಬಿಟ್ಟಿತ್ತು ಎನ್ನುವುದನ್ನು ದಾಖಲಿಸಲು ಅಂದಿನ ಮಾಹಿತಿ ಲಭ್ಯತೆಯ ಕೊರತೆ ಕಾರಣವಾಗಿದ್ದಿರಬಹುದು. ಆದರೆ ಮೂವತ್ತು ವರ್ಷಗಳ ನಂತರ ಮಾಹಿತಿ ಬೆರಳುಗಳ ತುದಿಯಲ್ಲಿ ಕುಣಿಯುತ್ತಿರುವಾಗ ಮೂಲಕ್ಕೆ ಒಂದಷ್ಟು ಪೂರಕವೂ ಪೋಷಕವೂ ಆಗುವ ಮಾಹಿತಿಯನ್ನು ಕಲೆಹಾಕುವುದು ಅಗತ್ಯವಾಗಿತ್ತು ಎನಿಸುತ್ತದೆ.

'ಕನ್ನಡದಲ್ಲಿ ಮಕ್ಕಳ ಸಾಹಿತ್ಯ : ಇಂದು' (ಸ್ವಾತಂತ್ರ್ಯೋತ್ತರ ಅವಧಿ) ಎಂಬ ಟಿ.ಎಸ್. ನಾಗರಾಜ ಶೆಟ್ಟಿಯವರ ಲೇಖನ 2007 ರವರೆಗೆ ಲಭ್ಯವಿರುವ ಮಾಹಿತಿಯ ಸಂಗ್ರಹದಂತಿದೆ. ಮಕ್ಕಳ ಸಾಹಿತಿಗಳ ಬೃಹತ್ ಕೋಶ ಸಿದ್ಧಪಡಿಸುತ್ತಿರುವ ನಾಗರಾಜ ಶೆಟ್ಟಿ ಅವರಲ್ಲಿ ನೂರಾರು ಮಕ್ಕಳ ಸಾಹಿತಿಗಳ ಮಾಹಿತಿ ಲಭ್ಯವಿದ್ದರೂ ಬಹುತೇಕ ಕೃತಿಗಳ ಮತ್ತು ಕೃತಿಕಾರರ ಹೆಸರು ಉಲ್ಲೇಖವಾಗಿಲ್ಲ. ಮಕ್ಕಳ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿರುವ ನೂರಾರು ಲೇಖಕರ ಒಂದಾದರೂ ಕೃತಿಯನ್ನು ಹೆಸರಿಸಬೇಕು ಎಂಬ ಆತುರದಲ್ಲಿ ಸುದೀರ್ಘ ಪಟ್ಟಿಯನ್ನಷ್ಟೇ ನೀಡಿದಂತಿದೆ. ವಿಮಶರ್ಾತ್ಮಕ ದೃಷ್ಟಿಕೋನದಿಂದ ಸಮಕಾಲೀನ ಮಕ್ಕಳ ಸಾಹಿತ್ಯ ಕೃತಿಗಳನ್ನು ಅವಲೋಕಿಸಿರುವ ಎನ್.ಎಸ್. ರಘುನಾಥ್, ಆನಂದ ಪಾಟೀಲರ ಹೇಳಿಕೆಗಳನ್ನು ಬಿಟ್ಟರೆ ತುಲನಾತ್ಮಕವಾಗಿ ಏನನ್ನೂ ಹೇಳಿಲ್ಲ.

'ಮಕ್ಕಳಿಗಾಗಿ ಮಾಹಿತಿ ಸಾಹಿತ್ಯ', 'ಸಾಹಸ ಸಾಹಿತ್ಯ' ಎಂಬ ವಿಶಿಷ್ಟ ಪ್ರಕಾರಗಳ ಜೊತೆ ಚಟುವಟಿಕೆಗಳಿಂದ ಕೂಡಿದ 'ಮಕ್ಕಳ ಶೈಕ್ಷಣಿಕ ಹಾಗೂ ವಿಜ್ಞಾನ ಸಾಹಿತ್ಯ' ಸಮೃದ್ಧವಾಗಿ ಬೆಳೆದಿದೆ. ಮಕ್ಕಳ ಪತ್ರಿಕೆಗಳಲ್ಲಿ ಮತ್ತು ಪ್ರಕಾಶನಗಳಲ್ಲಿ ಮಕ್ಕಳಿಗಾಗಿಯೇ ಹೊಸ ಚಟುವಟಿಕೆ ಆಧರಿತ ಪುಟಾಣಿ ಪುಸ್ತಕಗಳ ರಾಶಿಯೇ ಬಿದ್ದಿದೆ. ಅಂತರಜಾಲದಲ್ಲಿ 'ಪುಟಾಣಿಗಳ ಇ-ಪತ್ರಿಕೆಗಳು, ಶಾಲಾ ಗೋಡೆ ಪತ್ರಿಕೆ'ಗಳು, ಪ್ರಮುಖ ಪತ್ರಿಕೆಗಳ ಮಕ್ಕಳ ಪುರವಣಿಗಳು ಮಕ್ಕಳ ಸಾಹಿತ್ಯಕ್ಕೆ, ಮಕ್ಕಳೇ ರಚಿಸಿದ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳು, ಚಿಲಿಪಿಲಿ ಪ್ರಕಾಶನ ಮತ್ತು 'ಸಂಧ್ಯಾ' ಮಕ್ಕಳ ಪತ್ರಿಕೆ ಕೊಡಮಾಡುತ್ತಿರುವ ಮಕ್ಕಳ ಪ್ರಶಸ್ತಿಗಳ ವಿವರಗಳು ಇಲ್ಲದೆ ಈ ಕೃತಿ ಸೊರಗಿದೆ. ದೆಹಲಿಯ ರತನ್ ಟಾಟಾ ಫೌಂಡೇಶನ್ ನವರು ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತಂತೆ ಸಮಗ್ರವಾದ ಅಧ್ಯಯನವೊಂದನ್ನು ಕೈಗೆತ್ತಿಕೊಂಡಿದ್ದು ಇದುವರೆಗೆ ಲಭ್ಯವಿರುವ ಎಲ್ಲ ಮಾಹಿತಿ ಅದರಲ್ಲಿ ಅಡಕಗೊಳ್ಳಲಿದೆ. ಅಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕೊರತೆಗಳಿಂದ ಕೂಡಿರುವ ಕೃತಿಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಕನ್ನಡ ಮಕ್ಕಳ ಸಾಹಿತ್ಯದ ಪಾಲಿಗಿದೆ!
ಬೇದ್ರೆ ಮಂಜುನಾಥ

Opinion on Artist Stitch Chandrashekhar in Sudha Weekly 19-03-2009

Saturday, March 7, 2009

Festivals - Bharateeya Habbagala Vaishishtya - A Rare Book by Vidwan V.N. Bhat - Review by Bedre Manjunath



ಹಬ್ಬದೂಟದಷ್ಟೇ ರುಚಿಕಟ್ಟಾಗಿರುವ ಕೃತಿ

ಭಾರತೀಯ ಹಬ್ಬಗಳ ವೈಶಿಷ್ಟ್ಯ

ಲೇಖಕರು : ಪ್ರೊ. ವಿದ್ವಾನ್ ವಿ.ಎನ್. ಭಟ್

ಪ್ರಕಾಶಕರು : ವಿಶ್ವನಾಥ ಪ್ರಕಾಶನ, ಜ್ಞಾನದೀಪ, ಸಹ್ಯಾದ್ರಿ ನಗರ, ವಿನೋಬನಗರ, ಶಿವಮೊಗ್ಗ

ಪುಟಗಳು : 12 + 174 ಬೆಲೆ : ರೂ. 50-00

ಹಬ್ಬಗಳಿಲ್ಲದ ದಿನವೇ ಇಲ್ಲ ಭಾರತದಲ್ಲಿ! ಕಾಳಿದಾಸನೇ ಹೇಳಿಲ್ಲವೇ, 'ಉತ್ಸವಪ್ರಿಯಾಃಖಲು ಮನುಷ್ಯಾಃ' ಅಂತ! ಒಂದಲ್ಲಾ ಒಂದು ಹಬ್ಬ, ಹರಿದಿನ, ಹಿರಿದಿನ, ತೇರು, ಜಾತ್ರೆ, ಉತ್ಸವ, ಸಂಭ್ರಮದ ಯಾವುದೋ ಆಚರಣೆ ದಿನವೂ ಎಲ್ಲಿಯಾದರೂ ಇದ್ದೇ ಇರುತ್ತದೆ. 'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ' ಎಂದು ಬೇಂದ್ರೆಯವರು ಹಾಡಿದಂತೆ ಎಲ್ಲ ಹಬ್ಬಗಳೂ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಜಗತ್ತಿನ ಎಲ್ಲ ಧರ್ಮಗಳಿಗೆ ಸೇರಿರುವ ಜನರು ವಾಸವಾಗಿರುವ ಭಾರತದಲ್ಲಿ ಭಾವೈಕ್ಯತೆಯನ್ನು ಬೆಸೆಯುವ, ಕಹಿಯನ್ನು ಮರೆತು ಸಿಹಿಯನ್ನು ಮೆಲ್ಲುವ ಈ ಹಬ್ಬಗಳಿಗೆ ವಿಶೇಷ ಮಹತ್ವವಿದೆ.

ಬಹುಶ್ರುತ ವಿದ್ವಾಂಸರಾಗಿರುವ ಪ್ರೊ. ವಿ.ಎನ್. ಭಟ್ ಅವರ ಭಾರತೀಯ ಹಬ್ಬಗಳ ವೈಶಿಷ್ಟ್ಯ ಕೃತಿಯಲ್ಲಿ ಹಿಂದು, ಮಹಮ್ಮದೀಯ ಹಾಗೂ ಕ್ರಿಶ್ಚಿಯನ್ನರ ಹಬ್ಬಗಳ ಕಿರುಪರಿಚಯ ಹಾಗೂ ಆಚರಣೆಯ ವಿವರಗಳಿವೆ. ಡಾ. ಎ.ಎಸ್. ವೇಣುಗೋಪಾಲರಾವ್ ಅವರ ವಿಶ್ಲೇಷಣಾತ್ಮಕ ಮುನ್ನುಡಿ ಈ ಹಬ್ಬಗಳಿಗೆ ನುಡಿತೋರಣ ಕಟ್ಟಿದೆ. ಚೈತ್ರ ಮಾಸದ, ಹೊಸ ವರ್ಷದ ಆರಂಭ ಯುಗಾದಿಯ ಪಾಡ್ಯದಿಂದ ಹಿಡಿದು ಹುಣ್ಣಿಮೆ, ಅಮಾವಾಸ್ಯೆಗಳವರೆಗಿನ ಪ್ರತಿ ತಿಥಿಗೂ ಇರುವ ಹಬ್ಬಗಳು, ವಿಶೇಷ ಉತ್ಸವಗಳು, ಜಯಂತಿಗಳ ವಿವರಗಳು ಓದುಗರಲ್ಲಿ ಬೆರಗು ಹುಟ್ಟಿಸುತ್ತವೆ. 'ನಮ್ಮ ಒಳಿತಿಗಾಗಿ, ಸುಖ-ಸಂತೋಷಕ್ಕಾಗಿ, ಬಾಳಿನಲ್ಲಿ ಬದಲಾವಣೆಗಾಗಿ, ಸಾಧನೆಯಿಂದ ಸಿದ್ಧಿಯತ್ತ ಸಾಗುವುದಕ್ಕಾಗಿ, ಸಮಾಜ ಸಂಘಟನೆಗಾಗಿ, ಆತ್ಮೀಯರೊಂದಿಗೆ ಬೆರೆಯಲಿಕ್ಕಾಗಿ' ಆಚರಿಸುವ ಹಬ್ಬಗಳ ಸಂಭ್ರಮವೇ ಸಂಭ್ರಮ. ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಹೊಸಬಟ್ಟೆ ಉಡುವ, ರುಚಿಕಟ್ಟಾದ ಭೋಜನ ಸವಿಯುವ, ಪೂಜೆ, ಭಜನೆಗಳಲ್ಲಿ ಪಾಲ್ಗೊಳ್ಳುವ ಸಂತಸ ಎಲ್ಲವೂ ಉತ್ಸಾಹ ತುಂಬಿ, ಹಳೆಯ ನೋವು ಮರೆಸಿ, ಬಾಂಧವ್ಯದ ಕೊಂಡಿ ಕಳಚದಂತೆ ಮಾಡಿ, ಸಾಮುದಾಯಿಕ ಮನರಂಜನೆ, ದೈವಭಕ್ತಿ, ಭಾವೈಕ್ಯತೆ, ಮನಶ್ಯಾಂತಿ ಉಂಟುಮಾಡಿ, ಜೀವನಕ್ಕೆ ನವೋತ್ಸಾಹವನ್ನು ತಂದುಕೊಡುತ್ತದೆ.

ಯುಗಾದಿ ಪಾಡ್ಯ, ಭಾವ ಬಿದಿಗೆ, ಅಕ್ಕನ ತದಿಗೆ, ಅಕ್ಷಯ ತೃತೀಯಾ, ಗಣೇಶ ಚತುರ್ಥಿ, ನಾಗಪಂಚಮಿ, ಸುಬ್ರಹ್ಮಣ್ಯ ಷಷ್ಠಿ, ರಥಸಪ್ತಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀರಾಮ ನವಮಿ, ವಿಜಯ ದಶಮಿ, ಪ್ರಥಮ ಏಕಾದಶಿ, ಉತ್ಥಾನ ದ್ವಾದಶಿ, ಅನಂಗ ತ್ರಯೋದಶಿ, ಅನಂತ ಚತುರ್ದಶಿ, ನೂಲು ಹುಣ್ಣಿಮೆ (ರಕ್ಷಾಬಂಧನ), ಗುರುಪೂರ್ಣಿಮೆ, ಬುದ್ಧಪೂರ್ಣಿಮೆ, ಹೋಳಿ ಹುಣ್ಣಿಮೆ, ಮಹಾಲಯ ಅಮಾವಾಸ್ಯೆ, ನವರಾತ್ರಿ, ದೀಪಾವಳಿ, ದೀಪೋತ್ಸವ, ರಥೋತ್ಸವ, ಮಕರ ಸಂಕ್ರಾಂತಿ, ಮಹಾಶಿವರಾತ್ರಿ, ನರಸಿಂಹ ಜಯಂತಿ, ಹನುಮಜ್ಜಯಂತಿ, ಗೀತಾಜಯಂತಿ, ದತ್ತ ಜಯಂತಿ, ಮಹಾವೀರ ಜಯಂತಿ, ವರಮಹಾಲಕ್ಷ್ಮೀ ವ್ರತ, ಕ್ರಿಸ್ಮಸ್, ಮಹಮ್ಮದೀಯರ ಹಬ್ಬಗಳ ಆಚರಣೆಯ ಹಿನ್ನೆಲೆ, ವ್ರತ, ನಿಯಮ, ಪೂಜೆ, ಪದ್ಧತಿಗಳ ವಿವರಗಳ ಜೊತೆ ಇವುಗಳ ಸಾಮಾಜಿಕ, ವೈಜ್ಞಾನಿಕ, ಮಾನಸಿಕ ಹಾಗೂ ವೈದ್ಯಕೀಯ ದೃಷ್ಟಿಕೋನದ ವಿವರಗಳೂ ಇರುವುದರಿಂದ ಇದು ಎಲ್ಲರಿಗೂ ಪ್ರಸ್ತುತವಾಗಿದೆ.

'ವಿದ್ವಾನ್ ವಿಷ್ಣು ನರಸಿಂಹ ಭಟ್ ಅವರ ಭಾರತೀಯ ಹಬ್ಬಗಳ ವೈಶಿಷ್ಟ್ಯ ಕೃತಿ ಕನ್ನಡ ಆಸ್ತಿಕ ಪ್ರಪಂಚಕ್ಕೆ ಅತ್ಯಂತ ಉಪಯುಕ್ತ ಕೊಡುಗೆಯಾಗಿದೆ. ಆಸ್ತಿಕರು ವರ್ಷಂಪ್ರತಿ ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಿರುವ ಹಬ್ಬಗಳ ಅಂತರಂಗ-ಬಹಿರಂಗಗಳ ರೋಚಕ ಪರಿಚಯ ಇಲ್ಲಿಯ ಲೇಖನಗಳಲ್ಲಿವೆ. ಕೇವಲ ಕುರುಡು ಸಂಪ್ರದಾಯಗಳೆಂದೂ, ವ್ಯರ್ಥವೆಚ್ಚವೆಂದೂ ಸ್ವಯಂಘೋಷಿತ ಬುದ್ಧಿಜೀವಿಗಳು ಹೀಗಳೆಯುತ್ತಿರುವ ಹಬ್ಬ ಹರಿದಿನಗಳು, ನಿಜದಲ್ಲಿ ಎಂತಹ ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮಹತ್ವವನ್ನು ಪಡೆದಿವೆ ಎಂಬುದನ್ನು ಈ ಲೇಖನಗಳು ಮನದಟ್ಟು ಮಾಡಿಕೊಡುತ್ತವೆ. ತನ್ಮೂಲಕ ಆಸ್ತಿಕರ ಶ್ರದ್ಧಾ ಭಕ್ತಿಗಳನ್ನು ಬೆಳೆಸುತ್ತವೆ. ಮಾತ್ರವಲ್ಲದೆ ವಿಚಾರವಂತರೆಂಬುವರ ಕಣ್ಣುಗಳನ್ನೂ ತೆರೆಸುವಂತಿವೆ.....' ಎಂಬ ಡಾ. ಎ.ಎಸ್. ವೇಣುಗೋಪಲರಾಯರ ಮಾತುಗಳು ಈ ಕೃತಿಗೆ ಕಿರೀಟವಿಟ್ಟಂತಿವೆ.

ಇನ್ನೇನು ಯುಗಾದಿಯಿಂದ ಆರಂಭಿಸಿ ಹಬ್ಬಗಳ ಸಾಲು ಸಾಲೇ ನಿಲ್ಲುತ್ತಿರುವ ಈ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆಯಾ ಹಬ್ಬಗಳನ್ನು ಪರಿಚಯಿಸಿಕೊಳ್ಳಲು ಪ್ರೊ. ವಿ.ಎನ್. ಭಟ್ ಅವರ ಭಾರತೀಯ ಹಬ್ಬಗಳ ವೈಶಿಷ್ಟ್ಯ ಕೃತಿ ಖಂಡಿತಾ ನೆರವಾಗುತ್ತದೆ ಎನ್ನಬಹುದು.
ವಿದ್ವಾನ್ ವಿಷ್ಣು ನರಸಿಂಹ ಭಟ್ ಅವರ ವಿಳಾಸ:

ಪ್ರೊ. ವಿ.ಎನ್. ಭಟ್, ಜ್ಞಾನದೀಪ, ಸಹ್ಯಾದ್ರಿ ನಗರ, 3ನೇ ಮೇನ್, ವಿನೋಬನಗರ, ಶಿವಮೊಗ್ಗ - 577 504

ಫೋನ್: (08194) 248020 ಮೊಬೈಲ್: 9449475123

ಜನಪ್ರಿಯ ಕೃತಿಗಳು :

1. ಜ್ಞಾನ ದೀಪ - ನೂರೆಂಟು ಸೂಕ್ತಿಗಳ ಚಿಂತನ ಮಂಥನ - 6ನೇ ಮುದ್ರಣ

2. ಸುಜ್ಞಾನ ದೀಪ - ಐವತ್ತೊಂದು ನೀತಿ ಸಂಕಲನ ಮತ್ತು ವ್ಯಾಖ್ಯಾನ - 6ನೇ ಮುದ್ರಣ

3. ಶ್ರೀಶಂಕರ ಭಗವತ್ಪಾದರ ಸ್ತೋತ್ರ ವೈಭವ

4. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಔಚಿತ್ಯ ಸಿದ್ಧಾಂತ