Saturday, March 7, 2009

Festivals - Bharateeya Habbagala Vaishishtya - A Rare Book by Vidwan V.N. Bhat - Review by Bedre Manjunathಹಬ್ಬದೂಟದಷ್ಟೇ ರುಚಿಕಟ್ಟಾಗಿರುವ ಕೃತಿ

ಭಾರತೀಯ ಹಬ್ಬಗಳ ವೈಶಿಷ್ಟ್ಯ

ಲೇಖಕರು : ಪ್ರೊ. ವಿದ್ವಾನ್ ವಿ.ಎನ್. ಭಟ್

ಪ್ರಕಾಶಕರು : ವಿಶ್ವನಾಥ ಪ್ರಕಾಶನ, ಜ್ಞಾನದೀಪ, ಸಹ್ಯಾದ್ರಿ ನಗರ, ವಿನೋಬನಗರ, ಶಿವಮೊಗ್ಗ

ಪುಟಗಳು : 12 + 174 ಬೆಲೆ : ರೂ. 50-00

ಹಬ್ಬಗಳಿಲ್ಲದ ದಿನವೇ ಇಲ್ಲ ಭಾರತದಲ್ಲಿ! ಕಾಳಿದಾಸನೇ ಹೇಳಿಲ್ಲವೇ, 'ಉತ್ಸವಪ್ರಿಯಾಃಖಲು ಮನುಷ್ಯಾಃ' ಅಂತ! ಒಂದಲ್ಲಾ ಒಂದು ಹಬ್ಬ, ಹರಿದಿನ, ಹಿರಿದಿನ, ತೇರು, ಜಾತ್ರೆ, ಉತ್ಸವ, ಸಂಭ್ರಮದ ಯಾವುದೋ ಆಚರಣೆ ದಿನವೂ ಎಲ್ಲಿಯಾದರೂ ಇದ್ದೇ ಇರುತ್ತದೆ. 'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ' ಎಂದು ಬೇಂದ್ರೆಯವರು ಹಾಡಿದಂತೆ ಎಲ್ಲ ಹಬ್ಬಗಳೂ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಜಗತ್ತಿನ ಎಲ್ಲ ಧರ್ಮಗಳಿಗೆ ಸೇರಿರುವ ಜನರು ವಾಸವಾಗಿರುವ ಭಾರತದಲ್ಲಿ ಭಾವೈಕ್ಯತೆಯನ್ನು ಬೆಸೆಯುವ, ಕಹಿಯನ್ನು ಮರೆತು ಸಿಹಿಯನ್ನು ಮೆಲ್ಲುವ ಈ ಹಬ್ಬಗಳಿಗೆ ವಿಶೇಷ ಮಹತ್ವವಿದೆ.

ಬಹುಶ್ರುತ ವಿದ್ವಾಂಸರಾಗಿರುವ ಪ್ರೊ. ವಿ.ಎನ್. ಭಟ್ ಅವರ ಭಾರತೀಯ ಹಬ್ಬಗಳ ವೈಶಿಷ್ಟ್ಯ ಕೃತಿಯಲ್ಲಿ ಹಿಂದು, ಮಹಮ್ಮದೀಯ ಹಾಗೂ ಕ್ರಿಶ್ಚಿಯನ್ನರ ಹಬ್ಬಗಳ ಕಿರುಪರಿಚಯ ಹಾಗೂ ಆಚರಣೆಯ ವಿವರಗಳಿವೆ. ಡಾ. ಎ.ಎಸ್. ವೇಣುಗೋಪಾಲರಾವ್ ಅವರ ವಿಶ್ಲೇಷಣಾತ್ಮಕ ಮುನ್ನುಡಿ ಈ ಹಬ್ಬಗಳಿಗೆ ನುಡಿತೋರಣ ಕಟ್ಟಿದೆ. ಚೈತ್ರ ಮಾಸದ, ಹೊಸ ವರ್ಷದ ಆರಂಭ ಯುಗಾದಿಯ ಪಾಡ್ಯದಿಂದ ಹಿಡಿದು ಹುಣ್ಣಿಮೆ, ಅಮಾವಾಸ್ಯೆಗಳವರೆಗಿನ ಪ್ರತಿ ತಿಥಿಗೂ ಇರುವ ಹಬ್ಬಗಳು, ವಿಶೇಷ ಉತ್ಸವಗಳು, ಜಯಂತಿಗಳ ವಿವರಗಳು ಓದುಗರಲ್ಲಿ ಬೆರಗು ಹುಟ್ಟಿಸುತ್ತವೆ. 'ನಮ್ಮ ಒಳಿತಿಗಾಗಿ, ಸುಖ-ಸಂತೋಷಕ್ಕಾಗಿ, ಬಾಳಿನಲ್ಲಿ ಬದಲಾವಣೆಗಾಗಿ, ಸಾಧನೆಯಿಂದ ಸಿದ್ಧಿಯತ್ತ ಸಾಗುವುದಕ್ಕಾಗಿ, ಸಮಾಜ ಸಂಘಟನೆಗಾಗಿ, ಆತ್ಮೀಯರೊಂದಿಗೆ ಬೆರೆಯಲಿಕ್ಕಾಗಿ' ಆಚರಿಸುವ ಹಬ್ಬಗಳ ಸಂಭ್ರಮವೇ ಸಂಭ್ರಮ. ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಹೊಸಬಟ್ಟೆ ಉಡುವ, ರುಚಿಕಟ್ಟಾದ ಭೋಜನ ಸವಿಯುವ, ಪೂಜೆ, ಭಜನೆಗಳಲ್ಲಿ ಪಾಲ್ಗೊಳ್ಳುವ ಸಂತಸ ಎಲ್ಲವೂ ಉತ್ಸಾಹ ತುಂಬಿ, ಹಳೆಯ ನೋವು ಮರೆಸಿ, ಬಾಂಧವ್ಯದ ಕೊಂಡಿ ಕಳಚದಂತೆ ಮಾಡಿ, ಸಾಮುದಾಯಿಕ ಮನರಂಜನೆ, ದೈವಭಕ್ತಿ, ಭಾವೈಕ್ಯತೆ, ಮನಶ್ಯಾಂತಿ ಉಂಟುಮಾಡಿ, ಜೀವನಕ್ಕೆ ನವೋತ್ಸಾಹವನ್ನು ತಂದುಕೊಡುತ್ತದೆ.

ಯುಗಾದಿ ಪಾಡ್ಯ, ಭಾವ ಬಿದಿಗೆ, ಅಕ್ಕನ ತದಿಗೆ, ಅಕ್ಷಯ ತೃತೀಯಾ, ಗಣೇಶ ಚತುರ್ಥಿ, ನಾಗಪಂಚಮಿ, ಸುಬ್ರಹ್ಮಣ್ಯ ಷಷ್ಠಿ, ರಥಸಪ್ತಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀರಾಮ ನವಮಿ, ವಿಜಯ ದಶಮಿ, ಪ್ರಥಮ ಏಕಾದಶಿ, ಉತ್ಥಾನ ದ್ವಾದಶಿ, ಅನಂಗ ತ್ರಯೋದಶಿ, ಅನಂತ ಚತುರ್ದಶಿ, ನೂಲು ಹುಣ್ಣಿಮೆ (ರಕ್ಷಾಬಂಧನ), ಗುರುಪೂರ್ಣಿಮೆ, ಬುದ್ಧಪೂರ್ಣಿಮೆ, ಹೋಳಿ ಹುಣ್ಣಿಮೆ, ಮಹಾಲಯ ಅಮಾವಾಸ್ಯೆ, ನವರಾತ್ರಿ, ದೀಪಾವಳಿ, ದೀಪೋತ್ಸವ, ರಥೋತ್ಸವ, ಮಕರ ಸಂಕ್ರಾಂತಿ, ಮಹಾಶಿವರಾತ್ರಿ, ನರಸಿಂಹ ಜಯಂತಿ, ಹನುಮಜ್ಜಯಂತಿ, ಗೀತಾಜಯಂತಿ, ದತ್ತ ಜಯಂತಿ, ಮಹಾವೀರ ಜಯಂತಿ, ವರಮಹಾಲಕ್ಷ್ಮೀ ವ್ರತ, ಕ್ರಿಸ್ಮಸ್, ಮಹಮ್ಮದೀಯರ ಹಬ್ಬಗಳ ಆಚರಣೆಯ ಹಿನ್ನೆಲೆ, ವ್ರತ, ನಿಯಮ, ಪೂಜೆ, ಪದ್ಧತಿಗಳ ವಿವರಗಳ ಜೊತೆ ಇವುಗಳ ಸಾಮಾಜಿಕ, ವೈಜ್ಞಾನಿಕ, ಮಾನಸಿಕ ಹಾಗೂ ವೈದ್ಯಕೀಯ ದೃಷ್ಟಿಕೋನದ ವಿವರಗಳೂ ಇರುವುದರಿಂದ ಇದು ಎಲ್ಲರಿಗೂ ಪ್ರಸ್ತುತವಾಗಿದೆ.

'ವಿದ್ವಾನ್ ವಿಷ್ಣು ನರಸಿಂಹ ಭಟ್ ಅವರ ಭಾರತೀಯ ಹಬ್ಬಗಳ ವೈಶಿಷ್ಟ್ಯ ಕೃತಿ ಕನ್ನಡ ಆಸ್ತಿಕ ಪ್ರಪಂಚಕ್ಕೆ ಅತ್ಯಂತ ಉಪಯುಕ್ತ ಕೊಡುಗೆಯಾಗಿದೆ. ಆಸ್ತಿಕರು ವರ್ಷಂಪ್ರತಿ ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಿರುವ ಹಬ್ಬಗಳ ಅಂತರಂಗ-ಬಹಿರಂಗಗಳ ರೋಚಕ ಪರಿಚಯ ಇಲ್ಲಿಯ ಲೇಖನಗಳಲ್ಲಿವೆ. ಕೇವಲ ಕುರುಡು ಸಂಪ್ರದಾಯಗಳೆಂದೂ, ವ್ಯರ್ಥವೆಚ್ಚವೆಂದೂ ಸ್ವಯಂಘೋಷಿತ ಬುದ್ಧಿಜೀವಿಗಳು ಹೀಗಳೆಯುತ್ತಿರುವ ಹಬ್ಬ ಹರಿದಿನಗಳು, ನಿಜದಲ್ಲಿ ಎಂತಹ ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮಹತ್ವವನ್ನು ಪಡೆದಿವೆ ಎಂಬುದನ್ನು ಈ ಲೇಖನಗಳು ಮನದಟ್ಟು ಮಾಡಿಕೊಡುತ್ತವೆ. ತನ್ಮೂಲಕ ಆಸ್ತಿಕರ ಶ್ರದ್ಧಾ ಭಕ್ತಿಗಳನ್ನು ಬೆಳೆಸುತ್ತವೆ. ಮಾತ್ರವಲ್ಲದೆ ವಿಚಾರವಂತರೆಂಬುವರ ಕಣ್ಣುಗಳನ್ನೂ ತೆರೆಸುವಂತಿವೆ.....' ಎಂಬ ಡಾ. ಎ.ಎಸ್. ವೇಣುಗೋಪಲರಾಯರ ಮಾತುಗಳು ಈ ಕೃತಿಗೆ ಕಿರೀಟವಿಟ್ಟಂತಿವೆ.

ಇನ್ನೇನು ಯುಗಾದಿಯಿಂದ ಆರಂಭಿಸಿ ಹಬ್ಬಗಳ ಸಾಲು ಸಾಲೇ ನಿಲ್ಲುತ್ತಿರುವ ಈ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆಯಾ ಹಬ್ಬಗಳನ್ನು ಪರಿಚಯಿಸಿಕೊಳ್ಳಲು ಪ್ರೊ. ವಿ.ಎನ್. ಭಟ್ ಅವರ ಭಾರತೀಯ ಹಬ್ಬಗಳ ವೈಶಿಷ್ಟ್ಯ ಕೃತಿ ಖಂಡಿತಾ ನೆರವಾಗುತ್ತದೆ ಎನ್ನಬಹುದು.
ವಿದ್ವಾನ್ ವಿಷ್ಣು ನರಸಿಂಹ ಭಟ್ ಅವರ ವಿಳಾಸ:

ಪ್ರೊ. ವಿ.ಎನ್. ಭಟ್, ಜ್ಞಾನದೀಪ, ಸಹ್ಯಾದ್ರಿ ನಗರ, 3ನೇ ಮೇನ್, ವಿನೋಬನಗರ, ಶಿವಮೊಗ್ಗ - 577 504

ಫೋನ್: (08194) 248020 ಮೊಬೈಲ್: 9449475123

ಜನಪ್ರಿಯ ಕೃತಿಗಳು :

1. ಜ್ಞಾನ ದೀಪ - ನೂರೆಂಟು ಸೂಕ್ತಿಗಳ ಚಿಂತನ ಮಂಥನ - 6ನೇ ಮುದ್ರಣ

2. ಸುಜ್ಞಾನ ದೀಪ - ಐವತ್ತೊಂದು ನೀತಿ ಸಂಕಲನ ಮತ್ತು ವ್ಯಾಖ್ಯಾನ - 6ನೇ ಮುದ್ರಣ

3. ಶ್ರೀಶಂಕರ ಭಗವತ್ಪಾದರ ಸ್ತೋತ್ರ ವೈಭವ

4. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಔಚಿತ್ಯ ಸಿದ್ಧಾಂತ

No comments: