Tuesday, July 20, 2010

Children's Literature - Three Books by Thammanna Beegar



Here are three books by Sri Thammanna Beegar, Cartoonist and Writer. These are very useful for children and teachers. A review in Kannada by Bedre Manjunath is here:

ಶಿಕ್ಷಕ, ವ್ಯಂಗ್ಯಚಿತ್ರಕಾರ, ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರರ
ಮಕ್ಕಳ ಸಾಹಿತ್ಯ ಕೃತಿಗಳು

ಜಿಂಕೆಮರಿ (ಮಕ್ಕಳ ಕಥೆಗಳು)
ಜೀಕ್ ಜೀಕ್ (ಮಕ್ಕಳ ಕವನ ಸಂಕಲನ)
ಪುಟಾಣಿ ಪುಡಿಕೆ (ಸಚಿತ್ರ ಮಕ್ಕಳ ಕವನ ಸಂಕಲನ)

ಲೇಖಕರು: ತಮ್ಮಣ್ಣ ಬೀಗಾರ
(9480474629)
ಪ್ರಕಾಶಕರು: ಉದಯ ಪ್ರಕಾಶನ, ಬೆಂಗಳೂರು.

ಮಕ್ಕಳ ಸಾಹಿತ್ಯ ಕನ್ನಡದಲ್ಲಿ ಜನಪ್ರಿಯವಾಗುತ್ತಿರುವುದು ಬಹುತೇಕ ಶಿಕ್ಷಕರಿಂದ ಎಂಬ ಮಾತು ಪ್ರಚಲಿತವಿದೆ. ಬಹುತೇಕ ಉತ್ತರ ಕನರ್ಾಟಕದ ಮಕ್ಕಳ ಸಾಹಿತಿಗಳು ವೃತ್ತಿಯಲ್ಲಿ ಶಿಕ್ಷಕರಾಗಿರುವುದು ಇದಕ್ಕೆ ಕಾರಣವಿರಬಹುದು. ಶಿಕ್ಷಕರಿಗೆ ಮಕ್ಕಳೊಂದಿಗೆ ಇರುವ ಒಡನಾಟವೇ ಸಾಂದಭರ್ಿಕ ಸಾಹಿತ್ಯ ಸೃಷ್ಟಿಗೆ ನಾಂದಿ ಹಾಡುತ್ತದೆ. ಯಾವ ಶಿಕ್ಷಕ ನಗುಮುಖದಿಂದ ಮಕ್ಕಳೊಂದಿಗೆ ನಲಿಯುತ್ತಾ ಕಲಿಸುತ್ತಾನೋ ಆತನ ಕಲಿಕೆಯ ವಾತಾವರಣವೇ ಶಿಶುಸ್ನೇಹಿಯಾಗಿ ಮಾರ್ಪಟ್ಟು ಉತ್ತಮೋತ್ತಮ ಪದ್ಯ, ಕಥೆ, ಚಿತ್ರ, ಚಟುವಟಿಕೆಗಳಾಗಿ ಹೊರಹೊಮ್ಮುತ್ತವೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹೊಸೂರಿನಲ್ಲಿರುವ ವ್ಯಂಗ್ಯಚಿತ್ರಕಾರ ಹಾಗೂ ಶಿಕ್ಷಕ ತಮ್ಮಣ್ಣ ಬೀಗಾರ ಮಕ್ಕಳ ಜೊತೆ ನಡೆಸಿದ ಆಟ-ಪಾಠವೇ ಬರಹಕ್ಕಿಳಿದು ಆರೇಳು ಕೃತಿಗಳಾಗಿ ಹೊರಹೊಮ್ಮಿವೆ.
'ಮುಗ್ಧ ಮನಸ್ಸಿಗೆ ಮುದ ನೀಡುವ ಮುಕ್ತಕಗಳು' ಎಂದು ಡಾ. ಸೈಯದ್ ಜéಮೀರುಲ್ಲಾ ಷರೀಫ್ರಿಂದ ಮುಕ್ತವಾಗಿ ಹೊಗಳಿಸಿಕೊಂಡ ಸಚಿತ್ರ ಮಕ್ಕಳ ಕವನ ಸಂಕಲನ 'ಪುಟಾಣಿ ಪುಡಿಕೆ', 'ಶುದ್ಧವಾದ ಭಾಷೆ, ಶುದ್ಧವಾದ ಲಯ; ಆರೋಗ್ಯವಂತ ದೃಷ್ಟಿಕೋನ, ಮಕ್ಕಳಿಗೆ ಪ್ರಿಯವಾಗಬಹುದಾದ ಪ್ರಾಣಿಪಕ್ಷಿ ಪ್ರಪಂಚ' ಎಂದು ಎಚ್.ಎಸ್. ವೆಂಕಟೇಶಮೂತರ್ಿ ಅವರಿಂದ ಶಹಬ್ಬಾಸ್ಗಿರಿ ಗಿಟ್ಟಿಸಿರುವ ಮಕ್ಕಳ ಕವನ ಸಂಕಲನ 'ಜೀಕ್ ಜೀಕ್', 'ಮಕ್ಕಳ ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಉತ್ಸಾಹ, ಸಹಸ್ಪಂದನ, ಮೌಲ್ಯ ಕಲ್ಪನೆ, ಬದುಕಿನಲ್ಲಿ ಭರವಸೆ, ಬದಲಾವಣೆಗೆ ಹೊಂದಿಕೊಳ್ಳುವ ಶಕ್ತಿ ಮೊದಲಾದ ಅಂಶಗಳನ್ನು ಒಳ್ಳೆಯ ಕಥೆಗಳ ಮೂಲಕ ಬಿತ್ತಲು ಸಾಧ್ಯ' ಎಂಬ ಎನ್. ಶ್ರೀನಿವಾಸ ಉಡುಪ ಅವರ ನಲ್ನುಡಿಯನ್ನು ಹೊಂದಿರುವ ಸಚಿತ್ರ ಮಕ್ಕಳ ಕಥಾ ಸಂಕಲನ 'ಜಿಂಕೆಮರಿ' ಇವು ತಮ್ಮಣ್ಣ ಬೀಗಾರರ ಸೃಜನಶೀಲತೆಗೆ ಸಾಕ್ಷಿಯಾಗಿವೆ.
'ಕಡಲೆಕಾಳು, ಶೇಂಗಾಬೀಜಾನೆಲ್ಲಾ ಕುರುಕುರು ತಿಂತೀರಲ್ಲಾ ಹಾಗೇ ಹಾಡನ್ನು ಬಾಯಿ ತೆರೆದು ಹಾಡ್ತಾ ಹೋಗಲು' ಪ್ರೇರೇಪಿಸುವ ಪುಟಾಣಿ ಪುಡಿಕೆ ಸಂಕಲನದಲ್ಲಿ 52 ಪುಟ್ಟ ಮತ್ತು ದೊಡ್ಡ ಪದ್ಯಗಳಿವೆ. (ಪುಟಗಳು: 72, ಬೆಲೆ: ರೂ. 60/-) ಶಿಶುಗೀತೆಗಳೇ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಈ ಪುಟಾಣಿ ಪುಡಿಕೆಗಳು ಮಕ್ಕಳನ್ನು ಆಕಷರ್ಿಸುವಲ್ಲಿ ಅನುಮಾನವಿಲ್ಲ. ಬಾಯ್ದೆರೆ ಆಟಗಳನ್ನು ಆಡಿಸುವ ಸಂದರ್ಭಗಳಲ್ಲಿ, ಹಾಡಿನ ಬಂಡಿ, ಪದಗಳ ಬಂಡಿ ಹೇಳಿಸುವಾಗ ಈ ಪುಟ್ಟ ಪದ್ಯಗಳನ್ನು ಬಳಸಿಕೊಳ್ಳಬಹುದು. ಆಟ, ಓಟ, ಊಟ, ಕಾಟ, ತುಂಟಾಟ, ಚಳಿ, ಮೊದಲಾದ ಮಕ್ಕಳ ಸಹಜ ಮನೋವೃತ್ತಿಯನ್ನು, ಸ್ವಾತಂತ್ರ್ಯಪ್ರಿಯತೆಯನ್ನು ತೋರಿಸುವ ಪದ್ಯಗಳೇ ಸಾಕಷ್ಟಿವೆ. ಶಿಕ್ಷಕರು ಮತ್ತು ಪೋಷಕರು ಪ್ರೀತಿಯಿಂದ ತೆಗೆಸಿಕೊಟ್ಟರೆ ಮಕ್ಕಳು ಖಂಡಿತಾ ಓದುತ್ತಾರೆ.
'ಜೀಕ್ ಜೀಕ್' ಸಂಕಲನದಲ್ಲಿನ 32 ಪದ್ಯಗಳಲ್ಲಿ ಪ್ರಾಣಿ, ಪಕ್ಷಿ, ತಿಂಡಿ, ಮಳೆ, ಕತೆ ಎಲ್ಲವೂ ಇವೆ. ಕವಿ ಎಚ್.ಎಸ್. ವೆಂಕಟೇಶ ಮೂತರ್ಿಯವರ ಪದ್ಯಗಳ ಗಾಢಛಾಯೆ ಅಲ್ಲಲ್ಲಿ ಇಣುಕಿದೆ. (ಪುಟಗಳು: 56, ಬೆಲೆ: ರೂ. 40/-) ಪದ್ಯಗಳಾಗಿ ಹಾಡಿಸಲು ಪ್ರಾಸ ಇರಲೇಬೇಕೆಂಬ ಹಠತೊಟ್ಟು ಬರೆಯಲು ಹೋದಂತಿದೆ. ತಿಂಡಿ ಪ್ರಾಸಗಳು ಎಂಬ ಪುಟ್ಟ ಪದ್ಯಗಳಲ್ಲಿನ 'ಪುರಿ' ಎಂಬುದು ಪೂರಿ ಎಂಬ ತಿಂಡಿಗೆ ಸಂಬಂಧಿಸಿದ್ದು ಬಹುಶಃ ಕಣ್ತಪ್ಪಿನಿಂದ 'ಪುರಿ' ಎಂದಾಗಿದೆಯೇ? ಗೊತ್ತಿಲ್ಲ. ಪುರಿ - ಕಡಲೆ ಪುರಿ, ಮಂಡಕ್ಕಿ, ಪೂರಿ - ಮೈದಾ ಮತ್ತು ಗೋಧಿ ಹಿಟ್ಟಿನಿಂದ ಮಾಡಿ ಎಣ್ಣೆಯಲ್ಲಿ ಕರಿದ ತಿಂಡಿ. ಇದು 'ಪುರಿ'ಯೋ 'ಪೂರಿ'ಯೋ ಮಕ್ಕಳಿಗೆ ಬಗೆಹರಿಯದ ಸಮಸ್ಯೆ!
'ಹೀಗೊಂದು ಮದುವೆ' ಪದ್ಯದಲ್ಲಿ 'ಸೂರ್ಯಗೆ ಚಂದಿರ ಹೆಂಡತಿ ಎಂದು ಮಕ್ಕಳ ನಗುವು ಹರೆಯುತ್ತೆ' ಎಂಬ ಕಲ್ಪನೆ ಇದೆ. ಗ್ರೀಕ್ ಮತ್ತು ರೋಮನ್ ಪುರಾಣಗಳಲ್ಲಿ ಸೂರ್ಯ ಗಂಡು ಮತ್ತು ಚಂದಿರ (ಲೂನಾ) ಹೆಣ್ಣು. ಹಾಗಾಗಿ ಚಂದಿರನನ್ನು 'ಷಿ'(ಆಕೆ) ಎಂದೇ ಕರೆದ ಇಂಗ್ಲಿಷ್ ಪದ್ಯಗಳನ್ನು ಕಲಿಯುವ ಕನ್ನಡದ ಮಕ್ಕಳಿಗೆ ಚಂದಾಮಾಮನನ್ನು ಹೆಣ್ಣಾಗಿ ಕಲ್ಪಿಸಿಕೊಳ್ಳುವುದು ಕಷ್ಟ! ಮಕ್ಕಳಿಗಾಗಿ ಬರೆಯುವಾಗ ಪಾಶ್ಚಾತ್ಯ ಸಾಹಿತಿಗಳು ಅಗಾಧಪ್ರಮಾಣದ ಸಂಶೋಧನೆ, ಸರಳ ಭಾಷಾ ಪ್ರಯೋಗಗಳನ್ನು ನಡೆಸಿದ ನಂತರವಷ್ಟೇ ಬರೆಯುತ್ತಾರಂತೆ. ನಮ್ಮಲ್ಲಿ ಆ ಪರಿಶ್ರಮ, ಪ್ರತಿಫಲ ಎರಡೂ ಕಡಿಮೆಯೇ!
ಶಾಲೆ, ಹಳ್ಳಿ, ಗುಡ್ಡ, ಕಣಿವೆ, ಕಾಡು, ಜನಪದದ ಪರಿಸರಕ್ಕೆ ಹೊಂದಿಕೊಂಡಂತೆ, ಯಾವುದೇ ರಾಜ-ರಾಣಿ-ಗುಲಾಮರ ಗೋಜಿಲ್ಲದಂತೆ, ಬದಲಾಗುತ್ತಿರುವ ಮಾನವರ ಧೋರಣೆಗಳು, ಸ್ವಾರ್ಥ, ದ್ರೋಹಚಿಂತನೆಗಳ ಮಧ್ಯೆಯೂ ಅಲ್ಲಲ್ಲಿ ಇಣುಕುವ ಮಾನವೀಯತೆ, ಕಕ್ಕುಲತೆ, ಸಹಾಯ ಮಾಡುವ ಪ್ರವೃತ್ತಿಗಳನ್ನು ಚಿಕ್ಕ ಚೊಕ್ಕ 15 ಕಥೆಗಳ ಮೂಲಕ ಮಕ್ಕಳನ್ನು ತಲುಪುವ ಪ್ರಯತ್ನವೇ ಜಿಂಕೆ ಮರಿ - ಮಕ್ಕಳ ಕಥಾ ಸಂಕಲನ. (ಪುಟಗಳು: 92, ಬೆಲೆ: ರೂ. 65/-) ಎನ್. ಶ್ರೀನಿವಾಸ ಉಡುಪ ಅವರ ಅಚ್ಚುಕಟ್ಟಾದ ವಿಮಶರ್ಾತ್ಮಕ ನಲ್ನುಡಿ ಕಥಾಸಂಕಲನದ ಆಶಯವನ್ನು ಹಿಡಿದಿಟ್ಟಿದೆ. ಒಂದೊಂದು ಕಥೆಯೂ ಒಂದೊಂದು ಮೌಲ್ಯವನ್ನು, ಸಾಹಸವನ್ನು, ಪರಿಸರಪ್ರೇಮವನ್ನು ವ್ಯಕ್ತಪಡಿಸುತ್ತದೆ. ಇಲ್ಲಿನ ಕಥೆ ಪುಟ್ಟ ಪುಟಾಣಿಯಿಂದ ಹಿಡಿದು ಹೈಸ್ಕೂಲ್ವರೆಗಿನ ಮಗುವನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿರುವುದರಿಂದ ಅಲ್ಲಲ್ಲಿ ಭಾಷೆಯ ಬಳಕೆಯಲ್ಲಿ ವ್ಯತ್ಯಾಸ ತೋರುತ್ತದೆ. ನಿರೂಪಕನಾಗಿ ದೊಡ್ಡವರು ಓದಿ ಮಕ್ಕಳಿಗೆ ಹೇಳುವಂತೆ ರಚಿತವಾಗಿದ್ದರೆ ಭಾಷೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಮೇಯವಿರುವುದಿಲ್ಲ. ಆದರೆ ಮಕ್ಕಳೇ ಓದುವಂತೆ, ಅವರ ಕೈಗೆ ಕೊಡುವಾಗ ಪ್ರತಿಯೊಂದು ಪದವೂ ಸುಲಭ-ಕಠಿಣ ಎನ್ನುವ ಪರುಷಮಣಿಯನ್ನು ಹಾಯ್ದುಬರಬೇಕಾಗುತ್ತದೆ. ಬಹುತೇಕ ಮಕ್ಕಳ ಕಥೆಗಾರರು ಈ ಅಂಶದ ಕಡೆಗೆ ಗಮನಕೊಡಬೇಕಾದ ಅಗತ್ಯವಿದೆ.
ಒಟ್ಟಿನಲ್ಲಿ ತಮ್ಮಣ್ಣ ಬೀಗಾರರ ಕಥೆ, ಕವನ, ಮುಕ್ತಕಗಳು ಮುದ್ದಾಗಿವೆ. ಇನ್ನಷ್ಟು ಪರಿಶ್ರಮ ಮತ್ತು ಪರಿಷ್ಕಾರದಿಂದ ಅತ್ಯುತ್ತಮ ಕೃತಿಗಳು ಹೊರಬರುವ ಎಲ್ಲ ಸಾಧ್ಯತೆಗಳು ಈ ಕೃತಿಗಳಲ್ಲಿ ವ್ಯಕ್ತವಾಗಿವೆ. ಶಿಕ್ಷಕರು ಮತ್ತು ಮಕ್ಕಳ ಕೈಗೆ ತಮ್ಮಣ್ಣ ಬೀಗಾರರ ಈ ಕೃತಿಗಳು ಸಿಕ್ಕು ಅವರ ಬಾಯಲ್ಲಿ ಪದ್ಯಗಳು ನಲಿದಾಡಲಿ, ಕತೆಗಳು ಚಿಟ್ಟೆಗಳಂತೆ ಹಾರಾಡಲಿ.

ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಟೀಚರ್ಸ್ ಕಾಲನಿ, ಚಿತ್ರದುರ್ಗ
ವಿಳಾಸ: ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ - ಫೋ: 9448589089